ಕೊಡಗು | ಭಯದಲ್ಲೇ ದಿನ ದೂಡುವ ಆದಿವಾಸಿಗಳು; ಪರ್ಯಾಯ ವ್ಯವಸ್ಥೆಗೆ ಮನವಿ

Date:

Advertisements

“ಭಯಲ್ಲೇ ದಿನ ದೂಡುವ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಗೋಣಿಗದ್ದೆ ಹಾಡಿ ಆದಿವಾಸಿಗಳು. ದಿನ ಬೆಳಗಾದರೆ ಭಯ, ಎಲ್ಲಿ ಯಾವ ಪ್ರಾಣಿಗೆ ಆಹಾರ ಆಗ್ತಿವೋ ಅನ್ನುವಷ್ಟು ಹೆದರಿಕೆಯ ಬದುಕು. ದಾರಿಯುದ್ಧಕ್ಕೂ ಪ್ರಾಣಿಗಳ ಹೆಜ್ಜೆ ಗುರುತು, ಓಡಾಟ. ಎಲ್ಲಾದರೂ ಸರಕ್ ಅಂದರೆ ಪ್ರಾಣವೆ ಹೋದಂತ ಅನುಭವ”.

ಈ ರೀತಿಯ ಭಯದ ವಾತಾವರನ ಸೃಷ್ಟಿಯಾಗಿರುವುದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕು ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ನಾಲ್ಕೇರಿ ಪಂಚಾಯ್ತಿಗೆ ಒಳಪಡುವ ಗೋಣಿಗದ್ದೆಯಲ್ಲಿ. ಇಲ್ಲಿನ ಹಾಡಿ ಆದಿವಾಸಿಗಳ ದಿನನಿತ್ಯದ ಕಷ್ಟ ಹೇಳತೀರದು. ಭಯ ಅನ್ನೋದು ಬರೀ ಕಾಡು ಪ್ರಾಣಿಗಳ ಹಾವಳಿ ಅಷ್ಟೇ ಅಲ್ಲ ಜೀವನವು ನರಕ. ಇರೋದು ಕಾಡಲ್ಲಿ. ಬದುಕಲು ನಾಡಿನ ಆಸರೆ ಅಗತ್ಯ. ಯಾಕಂದ್ರೆ ಕಾಡಲ್ಲಿ ಬದುಕಲು ಇವತ್ತಿನ ಅರಣ್ಯ ಇಲಾಖೆ ಕಾನೂನು ಬಿಡಲ್ಲ. ಅಲ್ಲಿಯ ಉತ್ಪನ್ನ ಸಹ ಬಳಸಲು ಆಗದ ಪರಿಸ್ಥಿತಿ. ಕಾಡಿನಲ್ಲಿ ಆಸರೆಗಾಗಿ ಉಳಿಸಿಕೊಂಡಿದ್ದ ಅಷ್ಟೋ ಇಷ್ಟು ಗದ್ದೆ ಜಾಗ ಎಲ್ಲ ಅರಣ್ಯ ಕಾಯ್ದೆ ಹೆಸರಿನಲ್ಲಿ ಕಿತ್ತುಕೊಂಡಾಗ ಬದುಕು ಭಯದ ನಡುವೆಯೇ ಮುಂದೇನು ಅನ್ನುವಂತೆ ಪ್ರಶ್ನೆ ಹುಟ್ಟಾಕಿದೆ.

ಆದಿವಾಸಿಗಳು ಸಹಜವಾಗಿ ಕಾಡಿನ ಮಕ್ಕಳು. ಅವರಿಗೆ ಕಾಡೇ ಎಲ್ಲ. ಕಾಡು ಮೇಡು ಅವರ ಬದುಕು. ಇದ್ದರು, ಸತ್ತರೂ ಕಾಡನ್ನೇ ಬಯಸುವ ಜೀವಗಳು.ಕಾಡಿನ ಮೇಲೆ ಮೋಹ-ವ್ಯಾಮೋಹ, ಅದು ನನ್ನದು, ನಮ್ಮದು ಅನ್ನುವಂತದ್ದು ವಿನಃ ಕಾಡನ್ನ ಕೊಳ್ಳೆ ಹೊಡೆಯುವ, ದೋಚುವ, ಪ್ರಾಣಿ-ಪಕ್ಷಿಗಳಿಗೆ ತೊಂದರೆ ಕೊಡುವ ಬದುಕಲ್ಲ.

