ಬಂಜಾರ ಸಮುದಾಯದ ಆರಾಧ್ಯ ದೈವ ಸಂತ ಸೇವಾಲಾಲ್ ಜಯಂತಿಯ ಶುಭಾಶಯ ಕೋರಿದರು. ಸೇವಾಲಾಲ್ ಅವರ ತತ್ವಗಳು ಇಂದಿನ ಯುವಜನತೆಗೆ ದಾರೀ ದೀಪವಾಗಿದೆ. ಸರ್ಕಾರ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸುವ ಮೂಲಕ ಅವರ ತತ್ವಾದರ್ಶಗಳನ್ನು ಇಂದಿನ ಯುವ ಜನತೆಗೆ ತಿಳಿಸಿಕೊಡುವ ಕಾರ್ಯ ಮಾಡುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಹೇಳಿದ್ದಾರೆ.
ಗದಗ ಜಿಲ್ಲಾಡಳಿತ ಭವನದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಬಂಜಾರ ಸಮುದಾಯವು ಪ್ರಾಮಾಣಿಕ, ಕಾಯಕ ನಿಷ್ಠ ಸಮಾಜವಾಗಿದೆ. ಸಂತ ಸೇವಾಲಾಲ್‍ರ ನಿಷ್ಠೆ, ಪ್ರಾಮಾಣಿಕತೆ, ಆದರ್ಶಗಳನ್ನು ನಾವೆಲ್ಲರೂ ಅನುಸರಿಸುವ ಮೂಲಕ ಅವರಿಗೆ ಗೌರವ ಸಮರ್ಪಿಸೋಣ” ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಸಮಾಜದ ಗಣ್ಯರು, ಮುಖಂಡರುಗಳು ಉಪಸ್ಥಿತರಿದ್ದರು.