ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಕ್ಕೆ ಯತ್ನಿಸಿ, ಕೊಲೆಗೈದಿದ್ದ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ಆರೋಪಿಯು ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡು ಹಾರಿಸಲಾಗಿದ್ದು, ಆರೋಪಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಹುಬ್ಬಳಿಯ ಅಶೋಕನಗರದಲ್ಲಿ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಚಾಕೊಲೇಟ್ ಕೊಡಿಸುವ ಆಮಿಷವೊಡ್ಡಿ ಆರೋಪಿಕರೆದೊಯ್ದಿದ್ದ. ಆಕೆಯ ಮೇಲೆ ಅತ್ಯಚಾರಕ್ಕೆ ಯತ್ನಿಸಿ, ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಬಾಲಕಿಯ ಮೃತದೇಹ ಪಾಳುಬಿದ್ದ ಶೌಚಾಲಯದಲ್ಲಿ ಪತ್ತೆಯಾಗಿತ್ತು.
ಆರೋಪಿಯ ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆರೋಪಿಯನ್ನು ಬಿಹಾರ ಮೂಲದ ರಿತೇಶ್ ಕುಮಾರ್ ಎಂದು ಗುರುತಿಸಲಾಗಿತ್ತು.
ಬಾಲಕಿ ಹತ್ಯೆಯ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆರೋಪಿಯನ್ನು ಎನ್‌ಕೌಂಟರ್ ಮಾಡಬೇಕು ಎಂದು ಆಗ್ರಹಿಸಿ ಪೋಷಕರು ಮತ್ತು ಸಾರ್ವಜನಿಕರು ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಈ ಬೆನ್ನಲ್ಲೇ, ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದಾರೆ.
ಆರೋಪಿಯನ್ನು ಬಂಧಿಸುವ ವೇಳೆ ಆತ ಪೊಲೀಸರ ಮೇಲೆ ದಾಳಿ ಮಾಡಿ, ಓಡಿ ಹೋಗಲು ಯತ್ನಿಸಿದ್ದ. ಆತ್ಮರಕ್ಷಣೆಗಾಗಿ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿದ್ದರು ಎಂದು ಹೇಳಲಾಗಿದೆ. ಆರೋಪಿ ಬೆನ್ನಿಗೆ ಗುಂಡು ತಗುಲಿತ್ತು. ಆತನನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆರೋಪಿ ಮೃತಪಟ್ಟಿದ್ದಾನೆ..
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, “ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಮಾಡಲಾಗಿತ್ತು. ಆರೋಪಿ ಹುಬ್ಬಳ್ಳಿ ಹೊರವಲಯದ ತಾರಿಹಾಳ ಬಳಿ ವಾಸವಿದ್ದನು. ಆತನನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ದಾಳಿ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ, ಪಿಎಸ್ಐ ಅನ್ನಪೂರ್ಣ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ, ಆರೋಪಿ ಓಡಿ ಹೋಗಲು ಯತ್ನಿಸಿದ್ದು, ಆತನ ಮೇಲೆ ಫೈರಿಂಗ್ ಮಾಡಿದ್ದಾರೆ. ಆರೋಪಿಯ ಬೆನ್ನಿಗೆ ಗುಂಡು ತಗುಲಿತ್ತು. ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಮೃತಪಟ್ಟಿದ್ದಾನೆ. ಇಂತಹ ಗಂಭೀರ ಪ್ರಕರಣದಲ್ಲಿ ಆರೋಪಿಯನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ.
ಆದಾಗ್ಯೂ, ಪೋಷಕರು ಮತ್ತು ಸಾರ್ವಜನಿಕರ ಆಕ್ರೋಶವನ್ನು ಥಣಿಸಲು ಆರೋಪಿಯನ್ನು ಎನ್‌ಕೌಂಟರ್ ಮಾಡಿರಬಹುದು ಎಂಬ ಅನುಮಾನಗಳೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿವೆ. ಈ ಹಿಂದೆ, ಆಂಧ್ರಪದೇಶದ ಪಶು ವೈದ್ಯೆ ಕೊಲೆ ಪ್ರಕರಣದಲ್ಲಿಯೂ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು.