ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಭೂಮಿ ಪ್ರಕರಣಗಳು, ಆರ್ಟಿಸಿ ಕೋರ್ಟ್ ಹಾಗೂ ವ್ಯಾಜ್ಯ ಪ್ರಕರಣಗಳನ್ನು ಶೀಘ್ರವೇ ವಿಲೇವಾರಿ ಮಾಡಿ ತಂತ್ರಾಂಶದಲ್ಲಿ ದಾಖಲಿಸುವಂತೆ ಸಂಬಂಧಿತ ತಹಶೀಲ್ದಾರ್ರಿಗೆ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಹಾಗೂ ಇತರೆ ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ನಿಗದಿತ ಸಮಯದಲ್ಲಿಯೇ ಬೆಳೆ ಸಮೀಕ್ಷೆ ಕೈಗೊಳ್ಳಬೇಕು. ಆಗ ಮಾತ್ರ ರೈತರು ಬೆಳೆವಿಮೆ ಕ್ಲೈಮ್ ಮಾಡಲು ಅನುಕೂಲವಾಗುತ್ತದೆ. ಋತುವಿನ ಪ್ರತಿಕೂಲಗಳಿಂದ ತಡೆಗಟ್ಟುವ ಬಿತ್ತನೆ ಕುರಿತು ತಾಲೂಕು ಮಟ್ಟದ ಕೃಷಿ ಅಧಿಕಾರಿಗಳ ಸಭೆ ಮಾಡಿ ರೈತರ, ಮುಖಂಡರ ಅಭಿಪ್ರಾಯ ತೆಗೆದುಕೊಂಡು ಬಳಿಕ ಜಿಲ್ಲಾ ಮಟ್ಟದ ಸಭೆ ನಡೆಸಲಾಗುವುದು. ಈ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು” ಎಂದು ತಿಳಿಸಿದರು.
ಭೂಮಿ ವರ್ಗೀಕರಣ ಪ್ರಕ್ರಿಯೆಗೆ ಸಂಬಂಧಿಸಿದಂತೆ ಭೂ ದಾಖಲೆ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ಕೈಗೊಳ್ಳಬೇಕು. ರೆಜಿಸ್ಟ್ರಾರ್ ಹಂತದಲ್ಲಿ ಆರ್ಟಿಸಿ ಪ್ರಕರಣಗಳು ಇತ್ಯರ್ಥಗೊಳ್ಳಬೇಕು. ಉಪವಿಭಾಗಾಧಿಕಾರಿಗಳ ಹಾಗೂ ತಹಶೀಲ್ದಾರರ ಹಂತದಲ್ಲಿನ ವಿವಿಧ ಕೋರ್ಟ್ ಪ್ರಕರಣಗಳ ಇತ್ಯರ್ಥಕ್ಕೆ ಸೂಕ್ತ ಕ್ರಮ ವಹಿಸುವಂತೆ” ಸಲಹೆ ಮಾಡಿದರು.
“ಆಯಾ ಇಲಾಖೆಯ ಯೋಜನೆಗೆ ಸಂಬಂಧಿಸಿದ ತಂತ್ರಾಂಶದಲ್ಲಿ ಸ್ವೀಕೃತವಾದ ಅರ್ಜಿಗಳಿಗೆ ಸಂಬಂಧಿತ ಇಲಾಖೆ ಅಧಿಕಾರಿಗಳು ಖುದ್ದಾಗಿ ತಾವೇ ಲಾಗಿನ್ ಆಗಿ ಮರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು” ಎಂದರು.
