ರೋಣ ತಾಲೂಕಿನ ಎಲ್ಲ ಜನರ ಅಹವಾಲುಗಳನ್ನು ಆಲಿಸಲು ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದೇವೆ. ಇಲ್ಲಿಯೇ ಬಗೆಹರಿಸುವಂತಹ ಅಹವಾಲುಗಳನ್ನು ಬಗೆಹರಿಸುತ್ತೇವೆ ಅಥವಾ ಸ್ಥಳದಲ್ಲಿ ಬಗೆಹರಿಯದಂತಹ ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಹೇಳಿದರು.
ಗದಗ ಜಿಲ್ಲೆಯ ರೋಣ ಪಟ್ಟಣದ ಗುರುಬಸವ ಭವನದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಗಳೂರು ಗ್ರಾಮಸ್ಥರಿಂದ ಟಿ ಸಿ ಬದಲಾವಣೆ ಮಾಡುವ ಕುರಿತು ಮನವಿ ಸಲ್ಲಿಸಿದರು. ಭೋವಿ ಸಮಾಜದ ಜಾತಿ ಪ್ರಮಾಣಪತ್ರ ವಿತರಣೆ ಮಾಡುವಂತೆ ಮನವಿ ಸಲ್ಲಿಸಿದರು.
ಹೊನ್ನಾಪುರ ಗ್ರಾಮಕ್ಕೆ ಯಾವುದೇ ರೀತಿಯ ಸಾರಿಗೆ ಸೌಲಭ್ಯ ಇರುವುದಿಲ್ಲ. ವಿದ್ಯಾರ್ಥಿಗಳು, ಜನರು ಪಟ್ಟಣಗಳಿಗೆ ಹೋಗಲು ನಾಲ್ಕು ಕಿಲೋ ಮೀಟರ್ ನಡೆದುಕೊಂಡೇ ಹೋಗಬೇಕು ಎಂದು ಹೇಳಿದರು. ಹನಮಂತಪ್ಪ ಬಿಂಗಿ ಸುರೇಶ್ ಮಹದೇವಪ್ಪ ಶಿವಶೀಂಪಿ ಬೆಳವಣಿಕೆ ಗ್ರಾಮದವರಾಗಿದ್ದು, ಅಂಗವಿಕಲರು, ನಂಗೆ ಯಾವುದೇ ರೀತಿಯಲ್ಲಿ ಮನೆ ಇರುವುದಿಲ್ಲ, ಜಾಗ ಇದೆ, ಆಶ್ರಯ ಮನೆ ಒದಗಿಸಬೇಕು ಎಂದು ಕೇಳಿಕೊಂಡರು.
ಡಿಎಸ್ಎಸ್ ಸಂಘಟನೆಯ ಮುಖಂಡರು ಪ್ರತಿಯೊಂದು ತಾಲೂಕುಗಳಲ್ಲಿ ಅಂಬೇಡ್ಕರ್ ಭವನಗಳು ಇವೆ. ನಮ್ಮ ರೋಣದಲ್ಲಿ ಅಂಬೇಡ್ಕರ್ ಭವನ ಇರುವುದಿಲ್ಲ. ತಳ ಸಮುದಾಯಗಳನ್ನು, ಅಂಬೇಡ್ಕರ್ ಅವರನ್ನು ಕಡೆಗಣಿಸುತ್ತಿದ್ದೀರಿ, ಕೂಡಲೇ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಎಂದು ಮನವಿ ಸಲ್ಲಿಸಿ ಆಗ್ರಹಿಸಿದರು.
ರೈತರಿಗೆ ಕೇವಲ ಹದಿನೈದು ರಷ್ಟು ಬೆಳೆ ಪರಿಹಾರ ಬಂದಿದೆ. ಇನ್ನೂ ಎಂಬತ್ತೈದರಷ್ಟು ಬೆಳೆ ಪರಿಹಾರ ಬಂದಿಲ್ಲ. ಕೂಡಲೇ ಬಿಡುಗಡೆ ಮಾಡಬೇಕೆಂದು ಸುಭಾಷ್ ದಾನರೆಡ್ಡಿ ಅವರು ಹೇಳಿದರು.
ಸವಡಿ ಗ್ರಾಮದ ರೈತ ಮುಖಂಡ ಮೇಘರಾಜ ಬಾವಿ ವಿಂಡ್ ಪವರ್‌ಗಳನ್ನು ಬಂಜರು ಭೂಮಿಯಲ್ಲಿ ಅಳವಡಿಸಲು ಅವಕಾಶವಿದೆ. ನಮ್ಮ ಇಡೀ ತಾಲೂಕುಗಳು ಫಲವತ್ತಾದ ಭೂಮಿಗಳನ್ನು ಹೊಂದಿವೆ. ಫಲವತ್ತಾದ ಭೂಮಿಗಳಲ್ಲಿ ವಿಂಡ್ ಫ್ಯಾನ್‌ಗಳನ್ನು ಹಾಕುವುದರಿಂದ ರೈತರ ಬೆಳೆ ಸರಿಯಾಗಿ ಇಳುವರಿ ಬರುವುದಿಲ್ಲ, ರೈತನ ಆದಾಯಕ್ಕೆ ಹೊಡೆತ ಬೀಳುತ್ತದೆ. ರೈತರ ಹೊಲಗಳಲ್ಲಿ ವಿಂಡ್ ಪವರ್ ಹಾಕುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಬಹುತೇಕ ಜಿಲ್ಲಾಧಿಕಾರಿಗಳು ಕೇವಲ ಕಾಟಾಚಾರಕ್ಕೆ ಜನಸ್ಪಂದನ ಕಾರ್ಯಕ್ರಮ ಮಾಡಿದರು. ಕೇವಲ ಒಂದೂವರೆ ಗಂಟೆ ಮಾತ್ರ ಎದ್ದು, ಯಾವುದೇ ರೀತಿಯಲ್ಲಿ ಜನರಿಗೆ ಪರಿಹಾರ ಕೊಡಿಸುವ ಪ್ರಯತ್ನ ಮಾಡಿಲ್ಲ” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮನಸು ಮತ್ತು ದೇಹವನ್ನು ಸಂಪರ್ಕಿಸುವುದೇ ಯೋಗ: ಡಾ ಮಕಾಂದರ
ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನ್ಯಾಮಗೌಡ, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಭರತ್ ಎಸ್ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಅಹವಾಲು ಸಲ್ಲಿಸಲು ಬೇರೆ ಬೇರೆ ಹಳ್ಳಿಗಳಿಂದ ಬಂದಿದ್ದ ಜನರು ಇದ್ದರು.