Advertisements

ಕಾಡು ಅಂದರೆ ಆದಿವಾಸಿಗಳಿಗೆ ಪಂಚಪ್ರಾಣ. ಇದುವರೆಗೆ ಯಾವೊಬ್ಬ ಆದಿವಾಸಿ ಪಟ್ಟಣ ಸೇರಲು ಬಯಸಿಲ್ಲ. ಐಶಾರಾಮಿ ಜೀವನ, ಆಧುನಿಕತೆ ಬದುಕಲ್ಲಿ ಜೀವ ತೇದಿಲ್ಲ. ಗುಡಿಸಲಿನಲ್ಲಿ ಬದುಕು. ಯಾವುದೇ ನಾಗರಿಕ ಸಮಾಜದ ಸಂಬಂಧ ಇಲ್ಲ. ಕಾಡು ಪ್ರಾಣಿಗಳ ನಡುವೆಯೇ ಬದುಕು ಕಟ್ಟಿ ನಿಂತವರು.

ಎಷ್ಟೇ ಕಷ್ಟ, ಕಠಿಣ ಪರಿಸ್ಥಿತಿ ಬಂದರೂ ಕಾಡು ನಮ್ದು ಅಂತೇಳಿ ಜೀವಕ್ಕೆ ಜೀವವಾಗಿ ತಮ್ಮಲ್ಲಿ ಉಳಿಸಿಕೊಂಡ ಜೀವಗಳು. ಕನಿಷ್ಠ ಮನುಷ್ಯತ್ವ ಇರದ ನಾಗರಿಕ ಸಮಾಜ ಇವರನ್ನು ಮನುಷ್ಯರಂತೆಯೂ ಕಂಡಿಲ್ಲ. ಅವರ ಜತೆ ಅನೂನ್ಯ ಬಾಂಧವ್ಯ ಹೊಂದಿಲ್ಲ. ಅವರು ಅಷ್ಟೇ.. ಮುಜುಗರ, ನಾಚಿಕೆ, ಅಂಜಿಕೆಯಿಂದ ಬಳಿ ಬಂದಿಲ್ಲ. ಮುಗ್ಧರನ್ನ ತೀರ ಕೆಟ್ಟದ್ದಾಗಿ ಸ್ವೀಕರಿಸಿದ ಆಳುವ ವರ್ಗ, ಅಧಿಕಾರಿಗಳು ಶೋಷಣೆ ಮಾಡುತ್ತಾ ಸಾಗಿದರೇ ಹೊರತು ಜೀವವಿರುವ ಜೀವಕ್ಕೆ ಬೆಲೆ ಕೊಡದೆ ನಿಕೃಷ್ಟವಾಗಿ ಕಾಣುತ್ತಾ, ಕಾಡು ಪ್ರಾಣಿಗಳಿಗೂ ಕಡೆಯಾಗಿ ಕಂಡಿದ್ದಾರೆ. ನಾಡಿನಲ್ಲಿ ಕಾಡು ಪ್ರಾಣಿಗಳಿಗೆ ಮಹತ್ವ ಇದೆ. ಕಾಡು ಪ್ರಾಣಿಗಳಿಗೆ ಸ್ವಲ್ಪ ತೊಂದರೆ ಆದರೆ, ತೊಂದರೆ ಮಾಡಿದರೆ ಕಟ್ಟು ನಿಟ್ಟಾದ ಕ್ರಮವಹಿಸುವ ಕಾನೂನಿನ ವ್ಯವಸ್ಥೆ ಇದೆ, ದಂಡನೆ ಇದೆ, ಶಿಕ್ಷೆ ಇದೆ.

ಆದರೆ ಅದೇ ಕಾಡಿನಲ್ಲಿ ಬಾಳುವ ಆದಿವಾಸಿ ಜೀವಗಳಿಗೆ ಬೆಲೆ ಇಲ್ಲ. ಪ್ರಾಣಿಗಳಿಂದ ಸತ್ತರೂ ಪರಿಹಾರ ಅಷ್ಟೇ ಆತನ ಬೆಲೆ. ಅದೆ ಒಂದು ಪ್ರಾಣಿ ಸತ್ತರೆ ಅದಕ್ಕೆ ಕಾನೂನು ನಿರ್ದಾಕ್ಷಿಣ್ಯವಾಗಿ ಅರಣ್ಯ ಕಾಯ್ದೆ ಅನ್ವಯ ಶಿಕ್ಷೆಗೆ ಗುರಿ ಮಾಡುತ್ತೆ. ಅದೇ ಮನುಷ್ಯ ಸತ್ತರೆ ಕೇವಲ ಹಣ. ಆತನ ಬೆಲೆ ಶೂನ್ಯ. ಇನ್ನ ಆದಿವಾಸಿ ಜನ ನಾಗರಿಕರು ಅಲ್ಲ. ವಿದ್ಯಾವಂತರು ಅಲ್ಲವೇ ಅಲ್ಲ. ಅವರ ಸಾವು ಅಲ್ಲಿಯೇ ವ್ಯವಸ್ಥೆ ಜತೆಯಲ್ಲಿ ಹೊಸೆದುಕೊಂಡಿದೆ. ಅದೆ ಅಂತಿಮ ಮತ್ತೇನು ಇಲ್ಲ. ಇದ್ದರೆ ನಾಲ್ಕು ದಿನ ಕೂಲಿ ಮಾಡಿ ಬದುಕೋದು, ಸತ್ತರೆ ಕಾಡಲ್ಲಿ ಮಣ್ಣಾಗೋದು.. ಇದಿಸ್ಟೇ ಬದುಕು ಎನ್ನುವಂತಾಗಿದೆ.

