ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಹೆಚ್ಚಿದೆ. ಎಲ್ಲಡೆ ಅದ್ದೂರಿ ಆಚರಣೆ ನಡೆದಿದೆ. ಆದರೆ, ಇದೇ ಹೊತ್ತಿನಲ್ಲಿ ಕನ್ನಡ ಧ್ವಜ ಹಾರಿಸಲು ಅವಕಾಶ ನೀಡಿಲ್ಲವೆಂದು ತಹಶೀಲ್ದಾರ್ ವಿರುದ್ಧ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗೌರಿಬಿದನೂರಿನಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹೇಶ್ ಪತ್ರಿ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರ ನಡುವೆ ವಾಗ್ವಾದ ನಡೆದಿದೆ. ಕಾರ್ಯಕರ್ತರು ತಹಶೀಲ್ದಾರ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಬುಧವಾರ ಕನ್ನಡ ಧ್ವಜ ಹಾರಿಸಲು ಅನುಮತಿ ಕೋರಿ ಕನ್ನಡಪರ ಸಂಘಟನೆಗಳು ತಹಶೀಲ್ದಾರ್‌ಗೆ ಮನವಿ ಮಾಡಿದ್ದರು. ಆದರೆ, ತಹಶೀಲ್ದಾರ್ ಮಹೇಶ್ ಪತ್ರಿ ಅವರು ಸಂಘಟನೆಗಳಿಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ, ಕನ್ನಡಪರ ಸಂಘಟನೆಗಳ ಮುಖಂಡರು ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹನ ಪಟ್ಟಿದ್ದಾರೆ.