ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಂತೆ ಒತ್ತಾಯಿಸಿ ಗದಗ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಗದಗ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಅಂಚೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶರಣು ಗೋಡೊ ಮಾತನಾಡಿ, “ರಾಜ್ಯದಲ್ಲಿ ಯಾವ ವರ್ಷವೂ ಇಲ್ಲದಷ್ಟು ಬರಗಾಲ ಈ ವರ್ಷ ಅತಿ ಹೆಚ್ಚು ಆವರಿಸಿಕೊಂಡಿದೆ. ವಾಡಿಕೆಯಂತೆ ಮಳೆಯಾಗುತ್ತಿಲ್ಲ. ರಾಜ್ಯದಲ್ಲಿ 236 ತಾಲೂಕುಗಳ ಪೈಕಿ 192 ತಾಲೂಕುಗಳನ್ನು ಬರಪಿಡೀತ ತಾಲೂಕುಗಳೆಂದು ಸರ್ಕಾರ ಘೋಷಿಸಿದೆ. ಕೃಷ್ಣರಾಜ ಸಾಗರ ಜಲಾಶಯದಲ್ಲಿ ಕೇವಲ 20 ಟಿಎಂಸಿ ನೀರಿದೆ. ಅದರಲ್ಲಿ ಬಳಕೆಗೆ ಸಿಗುವುದು 15 ಟಿಎಂಸಿ ಮಾತ್ರ. ಇಂತಹ ಸಂದರ್ಭದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾದಿಕಾರ ಪ್ರತಿದಿನ 5 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲು ಆದೇಶಿಸಿರುವುದು ಆಘಾತಕಾರಿಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಮುಂಡರಗಿ ತಾಲೂಕನ್ನು ಬರಪಿಡೀತ ಪ್ರದೇಶವೆಂದು ಘೋಷಿಸಲು ಒತ್ತಾಯ
“ಯಾವುದೇ ಕಾರಣಕ್ಕೂ ಪ್ರಾಧಿಕಾರವು ಈ ಆದೇಶವನ್ನು ಪಾಲಿಸಬಾರದು. ನಾಡಿನ ಜನರ ಜೀವಕ್ಕಿಂತ ಆದೇಶ ದೊಡ್ಡದಲ್ಲ. ಈ ಪ್ರಾಧಿಕಾರದ ಆದೇಶವನ್ನು ಪಾಲಿಸಲು ಹೋಗಿ, ಅವರು ಕೇಳಿದಷ್ಟು ರಾಜ್ಯ ಸರ್ಕಾರ ನೀರು ಬಿಟ್ಟಿರುವುದೇ ದೊಡ್ಡ ತಪ್ಪು. ಈಗಲೂ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸುತ್ತಿಲ್ಲ. ಕೂಡಲೇ ಸರ್ಕಾರ ಸರಿಯಾದ ನಿರ್ಧಾರ ತಗೆದುಕೊಂಡು ನೀರು ಬಿಡದಂತೆ ದೃಢ ನಿರ್ಧಾರ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಮುಖಂಡರು ಇದ್ದರು.