ಒಂದು ವೇಳೆ ಆನೆ ತುಳಿದು ವ್ಯಕ್ತಿ ಸತ್ತರೆ ಅಧಿಕಾರಿಗಳಿಂದ, ಇಲಾಖೆಯಿಂದ ಬರುವ ಉತ್ತರ ʼಕಾಡು ಪ್ರಾಣಿಗಳು ಇರುವ ಕಡೆ ಯಾಕೆ ಹೋದ? ಕಾಡಿನಲ್ಲಿ ಏನು ಕೆಲಸ? ಅಕ್ರಮವಾಗಿ ಕಾಡಿಗೆ ಹೋದ ಅಲ್ಲಿ ಸತ್ತʼ. ಇದು ಸಿದ್ದ ಉತ್ತರ. ಯಾರಾದರೂ ಸಾಯಲು ಪ್ರಾಣಿಗಳ ಹುಡುಕಿ ಹೋಗ್ತಾರ? ಕಾಡಿನಲ್ಲಿ ಇರುವಾಗ, ಕಾಡಿನ ಮಧ್ಯೆ ಇರುವಾಗ ಕಾಡಿಗೆ ಯಾಕೆ ಹೋದೆ ಅನ್ನುವ ಮಾತಿನ ಅಗತ್ಯತೆ ಇರುತ್ತ? ಇದೆ ನಮ್ಮ ಸುತ್ತಲಿನ ಕೆಟ್ಟ ವ್ಯವಸ್ಥೆ. ಬದುಕಲು ಇರದ ಕಾಯ್ದೆ, ಕಾನೂನು ಸತ್ತಾಗಲೂ ಅನ್ವಯ ಆಗಲ್ಲ. ಆದಿವಾಸಿ ಕಾಡಿನಲ್ಲಿ ಪ್ರಾಣಿಗಳಿಗೂ ಕಡೆಯಾಗಿ ಸಾಯ್ತಾನೆ, ಪರಿಹಾರ ಬಂತ, ಆ ಮನೆಯವರಿಗೆ ಬದುಕು ಕೊಡ್ತಾ ಅಂದ್ರೆ ಇಲ್ಲ. ಎಲ್ಲವೂ ತೇಪೆ ಹಚ್ಚುವ ಕೆಲಸ. ನಿಗದಿತ ಪರಿಹಾರವೂ ಇಲ್ಲ. ಆ ಕುಟುಂಬಕ್ಕೆ ಆಸರೆಯೂ ಇಲ್ಲ. ಕಾಡಿಗೆ, ಕಾಡಿನ ಬದುಕಿಗೆ ಆಹಾರ ಆಗಿದ್ದಷ್ಟೇ ಜೀವನ.

