ಗದಗ ಜಿಲ್ಲಾಡಳಿತ ನಿಷೇಧಿತ ಗಾಳಿಪಟ ಮಾಂಜಾ ದಾರ ಬಳಕೆ ಬೇಡ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ.
ಗಾಳಿಪಟ ಹಾರಿಸಲು ಬಳಕೆ ಮಾಡುವ ಮಾಂಜಾ ದಾರವನ್ನು ನಿಷೇಧಿಸಲಾಗಿದ್ದು, ಜಿಲ್ಲಾಧ್ಯಂತ ಅಪಾಯಕಾರಿ ಮಾಂಜಾ ದಾರ ಮಾರಾಟ, ಬಳಕೆ ಮಾಡಬಾರದು. ಫ್ಯಾನ್ಸಿ ಸ್ಟೋರ್‌ಗಳು, ಸಣ್ಣಪುಟ್ಟ ಗೂಡಂಗಡಿಗಳಲ್ಲಿ ಈ ದಾರ ಮಾರಾಟ ಮಾಡುವಂತಿಲ್ಲ ಎಂದು ಜಿಲ್ಲಾಡಳಿತದಿಂದ ಸೂಚನೆ ಹೊರಡಿಸಲಾಗಿದೆ.
ಗಾಳಿಪಟ ಬಳಕೆ ಮಾಡುವ ಮಾಂಜಾ ದಾರವು ಪ್ರಾಣಿ, ಪಕ್ಷಿಗಳು ಮಾತ್ರವಲ್ಲದೆ ಮನುಷ್ಯರ ಪ್ರಾಣಕ್ಕೂ ಕಂಟಕವಾಗಿವೆ. ನಗರದ ರಸ್ತೆಯಲ್ಲಿ ಹರಿತವಾದ ಗಾಳಿಪಟ ದಾರದಿಂದ ಬೈಕ್ ಸವಾರರು, ಪಾದಚಾರಿಗಳ ಕಾಲು, ಕೈಗೆ ಗಾಯಗಳಾಗಿವೆ.
ಮಾಂಜಾ ದಾರ ಮಾರಾಟ, ಬಳಕೆ ಮಾಡುವುದು ಕಂಡು ಬಂದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಕಠಿಣ ಕಾನೂನು ಕ್ರಮ ಜರುಗಿಸಲಾಗುವು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ತಿಳಿಸಿದ್ದಾರೆ.
ನಿಷೇಧ ಆದೇಶ ಹೊರಡಿಸಿದ್ದ ಸರ್ಕಾರ
ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ತೀರ್ಪಿನಂತೆ ರಾಜ್ಯ ಸರಕಾರ 2017ರಲ್ಲಿ ಮಾಂಜಾ ದಾರದ ತಯಾರಿಕೆ, ಬಳಕೆ, ಮಾರಾಟವನ್ನು ನಿಷೇಧಿಸಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
