ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲು ಗದಗ ಜಿಲ್ಲೆಯ ಮುಂಡರಗಿ ಪಟ್ಟಣಕ್ಕೆ ಆಗಮಿಸಿದ್ದ ಕಬ್ಬುಬೆಳೆಗಾರರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದುಕೊಂಡರು.
ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮುಂಡರಗಿ ಪಟ್ಟಣಕ್ಕೆ ಆಗಮಿಸಲಿದ್ದರು. ವಿಷಯ ತಿಳಿದ ಕಬ್ಬು ಬೆಳೆಗಾರರು ಪಟ್ಟಣದಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸುವ ಸಿದ್ಧತೆ ಮಾಡಿಕೊಂಡಿದ್ದರು.
ಶುಕ್ರವಾರ ಸಂಜೆ 3 ಗಂಟೆಗೆ ಸುಮಾರು 60 ರೈತರು ಸಮಾರಂಭ ನಡೆಯುವ ಅನ್ನದಾನೀಶ್ವರ ಕಲ್ಯಾಣ ಮಂಟಪಕ್ಕೆ ತೆರಳಲು ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಬಳಿ ಜಮಾಯಿಸಿದರು. ಸುದ್ದಿ ತಿಳಿಯುತ್ತಿದ್ದಂತೆಯೆ ಪೊಲೀಸರು ಸ್ಥಳಕ್ಕಾಗಮಿಸಿ, ಕೆಲವು ಕಬ್ಬುಬೆಳೆಗಾರರನ್ನು ವಶಕ್ಕೆ ಪಡೆದುಕೊಂಡರು.
ವಿನಾಕಾರಣ ಪೊಲೀಸರು ಕಬ್ಬು ಬೆಳೆಗಾರರನ್ನು ವಶಕ್ಕೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಕೆಲವು ರೈತರು ಬಸ್ ನಿಲ್ದಾಣದ ಬಳಿ ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ಆರಂಭಿಸಿದರು. ಪ್ರತಿಭಟನೆ ನಿರತ ರೈತರನ್ನು ಪೊಲೀಸರು ವಶಪಡಿಸಿಕೊಂಡು ಪೊಲೀಸ್ ವ್ಯಾನಿನಲ್ಲಿ ಕರೆದೊಯ್ದರು.
‘ಟನ್ ಕಬ್ಬಿಗೆ ₹5,500 ನೀಡಬೇಕು, ಸರ್ಕಾರ ಶೇ 100ರಷ್ಟು ಎಥಿನಾಲ್ ಖರೀದಿಸಬೇಕು ಎನ್ನುವ ಹಲವು ಬೇಡಿಕೆಗಳ ಕುರಿತು ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿತ್ತು. ಆದರೆ ಮಧ್ಯದಲ್ಲಿಯೇ ಪೊಲೀಸರು ನಮ್ಮನ್ನು ವಶಕ್ಕೆ ಪಡೆದುಕೊಂಡಿದ್ದಾರೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
‘ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲು ಹೊರಟಿದ್ದ ರೈತರಾದ ವೀರನಗೌಡ ಪಾಟೀಲ, ಮಾಬುಸಾಬ್ ಬಳ್ಳಾರಿ, ಈರಣ್ಣ ಕವಲೂರ, ಮಂಜುನಾಥ ಬಡಿಗೇರ, ರವಿ ನಾಯಕ, ಮಂಜಣ್ಣ ಖಂಡ್ರೆ, ಶರಣಪ್ಪ ಚನ್ನಳ್ಳಿ ಮೊದಲಾದ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ’ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅದ್ಯಕ್ಷ ರವಿ ಕೊಳಲ ದೂರಿದರು.
‘ಚುನಾವಣಾ ಪ್ರಚಾರ ಸಭೆಗೆ ಆಗಮಿಸಲಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಘೇರಾವ್ ಹಾಕುವ ಸಾಧ್ಯತೆ ಕಂಡುಬಂದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ರೈತರನ್ನು ವಶಪಡಿಸಿಕೊಳ್ಳಲಾಯಿತು’ ಎಂದು ಸಿಪಿಐ ಅಯ್ಯನಗೌಡರ ಪಾಟೀಲ ತಿಳಿಸಿದರು.




