ಶತಾಯುಷಿ ವೃದ್ಧೆಯೊಬ್ಬರು ಆಧಾರ್ ಕಾರ್ಡ್ ಇಲ್ಲದ ಕಾರಣ, ಮಾಸಾಶನ ಪಡೆಯಲು ಸಾಧ್ಯವಾಗಿರಲಿಲ್ಲ. ಅವರಿಗೆ ಗದಗದಲ್ಲಿ ನಡೆದ ಜಿಲ್ಲಾಮಟ್ಟದ ಜನತಾ ದರ್ಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ ಅವರು ಆಧಾರ್ ಮಾಡಿಸಿ ಕೊಟ್ಟಿದ್ದು, ಮಾಸಾಶನದ ಆದೇಶ ಪತ್ರಿಯನ್ನೂ ನೀಡಿದ್ದಾರೆ.
ಶನಿವಾರ, ಗದಗ ಜಿಲ್ಲಾಡಳಿತ ಭವನದ ಎದುರು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಲ್ಲಿಗೆ ಬಂದಿfದ, ಗದಗ-ಬೆಟಗೇರಿಯ ಹೆಲ್ತ್‌ಕ್ಯಾಂಪ್ ನಿವಾಸಿ ಕಮಲಾಬಾಯಿ ಹನುಮಂತಭಟ್ ಜೋಶಿ ಅವರು ಶತಾಯುಷಿಯಾಗಿದ್ದರೂ ಆಧಾರ್ ಕಾರ್ಡ್ ಹೊಂದಿರಲಿಲ್ಲ. ಮಾಸಿಕವಾಗಿ ಬರುತ್ತಿದ್ದ ಮಾಸಾಶನವೂ ಸ್ಥಗಿತವಾಗಿ ಸಂಕಷ್ಟ ಅನುಭವಿಸುತ್ತಿದ್ದರು. ಜನತಾ ದರ್ಶನದಲ್ಲಿ ಸಮಸ್ಯೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ವೃದ್ಧೆಯು ಸಲ್ಲಿಸಿದ ಅರ್ಜಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿದ ಸಚಿವರು ಆಧಾರ್ ಕಾರ್ಡ್ ಜೊತೆಗೆ ಮಾಸಾಶನ ಆದೇಶ ಪತ್ರ ವಿತರಿಸಿದ್ದಾರೆ.
ಸಮಸ್ಯೆ ಪರಿಹಾರವಾದ ಬಗ್ಗೆ ವೃದ್ಧೆ ಕಮಲಾಬಾಯಿ ಸಂತಸ ವ್ಯಕ್ತಪಡಿಸಿದ್ದು, “ಆಧಾರ್ ನೋಂದಣಿ ಕೇಂದ್ರದಲ್ಲಿ ತಮ್ಮ ಬೆರಳಚ್ಚು ಗುರುತು ಸ್ವೀಕೃತವಾಗದ ಕಾರಣ ಈವರೆಗೆ ಆಧಾರ್ ಕಾರ್ಡ್ ಬಂದಿರಲಿಲ್ಲ. ಆಧಾರ್ ಕಾರ್ಡ್ ಇಲ್ಲದೆ ಕಳೆದ ಒಂದೂವರೆ ವರ್ಷದಿಂದ ಮಾಸಾಶನ ಸ್ಥಗಿತವಾಗಿತ್ತು. ಜನತಾದರ್ಶನ ಮೂಲಕ ಸಮಸ್ಯೆ ಸರಿಪಡಿಸಲಾಗಿದೆ” ಎಂದು ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.
ಅಲ್ಲದೆ, ಮಾಸಾಶನ, ಮನೆ ಮಂಜೂರಾತಿ, ವಿಧವಾ ವೇತನ, ಭೂ ದಾಖಲಾತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಹೊತ್ತು ಬಂದ ಕೆಲ ಸಾರ್ವಜನಿಕರಿಗೆ ಸ್ಥಳದಲ್ಲೇ ಪರಿಹಾರ ಒದಗಿಲಾಗಿದೆ. ಇನ್ನೂ ಕೆಲವರಿಗೆ ಸಮಯಾವಕಾಶ ನೀಡಿ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಶಿಕ್ಷಕರ ಸಂಘರ್ಷ; ಶಾಲೆಗೆ ಬೀಗ ಜಡಿದು ಪ್ರತಿಭಟನೆ
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ. ಶಿಖಾ, ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಸೇರಿದಂತೆ ಹಲವು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.