ಸುಮಾರು 60 ರಿಂದ 70 ಕುಟುಂಬಗಳು ವಾಸವಿದ್ದ ಹಾಡಿಯಲ್ಲಿ ಪುನರ್ವಸತಿ ಹೆಸರಲ್ಲಿ ಸುಮಾರು 40 ಕ್ಕೂ ಹೆಚ್ಚು ಕುಟುಂಬಗಳನ್ನು ಐಟಿಡಿಪಿ ಇಲಾಖೆ ಸ್ಥಳಾಂತರ ಮಾಡಿ ಆ ಜನಗಳ ಬದುಕನ್ನ ಅತಂತ್ರ ಮಾಡಿದೆ. ಕಾಡನ್ನೇ ನಂಬಿ ಕಾಡನ್ನೇ ಉಸಿರು ಅಂದುಕೊಂಡ ಕುಟುಂಬಗಳು ಇನ್ನೂ ಅಲ್ಲಿಯೇ ಇವೆ. ಮುಖ್ಯ ರಸ್ತೆಯಿಂದ ಮೂರು ಕಿಮೀ ಕಾಡಿನೊಳಗೆ ನಡೆದೇ ಸಾಗಬೇಕು. ಮರಳಿ ನಡೆದೇ ಬರಬೇಕು. ಇದ್ದ ರಸ್ತೆ ಪೂರ್ಣವಾಗಿ ಹಾಳಾಗಿದೆ. ವನ್ಯ ಮೃಗಗಳ ಸಂಚಾರದ ಕಾಡಿನಲ್ಲಿ ದಿನನಿತ್ಯ ಓಡಾಟ ನಿಜಕ್ಕೂ ಭಯಾನಕ. ನಾಗರಹೊಳೆ ಹೇಳಿಕೇಳಿ ಹುಲಿ ಸಂರಕ್ಷಿತ ಅಭಯಾರಣ್ಯ. ಕೇರಳ ಗಡಿ ಪ್ರದೇಶದ ಕುಟ್ಟ ವ್ಯಾಪ್ತಿಯಲ್ಲಿ ಇದೆ. ಬಹುತೇಕ ಅತಿ ದೊಡ್ಡ ವ್ಯಾಪ್ತಿಯ ಅರಣ್ಯ ಹೊದ್ದು ಮಲಗಿರುವ ಭೂ ಪ್ರದೇಶ.

“ನಾಗರಹೊಳೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು,ಕೊಡಗು ಜಿಲ್ಲಾ ವ್ಯಾಪ್ತಿಯ ವಿರಾಜಪೇಟೆ, ಪೊನ್ನಂಪೇಟೆ,ಕುಟ್ಟ
ಸೇರಿದಂತೆ ಅಂತರ್ ರಾಜ್ಯ ಗಡಿಗಳಾದ ಕೇರಳ ಹಾಗೂ ಕರ್ನಾಟಕ ಒಳಗೊಂಡಂತೆ ದೊಡ್ಡ ವ್ಯಾಪ್ತಿ ಹೊಂದಿರುವ ಅರಣ್ಯ. ಬಹುಪಾಲು ವನ್ಯಜೀವಿಗಳ ಸ್ವರ್ಗ.ಇಂತಹ ಘನಘೋರ ಜಾಗದಲ್ಲಿ ಆದಿವಾಸಿಗಳ ಬದುಕು ಕಣ್ಣಾರೆ ಕಂಡವರಿಗೆ ಮಾತ್ರ ಅದರ ಅರಿವು ಬರಲು ಸಾಧ್ಯ. ಹೇಳಿದರೆ,ಕೇಳಿದರೆ ಅದರ ಕಲ್ಪನೆ ಪರಿಕಲ್ಪನೆ ಅನಿಸಬಹುದು ಹೊರತು ಆ ಕೆಟ್ಟ ಬದುಕಿನ ಅನಾವರಣದ ಚಿತ್ರಣ ಸಿಗಲಾರದು.ಇದು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಸಹ ಒಳಗೊಂಡ ನೈಸರ್ಗಿಕ ತಾಣದ ಮತ್ತೊಂದು ಮುಖ “.

ನಾಗರಹೊಳೆ ಹೊರಗಿನ ಜಗತ್ತಿಗೆ ಕಾಡು, ಅಭಯಾರಣ್ಯ ಆದರೆ ಕಾಡಿನಲ್ಲಿ ಹುಟ್ಟಿ ಬೆಳೆದ ಆದಿವಾಸಿ, ಬುಡಕಟ್ಟು ಜನಕ್ಕೆ ಅದೇ ವಾಸಸ್ಥಾನ. ಆದರೆ ಮನುಷ್ಯರಂತೆ ನಡೆಸಿಕೊಳ್ಳದ ಬದುಕು. ಸೂರಿಲ್ಲ, ವಿದ್ಯೆ ಇಲ್ಲ, ನಾಡಿನ ಸಾಂಗತ್ಯವಿಲ್ಲ. ಹೇಳೋರು ಕೇಳೋರು ಇಲ್ಲವೇ ಇಲ್ಲ. ಬದುಕು ಅಲ್ಲೇ ಕಂಡು ಅಲ್ಲೇ ಅಂತ್ಯ ಕಾಣುವ ದುಸ್ಥಿತಿ.

