“ಬೆಂಕಿ ಹಚ್ಚುವವರ ಕೈಯಿಂದ ಇಸಿದುಕೊಂಡು ನಾವು ದೀಪ ಹಚ್ಚಬೇಕು. ಈ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಪ್ರೀತಿ, ಸಮಾನತೆ ಶಾಂತಿಯನ್ನು ಕಟ್ಟಬೇಕು” ಎಂದು ಪ್ರಗತಿಪರ ಚಿಂತಕ ಬಿ ಪಿರಭಾಷಾ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಅಂಜುಮನ್ ಶಾದಿಮಹಲ್ ಭವನದಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಮಹಾತ್ಮಾ ಹುತಾತ್ಮ ‘ಸೌಹಾರ್ದ ಸಂಕಲ್ಪ ದಿನ’ ಸೌಹಾರ್ದ ಗೀತೆಗಳ ಗಾಯನ, ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
“ಈ ದೇಶದ ಸ್ವಾತಂತ್ರ್ಯಕ್ಕಾಗಿ ಇಡೀ ಜೀವನದುದ್ದಕ್ಕೂ ಸ್ವಾರ್ಥವಿಲ್ಲದೆ ಮನುಷ್ಯತ್ವಕ್ಕಾಗಿ ಪೇಚಾಡಿ, ಕಟ್ಟಕಡೆಗೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧಿಯವರನ್ನು ನಾಥೂರಾಮ್ ಗೋಡ್ಸೆ ಕೊಂದನು. ಈ ಗೋಡ್ಸೆಗೆ ಸಾವರ್ಕರ್ ಗುರುವಾಗಿದ್ದನು. ಇಪ್ಪತ್ತು ವರ್ಷಗಳಿಂದಲೇ ಗಾಂಧೀಜಿಯನ್ನು ಕೊಲ್ಲಲು ಯೋಜನೆ ರೂಪಿಸಿದ್ದರು” ಎಂದು ಹೇಳಿದರು.
“ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ವೀರ, ದೇಶಭಕ್ತನೆಂದು ಈ ದೇಶದ ಮನುವಾದಿಗಳು ಸಂಭ್ರಮಿಸುತ್ತಿದ್ದಾರೆ. ಕೊಲ್ಲುವ ಹೆಸರಿನಲ್ಲಿ ಧರ್ಮವನ್ನು ಬಳಸುವ ಯಾವ ವ್ಯಕ್ತಿಯೇ ಆಗಲಿ ಅವನು ಮನುಕುಲಕ್ಕೇ ಕಂಟಕ” ಎಂದು ಹೇಳಿದರು.
“ಗಾಂಧಿ ಆಫ್ರಿಕಾದಲ್ಲಿ ದುಡಿಯುವುದಕ್ಕೆ, ವಕೀಲಿ ವೃತ್ತಿ ಮಾಡುವುದಕ್ಕೆ ಹೋಗಿದ್ದರು. ಆದರೆ ನಮ್ಮ ದೇಶಕ್ಕೆ ಹಿಂತಿರುಗಿ ಬಂದು ಬಡವರ ಸಲುವಾಗಿ ವಕೀಲಿಕಿ ಬಿಟ್ಟು ಹೋರಾಟ ಮಾಡಿದರು. ಈ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇವರೊಂದಿಗೆ ಲಕ್ಷಾಂತರ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂ ಎಸ್ ಹಡಪದ ಪ್ರಸ್ತಾವಿಕ ಮಾತನಾಡಿ, “ಜನವರಿ 30 ನಾಥೂರಾಮ್ ಗೋಡ್ಸೆಯಿಂದ ಗಾಂಧಿ ಹತ್ಯೆಯಾದ ದಿನ. ದೇಶದಲ್ಲಿ ಅಧಿಕಾರ ಹಿಡಿಯಲು ಧರ್ಮ, ಸೌಹಾರ್ದತೆಯನ್ನು ಒಡೆದು ಮತೀಯವಾದಿಗಳು ಕೆಲಸ ಮಾಡುತ್ತ ಬಂದಿದ್ದಾರೆ. ಹಿಂದೂ ಮುಸ್ಲಿಂ ಸೌಹಾರ್ದತೆ ನಡುವೆ ಕಲಹವನ್ನುಂಟುಮಾಡಿ, ಈ ದೇಶದಲ್ಲಿ ಸಾವು ನೋವುಗಳನ್ನು ಸೃಷ್ಟಿಮಾಡುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.
“ಕೋಮು ಸೌಹಾರ್ದತೆಯನ್ನು ಹಾಳುಗೆಡುವುತ್ತಿರುವ ಇಂತಹ ಸಂದರ್ಭದಲ್ಲಿ ಜೀವಪರ, ಜಾತ್ಯತೀತ, ಶಾಂತಿ, ಸೌಹಾರ್ದ ಬಯಸುವ ಎಲ್ಲ ಪ್ರಗತಿಪರ ಚಿಂತಕರು, ಬರಹಗಾರರು ಸೇರಿ ಗಾಂಧಿ ಹತ್ಯೆಯ ದಿನದಂದು ಜಾತ್ಯತೀತ, ಶಾಂತಿ ಸೌಹಾರ್ದತೆಯನ್ನು ಸಾರಲು ರಾಜ್ಯಾದ್ಯಂತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಎಂ ಎಸ್ ಹಡಪದ ಹೇಳುದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬಿ ಎ ಕೆಂಚರೆಡ್ಡಿಯವರು ಈ ದಿನ.ಕಾಮ್‌ನ “ನಮ್ಮ ಕರ್ನಾಟಕ: ನಡೆದ 50 ಹೆಜ್ಜೆ- ಮುಂದಿನ ದಿಕ್ಕು” ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಈ ಸುದ್ದಿ ಓದಿದ್ದೀರಾ? ಧಾರವಾಡ | ಕ್ರೀಡಾಪಟುಗಳು ಸೋತರೂ ಗೆಳೆತನ ಬಿಡಬೇಡಿ: ಗೌರಮ್ಮ ಬಳೋಗಿ
ಕೃಷಿಕೂಲಿಕಾರರ ಸಂಘಟನೆ ಮುಖಂಡ ಬಾಲು ರಾಠೋಡ, ಡಿವೈಎಫ್ಐ ಮುಖಂಡ ದಾವಲಸಾಬ ತಾಳಿಕೋಟಿ, ನಾಸೀರ ಸುರಪುರ, ಓದಸನೂರುಮಠ, ಮೆಹಬೂಬ್ ಹವಾಲ್ದಾರ್, ನಿವೃತ್ತ ಶಿಕ್ಷಕ ಬಿ ಎನ್ ಜಾಲಿಹಾಳ, ನೀಲಮ್ಮ ಹಿರೇಮಠ, ಪ್ರಕಾಶ, ಮಾಸುಮಲಿ ಮದಗಾರ, ಚೆನ್ನಪ್ಪ ಗುಗಲೋತ್ತರ, ಬೀದಿಬದಿ ವ್ಯಾಪಾರಸ್ಥರು, ಅಂಗನವಾಡಿ ನೌಕರರು, ವಿದ್ಯಾರ್ಥಿ-ಯುವಜನರು, ಕಟ್ಟಡ ಕಾರ್ಮಿಕರು ಸೇರಿದಂತೆ ಇತರರು ಇದ್ದರು.
