ಪರಿಶಿಷ್ಟ ಜಾತಿ/ಪಂಗಡ(ಎಸ್‌ಸಿ/ಎಸ್‌ಟಿ) ಅಭಿವೃದ್ಧಿಗೆ ಮೀಸಲಿಟ್ಟಿದ್ದ ₹11,400 ಕೋಟಿ ಅನುದಾನವನ್ನು ಐದು ಗ್ಯಾರಂಟಿ ಯೋಜನೆಗಳಿಗಾಗಿ ಕಿತ್ತುಕೊಂಡಿರುವ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ವರ್ಗದವರು ಬಿಜೆಪಿಯನ್ನು ಗೆಲ್ಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಕರೆ ನೀಡಿದರು.
ದಾವಣಗೆರೆ-ಹರಿಹರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಭವನದಲ್ಲಿ ಪರಿಶಿಷ್ಟ ಸಮುದಾಯ ಪಂಗಡಗಳ ಮುನ್ನಡೆ ಸಮಾವೇಶದಲ್ಲಿ ಮಾತನಾಡಿ, “ಈಗಾಗಲೇ ₹11,400 ಕೋಟಿ ಅನುದಾನ ಕಿತ್ತುಕೊಂಡಿರುವ ರಾಜ್ಯ ಸರ್ಕಾರ ಮತ್ತೆ ₹14,000 ಕೋಟಿ ಅನುದಾನಕ್ಕೆ ಕಣ್ಣು ಹಾಕಿದೆ” ಎಂದು ದೂರಿದರು.
“ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಿಸಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿತ್ತು. ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ, ಧರಣಿ ಸತ್ಯಾಗ್ರಹ ನಡೆಸಲಾಯಿತು. ಬಸವರಾಜ ಬೊಮ್ಮಾಯಿ ಅವರು ಪರಿಶಿಷ್ಟ ವರ್ಗಗಳ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿದರು. ಬಿ ಎಸ್ ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತಿ, ಭವನಗಳ ನಿರ್ಮಾಣ, ಪ್ರತ್ಯೇಕ ಸಚಿವಾಲಯ ಪ್ರಾರಂಭಿಸುವ ಮೂಲಕ ಪರಿಶಿಷ್ಟ ವರ್ಗಗಳಿಗೆ ಅತಿ ಹೆಚ್ಚು ಕೊಡುಗೆ ನೀಡಿದ್ದಾರೆ” ಎಂದು ಸ್ಮರಿಸಿದರು.
“ಪ್ರಧಾನಿ ನರೇಂದ್ರ ಮೋದಿಯವರು ಪರಿಶಿಷ್ಟ ವರ್ಗಗಳ ಸಮಗ್ರ ಅಭಿವೃದ್ಧಿಗೆ ಅತಿ ಹೆಚ್ಚು ಅನುದಾನ ನೀಡಿದ್ದಾರೆ. ಬುಡಕಟ್ಟು ವರ್ಗದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರಿಡಲಾಗಿದೆ. ಅದು ನಮ್ಮ ಪುಣ್ಯ. ದೇಶದ ರಕ್ಷಣೆಗಾಗಿ ಮೋದಿ ಅವರಂತಹ ಮಹಾನ್ ನಾಯಕನನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕು. ಪರಿಶಿಷ್ಟ ವರ್ಗಗಳವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದರು.
ಸಂಸದ ಡಾ ಜಿ ಎಂ ಸಿದ್ದೇಶ್ವರ ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿಯವರು ಪರಿಶಿಷ್ಟ ವರ್ಗಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡುಗೆಗಳನ್ನು ನೀಡಿದ್ದಾರೆ” ಎಂದು ತಿಳಿಸಿದರು.
ಪ್ರಾಸ್ತಾವಿಕ ಮಾತುಗಳಾಡಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸ ಕರಿಯಪ್ಪ, “ಬಿಜೆಪಿ ಪರಿಶಿಷ್ಟ ವರ್ಗಗಳವರ ಸಮಗ್ರ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳ ತಿಳಿಸುವ ಜತೆಗೆ ಪ್ರಧಾನಿ ಅವರೊಂದಿಗೆ ನಿಲ್ಲುವ ಸಂದೇಶ ಸಾರುವ ಉದ್ದೇಶದಿಂದ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶ ನಡೆಸಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಲೋಕಸಭಾ ದಾವಣಗೆರೆ ಡಾ ಜಿ ಎಂ ಸಿದ್ದೇಶ್ವರ ಒಳಗೊಂಡಂತೆ ಎಲ್ಲ 28 ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು” ಎಂದು ವೇದಿಕೆಯಲ್ಲಿ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅಪ್ರಜಾತಾಂತ್ರಿಕವಾಗಿ ಹೇರಿರುವ ಎನ್‌ಇಪಿ ಹಿಂಪಡೆಯಲು ಆಗ್ರಹ
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಹೇಮಲತಾ ನಾಯಕ, ಬಿ ಪಿ ಹರೀಶ್, ಮಾಜಿ ಶಾಸಕರುಗಳಾದ ಎಸ್ ಎ ರವೀಂದ್ರನಾಥ್, ಎಸ್ ವಿ ರಾಮಚಂದ್ರ, ಮಾಡಾಳ್ ವಿರೂಪಾಕ್ಷಪ್ಪ, ಡಾ ಎ ಎಚ್ ಶಿವಯೋಗಿ ಸ್ವಾಮಿ, ಎಂ ಬಸವರಾಜ ನಾಯ್ಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್ ರಾಜಶೇಖರ್ ನಾಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೆಬಾಳು, ಅನಿಲ್ ಕುಮಾರ್ ನಾಯ್ಕ ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ ಎಸ್ ಕೃಷ್ಣಕುಮಾರ್, ರಾಜ್ಯ ಉಪಾಧ್ಯಕ್ಷ ಅನಿಲ್‌ಕುಮಾರ್, ವಾದಿರಾಜ್, ಜಿ ಎಸ್ ಶ್ಯಾಮ್, ಕೆ ಬಿ ಕೊಟ್ರೇಶ್ ಸೇರಿದಂತೆ ಇತರರು ಇದ್ದರು.