ಈದಿನ ಡಾಟ್ ಕಾಮ್ ವರದಿಗಾರ ಕಾಡು ಹೊಕ್ಕಾಗ ಕಂಡಿದ್ದು ನಿಜಕ್ಕೂ ಭೀಕರ ಕಾಡು ಹಾದಿ. ಕಾಡಿನ ಮೃಗಗಳು. ಅತ್ತ ಇತ್ತ ನಡೆದೇ ಸಾಗಬೇಕಾದ ಕಠಿಣ ದಾರಿ. ಯಾವುದೇ ಭದ್ರತೆ ಇಲ್ಲ. ಮಳೆಗಾಲದಲ್ಲಿ ಕಾಡು ಸಮೃದ್ಧಿಯಾಗಿ ಬೆಳೆದು ಪೊದೆಯಂತೆ ಗಿಡಗಂಟಿಗಳು ಬೆಳೆದು ನಿಂತಾಗ ಪ್ರಾಣ ಕೈಲಿ ಹಿಡಿದು ಸಾಗಬೇಕು. ಯಾವ ಪ್ರಾಣಿ ಎಲ್ಲಿದೆ, ಯಾವ ಕಡೆ ಬರುತ್ತೆ. ಯಾವ ರೀತಿಯಲ್ಲಿ ದಾಳಿ ಮಾಡುತ್ತೆ ಗೊತ್ತಿಲ್ಲ.

ಸಾಕಷ್ಟು ಜನ ಆನೆ ತುಳಿತಕ್ಕೆ, ಹುಲಿ, ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಹೆಣ್ಣು ಮಕ್ಕಳು ಓಡಾಡುವಂತೆ ಇಲ್ಲ. ಎಷ್ಟು ಕಠಿಣವಾಗಿದೆ ಪರಿಸ್ಥಿತಿ ಅಂದ್ರೆ ಗುಂಪಲ್ಲಿ ಓಡಾಡಬೇಕು. ಸಂಜೆ 6 ಗಂಟೆಯಿಂದ ಬೆಳಗ್ಗೆ 6 ರ ವರೆಗೆ ಓಡಾಟ ನಿಷಿದ್ಧ. ಬೆಳಗಾದರೆ ಸಾಕು ಕೂಲಿ ಕೆಲಸಕ್ಕೆ ಕಾನೂರು, ಬಾಳಲೇ, ಕುಟ್ಟ ಭಾಗಕ್ಕೆ ಕಾಡಿಂದ ನಡೆದು ಬಂದು ತೋಟದ ಕೆಲಸಕ್ಕೆ ಹೋಗಬೇಕು. ಅಲ್ಲಿಂದ ಕೆಲಸ ಮುಗಿಸಿ ಸಂಜೆ ಸಮಯದಲ್ಲಿ ಮರಳಬೇಕು.

ತಡ ಆದರೆ ಜೀವಕ್ಕೆ ಅಪಾಯ. ಹೆಣ್ಣು ಮಕ್ಕಳಿಗೆ ಯಾವ ಭದ್ರತೆಯೂ ಇಲ್ಲ. ಕುಡಿಯುವ ನೀರಿಗೆ ನಾಗರಹೊಳೆ ಅವಲಂಬನೆ, ಅಲ್ಲಿ ಗುಂಡಿಗಳನ್ನು ಮಾಡಿ ನೀರು ನಿಲ್ಲಿಸಿ ಆ ನೀರನ್ನು ಕುಡಿಯಲು ಬಳಸುತ್ತಾರೆ. ಇನ್ನ ತೋಡುಗಳಲಿ ಹರಿಯುವ ನೀರು ದೈನಂದಿನ ಬದುಕಿಗೆ ಬಳಸಬೇಕು. ಅದಕ್ಕಾಗಿ ಹೆಣ್ಣು ಮಕ್ಕಳು ದಿನನಿತ್ಯ ಕಷ್ಟ ಪಡಬೇಕು. ಅದರಲ್ಲೂ ಕಾಡು ಪ್ರಾಣಿಗಳ ಕುಡಿಯುವ ನೀರಿನ ಆಸರೆ ಸಹ ಅದೇ ಆಗಿರುವುದರಿಂದ ಭಯದಲ್ಲಿ ಸಾಗುವ ಪರಿಸ್ಥಿತಿ ಯಾವ ಪ್ರಾಣಿ ಇದಿಯೋ, ಇನ್ಯಾವ ಪ್ರಾಣಿ ಹಿಂದೆ ಬರುತ್ತೋ ಅನ್ನುವ ಸ್ಥಿತಿ ಇದೆ ಎಂದು ಅಲ್ಲಿನ ಅಮಾಯಕ ಆದಿವಾಸಿ ಜನ ಅಳಲು ತೋಡಿಕೊಂಡರು.

