ಕಬ್ಬಿಗೆ ಪ್ರತಿ ಟನ್ಗೆ ₹5,500 ಬೆಲೆ ನೀಡಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹೆಚ್ಚಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ರೈತರ ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಅಣಕು ಶವಯಾತ್ರೆ ನಡೆಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲೆಯ ಹತ್ತರಗಿ ಟೋಲ್ ನಾಕಾದಿಂದ ಹುಬ್ಬಳ್ಳಿಯತ್ತ ಹೊರಟಿರುವ ಕಬ್ಬು ಬೆಳೆಗಾರರ ರೈತ ಯಾತ್ರೆಯು ಹಿರೇಬಾಗೇವಾಡಿ ರಸ್ತೆಯಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ರೈತರು ಅಣಕು ಶವಯಾತ್ರೆ ನಡೆಸಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕಬ್ಬಿಗೆ ನ್ಯಾಯಯುತ ಬೆಲೆ ನೀಡಬೇಕು ಹಾಗೂ ಎಂಎಸ್ಪಿ ಹೆಚ್ಚಿಸುವ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಮದುರ್ಗ ತಾಲೂಕಿನ ಮಾರುತಿ ದೊಡ್ಡವಾಡ ಹಾಗೂ ಶಿವಾನಂದ ದೊಡ್ಡವಾಡ ಅವರು ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಕಿತ್ತೂರಿನಲ್ಲಿ ರೈತರ ಸಮಾವೇಶ
ಕಬ್ಬು ಬೆಳೆಗಾರರ ಪಾದಯಾತ್ರೆಯು ಶುಕ್ರವಾರ ಎಂ.ಕೆ. ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿದೆ. ಶನಿವಾರ ಪಾದಯಾತ್ರೆ ಕಿತ್ತೂರಿಗೆ ತೆರಳಲಿದ್ದು, ಅಲ್ಲಿ ಕಬ್ಬು ಬೆಳೆಗಾರರ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ರೈತ ಸಂಘಟನೆಯ ಮಾರುತಿ ದೊಡ್ಡವಾಡ ತಿಳಿಸಿದ್ದಾರೆ.




