ಗದಗ ನಗರದ ಬೆಟಗೇರಿಯ ಕಣಗಿನಹಾಳ ರಸ್ತೆಯಲ್ಲಿರುವ ಐಟಿಐ ಮಹಿಳಾ ಕಾಲೇಜಿಗೆ ಕೆ ಎಚ್ ಪಾಟೀಲ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಮಹಿಳಾ) ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಕೆ ಪಾಟೀಲ್ ಅವರು ನಾಮಕರಣ ಮಾಡಿದರು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಐಟಿಐ ಕಾಲೇಜು ಗದಗ ಬೆಟಗೇರಿ ಸಂಯುಕ್ತ ಆಶ್ರಯದಲ್ಲಿ ಬೆಟಗೇರಿಯ ಕಣಗಿನಹಾಳ ರಸ್ತೆಯಲ್ಲಿರುವ ಐಟಿಐ ಕಾಲೇಜಿನಲ್ಲಿ ನಡೆದ ನಾಮಕರಣದ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು.
“ಐಟಿಐ ಕಾಲೇಜು 1990-91ರಲ್ಲಿ ವಿಶ್ವಬ್ಯಾಂಕ್ ಯೋಜನೆ ಅಡಿಯಲ್ಲಿ ಮಂಜೂರಾಗಿತ್ತು. ಸ್ವಂತ ಕಟ್ಟಡ ಇಲ್ಲದ್ದರಿಂದ ಕೆ ಎಚ್ ಪಾಟೀಲ ಅವರು ಬೆಟಗೇರಿಯಲ್ಲಿನ ಹುಲಕೋಟಿ ಸಹಕಾರಿ ಶಿಕ್ಷಣ ಸಮಸ್ಥೆಯ ವಸತಿ ನಿಲಯದಲ್ಲಿನ ತಾತ್ಕಾಲಿಕ ತರಬೇತಿ ನೀಡಲು ಅನುಕೂಲ ಮಾಡಿಕೊಟ್ಟಿದ್ದರು” ಎಂದು ಸ್ಮರಿಸಿದರು.
“ಸ್ವಂತ ಕಟ್ಟಡ ಕಟ್ಟಲು ಜಮೀನು ಸಿಗದಿರುವ ಸಂದರ್ಭದಲ್ಲಿ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯಿಂದ ಬೆಟಗೇರಿಯಲ್ಲಿನ 1.22 ಎಕರೆ ಜಮೀನನ್ನು ದಾನವಾಗಿ ನೀಡಿ ಸಂಸ್ಥೆಯು ಬೇರಡೆ ಸ್ಥಳಾಂತರವಾಗುವುದನ್ನು ತಪ್ಪಿಸಿ ಬೆಟಗೇರಿಯಲ್ಲಿಯೇ ಉಳಿಯುವಂತೆಯೇ ಮಾಡುವ ಮೂಲಕ ಸಾವಿರಾರು ಬಡಮಕ್ಕಳ ಶಿಕ್ಷಣಕ್ಕೆ ಕೆ ಎಚ್ ಪಾಟೀಲರು ಕಾರಣಕರ್ತರಾಗಿದ್ದರು” ಎಂದು ಶ್ಲಾಘಿಸಿದರು.
“ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, “ದೂರದೃಷ್ಟಿಯ ಹರಿಕಾರ, ಕೆ ಎಚ್ ಪಾಟೀಲ ಅವರು ಅನೇಕ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಿದ್ದಾರೆ. ಬಡ ಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಈ ಐಟಿಐ ಕಾಲೇಜಿನಲ್ಲಿ ಈ ಬಾಗದ ಬಡಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ರಾಜ್ಯದ, ದೇಶದ ವಿವಿಧ ರಂಗಗಳಲ್ಲಿ ಉತ್ತಮ ಹುದ್ದೆಯಲ್ಲಿ ಕಾರ್ಯನಿರ್ವಹಿಸುವಂತಾಗಲಿ ಹಾಗೂ ಇತರರಿಗೆ ಉದ್ಯೋಗದಾತರಾಗಲಿ” ಎಂದು ಶುಭ ಹಾರೈಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಎಸ್‌ಸಿ/ಎಸ್‌ಟಿ ಅನುದಾನ ಗ್ಯಾರಂಟಿ ಯೋಜನೆಗೆ ಬಳಕೆ; ಬಿಜೆಪಿ ಆರೋಪ
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ ಆರ್ ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ಡಾ. ಬಸವಪ್ರಭು ಹಿರೇಮಠ, ಕೆ ಎಚ್ ಪಾಟೀಲ, ಐಟಿಐ ಸಂಸ್ಥೆಯ ಪ್ರಾಚಾರ್ಯ ಡಾ. ಮಲ್ಲೂರ ಬಸವರಾಜ ಸೇರಿದಂತೆ ಇತರರು ಇದ್ದರು.