ಇಡೀ ಜೀವನವೇ ನಾಗರಿಕತೆ ಇರದ ಅನಾಗರಿಕತೆಯ ಬದುಕಾಗಿದೆ. ಈ ಮೊದಲು ವಿದ್ಯುತ್ ಕಂಬಗಳು, ವಿದ್ಯುತ್ ಸಂಪರ್ಕ ಎಲ್ಲವೂ ಇತ್ತು. ಅದನ್ನೆಲ್ಲ ಅರಣ್ಯ ಇಲಾಖೆ ಅಧಿಕಾರಿಗಳು ವ್ಯವಸ್ಥಿತವಾಗಿ ನೆಲಕ್ಕುರುಳಿಸಿದ್ದಾರೆ. ಅದೆಲ್ಲ ಇದ್ರೆ ಜನ ವಸತಿ ಇತ್ತು ಎಂದು ಪ್ರತಿಪಾದನೆ ಮಾಡ್ತೀವಿ ಅಂತ.. ಎಂದು ಆರೋಪಿಸಿದರು.

ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘಟನೆಯ ಕೊಡಗು ಜಿಲ್ಲಾ ಮುಖಂಡ ನಿರ್ವಾಣಪ್ಪ ಮಾತನಾಡಿ, “ಗೋಣಿಗದ್ದೆ ಹಾಡಿ ಜನಕ್ಕೆ ಕಾಡಿನ ಒಳಗೆ ಹಕ್ಕುಪತ್ರ ಕೊಟ್ಟಿದ್ದಾರೆ. ಅಲ್ಲಿ ಬದುಕಲು ಸಾಧ್ಯವಿಲ್ಲ. ಕೂಲಿಗೆ ಕಾಡಿನಿಂದ ಹೊರಗೆ ಬರಬೇಕು. ದಿನನಿತ್ಯ 6 ಕಿಮೀ ನಡೆದು ಸಾಗಬೇಕು. ಮಳೆಗಾಲದಲ್ಲಿ ಸಾಧ್ಯವೇ ಇಲ್ಲ. ಕಾಡು ಪ್ರಾಣಿಗಳ ಹಾವಳಿ. ಈಗಾಗಲೇ ಸಾಕಷ್ಟು ಜನ ಕಾಡು ಪ್ರಾಣಿಗಳಿಗೆ ಸತ್ತಿದ್ದಾರೆ. ಇಲ್ಲಿ ಇರುವ ಮಕ್ಕಳಿಗೆ ಶಿಕ್ಷಣ ಇಲ್ಲ. ಹೆಚ್ಚಿನ ವಿದ್ಯಾಭ್ಯಾಸ ಖಂಡಿತ ಸಿಗಲ್ಲ. ಕಿರಿಯ ಪ್ರಾಥಮಿಕ ಹಂತಕ್ಕೆ ಶಿಕ್ಷಣ ಮೊಟಕಾಗುತ್ತೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ಇಲ್ಲಿನ ಮಕ್ಕಳ ಬದುಕು ಡೋಲಾಯಮಾನವಾಗಿದೆ. ಹೆಣ್ಣು ಮಕ್ಕಳಂತು ಹೊರ ಜಗತ್ತನ್ನು ನೋಡಲು ಸಾಧ್ಯವೇ ಇಲ್ಲ ಎನ್ನುವಂತಹ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ಈಗಿರುವ ಜಾಗದಿಂದ ರಸ್ತೆ ಸಮೀಪಕ್ಕೆ ಅದೆ ಸರ್ವೇ ನಂಬರ್ ಜಾಗದ ಹಕ್ಕುಪತ್ರ ಅನುಸಾರ ಬದಲಿ ಜಾಗ ಕೊಡಬೇಕು. ಆದಿವಾಸಿ ಕುಟುಂಬಗಳ ಬದುಕಿಗೆ ಆಸರೆ ಆಗಬೇಕು. ರಸ್ತೆ ಸಮೀಪದಲ್ಲಿ ಮನೆ ಕಟ್ಟಿಕೊಟ್ಟರೆ, ಅಲ್ಲೇ ಅಂಗನವಾಡಿ, ಶಾಲೆ ಆದರೆ ಆಯಾ ಸುತ್ತಲಿನ ಮಕ್ಕಳು ಸಹ ಕಲಿಯಲು ಬರಬಹುದು. ಆದಿವಾಸಿ ಜನಜೀವನ ಕಿಂಚಿತ್ತಾದರೂ ಸುಧರಣೆಗೊಳ್ಳಬೇಕಿದೆ. ಇಲ್ಲವಾದಲ್ಲಿ ಅವರ ಬದುಕು ಯಾವುದಕ್ಕೂ ಬೇಡದಂತಹ ಕೆಟ್ಟ ಪರಿಸ್ಥಿತಿಯಲ್ಲಿ ಕಳೆದು ಹೋಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿ ಈದಿನ ಡಾಟ್ ಕಾಮ್ ಮೂಲಕ ಸಂಬಂಧಪಟ್ಟ ಸಚಿವರು,ಸರ್ಕಾರ ಇತ್ತ ಕಡೆ ಗಮನ ಹರಿಸಿ ಆದಿವಾಸಿಗಳಿಗೆ ಅಗತ್ಯ ಸವಲತ್ತು ಕಲ್ಪಿಸಿಕೊಡಬೇಕು ಎಂದು ನಿರ್ವಾಣಪ್ಪ ಮನವಿ ಮಾಡಿದರು.

