ಕೊಪ್ಪಳದಲ್ಲಿ ಪ್ರೀತಿ ವಿಚಾರಕ್ಕೆ ನಡೆದ ಗವಿಸಿದ್ದಪ್ಪನ ಭೀಕರ ಹತ್ಯೆ ಪ್ರಕರಣವು ಇದೀಗ ಇನ್ನೊಂದು ತಿರುವು ಪಡೆಯುತ್ತಿದೆ.
ಹತ್ಯೆಯಾದ ಗವಿಸಿದ್ದಪ್ಪ ಹಾಗೂ ಆರೋಪೊ ಸಾದಿಕ್ ಇಬ್ಬರೂ ಒಬ್ಬಳೇ ಬಾಲಕಿಯನ್ನು ಪ್ರೀತಿಸುತ್ತಿದ್ದರು. ಇದೇ ಕಾರಣಕ್ಕೆ ಹತ್ಯೆಯಾದವ ಹಾಗೂ ಆರೋಪಿ ನಡುವೆ ವೈಷಮ್ಯ ಬೆಳೆದು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಅದರಂತೆ ಪ್ರಕರಣಕ್ಕೆ ಕಾರಣಳಾದ ಬಾಲಕಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ರಾಜಕೀಯ ನಾಯಕರೂ ಸೇರಿ ಹಲವರು ಒತ್ತಾಯಿಸುತ್ತಿದ್ದರು. ಇದೀಗ ಬಾಲಕಿಯ ತಾಯಿ ಹಾಗೂ ಸಹೋದರಿ ವಿಷದ ಬಾಟಲಿಯನ್ನು ಮುಂದಿಟ್ಟುಕೊಂಡು ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಾಲಕಿಯ ತಾಯಿ ಹಸೀನಾ ಹಾಗೂ ಸಹೋದರಿ ಆಯೆಷಾ ಪ್ರತಿಭಟನೆ ನಡೆಸುತ್ತಿದ್ದು, ಈ ಸಂಬಂಧ ಮನವಿ ಪತ್ರವೊಂದನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ನೀಡಲು ಮುಂದಾಗಿದ್ದಾರೆ. ಹತ್ಯೆಯಾದ ಗವಿಸಿದ್ದಪ್ಪ ತನ್ನ ಅಪ್ರಾಪ್ತ ಮಗಳ ಮೇಲೆ ಎರಡು ವರ್ಷಗಳ ಕಾಲ ಅತ್ಯಾಚಾರ ಎಸಗಿದ್ದಾನೆ. ಅದರ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿ ನಿರಂತರ ಅತ್ಯಾಚಾರ ಎಸಗಿರುತ್ತಾನೆ. ಇದಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬೆಂಬಲ ಕೊಟ್ಟ ಎಲ್ಲರನ್ನೂ ಶಿಕ್ಷೆಗೆ ಒಳಪಡಿಸಬೇಕು. ಏನೂ ಅರಿಯದ ಚಿಕ್ಕ ಹುಡುಗಿಯನ್ನು ಪುಸಲಾಯಿಸಿ ಕೃತ್ಯ ಎಸಗಲಾಗಿದೆ. ನನ್ನ ಮಗಳಿಗೆ ಆದ ಅನ್ಯಾಯಕ್ಕೆ ನ್ಯಾಯ ಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಾಲ್ವರು ಯುವಕರು ನಗರದ ನಿವಾಸಿ ಗವಿಸಿದ್ಫಪ್ಪ ನಾಯ್ಕ್ ಎಂಬುವನನ್ನು ನಿರ್ಮಿತಿ ಕೇಂದ್ರ ನಗರದಲ್ಲಿನ ಬಹದ್ದೂರ್ ಬಂಡಿ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿದ್ದರು. ಬಳಿಕ ಪ್ರಮುಖ ಆರೋಪಿ ಸಾದಿಕ್ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಕೊಪ್ಪಳ | ಗವಿಸಿದ್ದಪ್ಪ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಎಸ್‌ಯುಎಮ್ ಆಗ್ರಹ