ಸರ್ಕಾರಿ ಶಾಲೆಗೆ ಸ್ವಂತ ಕಟ್ಟಡವಿಲ್ಲದೆ, ವಿದ್ಯಾರ್ಥಿಗಳು ಸಮುದಾಯ ಭವನದಲ್ಲಿ ಪಾಠ ಕೇಳುತ್ತಿರುವ ಪರಿಸ್ಥಿತಿಗೆ ಯಾದಗಿರಿ ನಗರದ ವಾಲ್ಮೀಕಿ ಬಡಾವಣೆಯಲ್ಲಿ ಸಾಕ್ಷಿಯಾಗಿದೆ.
ಜಿಲ್ಲಾ ಕೇಂದ್ರವಾಗಿರುವ ಯಾದಗಿರಿ ನಗರದಲ್ಲಿಯೇ ಸರ್ಕಾರಿ ಶಾಲೆಯೊಂದಕ್ಕೆ ಸ್ವಂತ ಕಟ್ಟಡ ಇಲ್ಲದೇ ಇರುವುದು ಶಿಕ್ಷಣ ಕ್ಷೇತ್ರದ ಮೇಲಿನ ಸರ್ಕಾರ ಮತ್ತು ಅಧಿಕಾರಗಳ ಬೇಜವ್ದಾರಿ ಧೋರಣೆಗೆ ಕನ್ನಡಿ ಹಿಡಿದೆ. ವಾಲ್ಮೀಕಿ ಬಡಾವಣೆಯಲ್ಲಿ ಶಾಲೆ ಆರಂಭವಾಗಿ 17 ವರ್ಷಗಳು ಕಳೆದಿದ್ದರೂ, ಶಾಲೆಗೆ ಇನ್ನೂ ಸ್ವಂತ ಕಟ್ಟಡ ನಿರ್ಮಾಣವಾಗಿಲ್ಲ. ಹೀಗಾಗಿ, ಬಡಾವಣೆಯ ಮಶಮ್ಮ ದೇವಾಲಯದ ಸಮುದಾಯ ಭವನದಲ್ಲೇ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.
ವಾಲ್ಮೀಕಿ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 1ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಲು ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೂ, ಯಾವ ಸರ್ಕಾರವೂ ಶಾಲೆಗೆ ಕಟ್ಟಡ ಮಂಜೂರು ಮಾಡಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಇತ್ತ ಶಾಲಾ ಕಟ್ಟಡವೂ ಇಲ್ಲದೆ, ಅತ್ತ ಅಗತ್ಯವಿರುವಷ್ಟು ಶಿಕ್ಷಕರೂ ಇಲ್ಲದೆ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆಯಾಗುತ್ತಿದೆ. ಮಾತ್ರವಲ್ಲದೆ, ದೇವಸ್ಥಾನದ ಯಾವುದಾದರೂ ಕಾರ್ಯಕ್ರಮವಿದ್ದರೆ, ಶಾಲೆಗೆ ರಜೆ ನೀಡಿ ಸಮುದಾಯ ಭವನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ಇನ್ನು ಸಮುದಾಯ ಭವನ ಆಗಿರುವುದರಿಂದ ಯಾವುದೇ ಕೊಠಡಿಗಳೂ ಇಲ್ಲ. ಒಂದೆಡೆ ಶಿಕ್ಷಕರು, ಮತ್ತೊಂದೆಡೆ ವಿದ್ಯಾರ್ಥಿಗಳು ಕುಳಿತುಕೊಳ್ಳುತ್ತಿದ್ದಾರೆ. ಅಲ್ಲದೆ, ಒಂದೊಂದು ಮೂಲೆಯಲ್ಲಿ ಒಂದೊಂದು ತರಗತಿಗೆ ಪಾಠ ಮಾಡಲಾಗುತ್ತಿದೆ. ಏಳು ತರಗತಿಗಳಿಗೆ ಪಾಠ ಮಾಡುವಷ್ಟು ಜಾಗವೂ ಇಲ್ಲದಾಗಿದೆ ಎಂದು ತಿಳಿದುಬಂದಿದೆ.
ಕೂಡಲೇ ಶಾಲಾ ಕಟ್ಟಣ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು. ತರಗತಿಗಳಿಗೆ ಅಗತ್ಯವಿರುವಷ್ಟು ಕೊಠಡಿಗಳನ್ನು ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಮತ್ತು ಪೋಷಕರು ಒತ್ತಾಯಿಸಿದ್ದಾರೆ.