ಆದಿವಾಸಿ ಮುಖಂಡ ದಾಸಪ್ಪ ಮಾತನಾಡಿ, “ಇಲ್ಲಿ ಇರಲು ಆಗ್ತಾ ಇಲ್ಲ. ಮಳೆಗಾಲದಲ್ಲಿ ಕಾಡು ಪ್ರಾಣಿಗಳು ಗುಡಿಸಲು ಹತ್ತಿರ ಬರ್ತಾವೆ. ಈಗ ಬೇಸಿಗೆ ಆಹಾರ, ನೀರು ಅರಸಿ ಮನೆಯಂಗಳದ ಕಡೆ ಬರುತ್ತಿವೆ. ರಾತ್ರಿ ಮನೆ ಮಂದಿ ಮಲಗಿದರೆ ಗಂಡಸರು ರಾತ್ರಿ ಎಚ್ಚರ ಇದ್ದು ಕಾಡು ಪ್ರಾಣಿಗಳ ಕಡೆಗೆ ನಿಗಾ ವಹಿಸಬೇಕು. ಹೆಣ್ಣು ಮಕ್ಕಳು ಸ್ನಾನ ಮಾಡಲು, ಶೌಚಾಲಯಕ್ಕೆ ಹೋಗಲು ವ್ಯವಸ್ಥೆ ಇಲ್ಲ. ಕಾಡಿಗೆ ಹೋಗಬೇಕು. ನಮ್ಮದೂ ಒಂದು ಬದುಕ ಅನಿಸಿಬಿಟ್ಟಿದೆ. ಇದ್ದ ಗದ್ದೆಯೆಲ್ಲ ಕಿತ್ತುಕೊಂಡು ಬಿದಿರು ನೆಟ್ಟು ಇದೆಲ್ಲ ಕಾಡು ಅಂತೇಳಿ ಬಿಂಬಿಸಿದರು” ಎಂದರು.

“ಈಗ ಬದುಕಬೇಕು ಅಂದ್ರೆ ಕೂಲಿಗೆ ಹೋಗಬೇಕು. ಕಾಡಿನಲ್ಲಿ ಒಂದು ಹಸಿ ಕೊಂಬೆಯನ್ನು ಸಹ ಮುಟ್ಟುವಂತೆ ಇಲ್ಲ. ಕಾಡಿನ ಯಾವುದೇ ಉತ್ಪನ್ನ ಬಳಿಸುವಂತೆ ಇಲ್ಲ. ಎಲ್ಲದಕ್ಕೂ ಕಾಡಿನಿಂದ ಆಚೆ ಹೋಗಿ ತರಬೇಕು. ಇಂತಹ ತೊಂದರೆಯಿಂದ ಪಾರು ಮಾಡಿ ನಮ್ಮನ್ನು ಕಾಡಿನ ಒಳಗಿಂದ ರಸ್ತೆ ಸಮೀಪದಲ್ಲಿ ಈಗ ಕೊಟ್ಟಿರುವ ಹಕ್ಕುಪತ್ರ ಅನುಸಾರ ಅದಷ್ಟೇ ಜಾಗ ಕೊಡಿ. ಅಲ್ಲಿಯೇ ವ್ಯವಸ್ಥೆ ಮಾಡಿಕೊಡಿ” ಎಂದು ಮನವಿ ಮಾಡಿದರು.