“ಭೂಮಿ ಯೋಜನೆಗೆ ಸಂಬಂಧಿಸಿದಂತೆ 2023 ಅಗಸ್ಟ್ ತಿಂಗಳಲ್ಲಿ 1,150 ಅರ್ಜಿಗಳು ಸೇರಿದಂತೆ ಒಟ್ಟಾರೆ 1586 ಅರ್ಜಿಗಳು ಸ್ವೀಕೃತಗೊಂಡಿವೆ. 871 ಅರ್ಜಿಗಳು ಇತ್ಯರ್ಥಗೊಂಡಿದ್ದು, 715 ಅರ್ಜಿಗಳು ಬಾಕಿ ಇವೆ. ತಹಶೀಲ್ದಾರರ ಹಂತದಲ್ಲಿ 161 ನ್ಯಾಯಾಲಯ ಪ್ರಕರಣಗಳು ಬಾಕಿ ಇವೆ. ಜಿಲ್ಲಾಧಿಕಾರಿಗಳ ಹಂತದಲ್ಲಿ ಕೋರ್ಟ್ ಪ್ರಕರಣಗಳು ಶೇ.83 ರಷ್ಟು ಇತ್ಯರ್ಥಗೊಂಡಿವೆ. ಆರ್ಟಿಸಿ ಮಿಸ್ ಮ್ಯಾಚ್/ ಎಲ್ಆರ್ಎಫ್ ಪೋಡಿ ಪ್ರಕರಣಗಳಿಗೆ ಸಂಬಂಧಿಸಿದಂತೆ 717 ಪ್ರಕರಣಗಳ ಪೈಕಿ 366 ಪ್ರಕರಣಗಳು ಇತ್ಯಥಗೊಂಡಿವೆ. 2023-24 ನೇ ಸಾಲಿನ ಮೇ ಅಂತ್ಯದವರೆಗೆ ಜಿಲ್ಲೆಯ 7 ಉಪನೊಂದಣಿ ಕಚೇರಿಗಳಿಂದ 6595 ದಸ್ತಾವೇಜುಗಳಿಗೆ 9,53,04,448 ರೂ.ರಾಜಸ್ವ ಸಂಗ್ರಹಿಸಲಾಗಿದೆ. ನೂತನ ಕಾವೇರಿ 2.0 ತಂತ್ರಾಂಶಕ್ಕೆ ಸಂಬಂಧಿಸಿದಂತೆ ಜಿಲ್ಲೆಯ 7 ಉಪನೊಂದಣಿ ಕಚೇರಿಗಳಲ್ಲಿ ಸಾರ್ವಜನಿಕರು ಈವರೆಗೂ ಪರಿಶೀಲನೆಗೆ ಆನ್ಲೈನ್ನಲ್ಲಿ ಉಪನೊಂದಣಾಧಿಕಾರಿಗಳಿಗೆ 5285 ದಸ್ತಾವೇಜುಗಳನ್ನು ಸಲ್ಲಿಸಿದ್ದು, ಉಪನೊಂದಣಾಧಿಕಾರಿಗಳು ದಸ್ತಾವೇಜುಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ತಿದ್ದುಪಡಿಗಾಗಿ 1812 ದಸ್ತಾವೇಜುಗಳನ್ನು ಹಿಂತಿರುಗಿಸಿದ್ದಾರೆ. ಉಪನೊಂದಣಾಧಿಕಾರಿಗಳಿಂದ ದಸ್ತಾವೇಜುಗಳನ್ನು ಪರಿಶೀಲಿಸಿ ಶುಲ್ಕಗಳ ಪಾವತಿಗೆ ಸಾರ್ವಜನಿಕರಿಗೆ 3670 ಹಿಂದಿರುಗಿಸಲಾಗಿದೆ. ದಸ್ತಾವೇಜುಗಳ ಪರಿಶೀಲನೆಯ ನಂತರ ಶುಲ್ಕ ಪಾವತಿಸಿ ಉಪನೊಂದಣಾದಿಕಾರಿಗಳ ಕಚೇರಿಯಲ್ಲಿ 4109 ದಸ್ತಾವೇಜುಗಳನ್ನು ನೊಂದಣಿ ಮಾಡಿಸಲಾಗಿದೆ” ಎಂದು ಸಭೆಯಲ್ಲಿ ಆಯಾ ಇಲಾಖಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಂದ್ರಯಾನ-3 ಲ್ಯಾಂಡರ್ ಸ್ಥಳಕ್ಕೆ ‘ಶಿವಶಕ್ತಿ’ ಎಂಬ ಹೆಸರು: ಪ್ರಧಾನಿ ಮೋದಿ ಘೋಷಣೆ
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ತೋಟಗಾರಿಕೆ ಇಲಾಖೆ ಉಪನಿರ್ದೆಶಕ ಶಶಿಕಾಂತ, ಸಂಖ್ಯಾ ಸಂಗ್ರಹಣಾಧಿಕಾರಿ ಎ ಎ ಕಂಬಾಳಿಮಠ, ಭೂ ದಾಖಲೆಗಳ ಇಲಾಖೆಯ ಅಧಿಕಾರಿ ತಾಲೂಕಿನ ತಹಶೀಲ್ದಾರರು, ಶಿರಸ್ತೇದಾರರು, ವಿವಿಧ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು ಇದ್ದರು.