ಆದಿವಾಸಿ ಮಹಿಳೆ ಮುತ್ತಮ್ಮ ಮಾತನಾಡಿ, “ನೀವೇ ನೋಡಿ ಇರೋದು ಪ್ಲಾಸ್ಟಿಕ್ ಹೊದಿಕೆಯ ಗುಡಿಸಲು. ಆನೆಗಳ ಹಿಂಡಿಗೆ, ಕಾಡು ಪ್ರಾಣಿಗಳಿಗೆ ಇದೆಲ್ಲ ಏನು ಅಲ್ಲ. ರಾತ್ರಿ ಆದ್ರೆ ಮನೆ ಸುತ್ತ ಇರ್ತಾವೆ. ಭಯ ಅಂದ್ರೆ ಭಯ ಆಚೆ ಬರಲು ಆಗಲ್ಲ. ನಮ್ಮ ಮನೆ ಸಿಮೆಂಟ್, ಇಟ್ಟಿಗೆ, ಕಬ್ಬಿಣ ಬಳಸಿ ಮಾಡಿಲ್ಲ ಇಂತಹ ಗುಡಿಸಲಿನಲ್ಲಿ ನಾವು ಬದುಕಬೇಕು. ರಾತ್ರಿ ಸಮಯ ಯಾವುದೇ ಕಾರಣಕ್ಕೂ ಆಚೆ ಬರಲು ಆಗಲ್ಲ. ಗಂಡು ಮಕ್ಕಳು ಹೇಗೋ ಇರ್ತಾರೆ, ಹೆಣ್ಣು ಮಕ್ಕಳು ಇಲ್ಲಿ ಪಡಬಾರದ ಕಷ್ಟ ಪಡ್ತಾರೆ. ಯಾವುದಕ್ಕೂ ನೆಮ್ಮದಿ ಇಲ್ಲ. ನಮಗೆ ಇಲ್ಲಿಂದ ರಸ್ತೆ ಹತ್ತಿರಕ್ಕೆ ಜಾಗ ಮಾಡಿಕೊಡಿ, ಇರಲು ಒಂದು ಮನೆ ಮಾಡಿಕೊಡಿ.

ಸರ್ಕಾರದವರು ರೇಷನ್ ಕೊಟ್ಟರೆ ಅದನ್ನ ಕಾಡಲ್ಲಿ ಮಳೆಯಲ್ಲಿ ತಲೆ ಮೇಲೆ ಹೊತ್ತಿಕೊಂಡು ಬರಬೇಕು. ಮನೆಗೆ ಬರೋದ್ರೊಳಗೆ ನೀರಲ್ಲಿ ಒದ್ದೆ ಆಗಿರುತ್ತೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ರಾತ್ರಿ ಯಾರಿಗಾದ್ರೂ ಹುಷಾರ್ ಇಲ್ಲ ಅಂದ್ರೆ ಅವರು ಸಾಯೋದೇ ದಾರಿ. ಬದುಕಬೇಕು ಅಂದ್ರೆ ಹಗಲು ಹೊತ್ತು ಯಾರಾದ್ರೂ ಕೆಲಸಕ್ಕೆ ಹೋಗದೆ ಇದ್ರೆ ಮಾತ್ರ ಬಚಾವ್ ಆಗ್ತೀವಿ. ಇಲ್ಲಾಂದ್ರೆ ಇಲ್ಲೇ ಬಿದ್ದು ಸಾಯಬೇಕು. ದಯಮಾಡಿ ಇದರಿಂದ ಮುಕ್ತಿ ಕೊಡಿ” ಎಂದು ಬೇಡಿಕೊಂಡರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಬಿಜೆಪಿ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸುವಂತೆ ಎಸ್‌ಡಿಪಿಐ ಒತ್ತಾಯ

ಇನ್ನಾದರು ಸಂಬಂಧಪಟ್ಟ ಇಲಾಖೆಗಳು, ತಾಲೂಕು ಆಡಳಿತ, ಶಾಸಕರು, ಸರ್ಕಾರ ಇತ್ತ ಗಮನಹರಿಸಿ ಆದಿವಾಸಿ ಬುಡಕಟ್ಟು ಜನಾಂಗದ ಹಿತ ಕಾಯುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಅಗತ್ಯ ಸೌಲಭ್ಯ ಕಲ್ಪಿಸಿಕೊಡಬೇಕು. ಈ ಕೆಲಸಕ್ಕೆ ಆಡಳಿತ ವರ್ಗ ಮುಂದಾಗಲಿದಿಯೇ ಎಂಬುದನ್ನು ಕಾದು ನೋಡಬೇಕಿದೆ.

WhatsApp Image 2025 02 05 at 18.09.20
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

Download Eedina App Android / iOS

X