ಇಮ್ರೋಜ್‌ | ‘ನಡೆದಾಡುವ ತಾಜ್‌ಮಹಲ್’; ಅನಂತದಲ್ಲಿ ಲೀನವಾದ ಆತ್ಮಸಂಗಾತ

Date:

ಇಮ್ರೋಜ್‌ ಅವರ ಪ್ರೇಮದ ಪರಿಗೆ ವಿಸ್ಮಯ ಪಡುತ್ತೇನೆ, ಮೂಕವಾಗುತ್ತೇನೆ. ಅವರು ಈ ಲೋಕದ ವ್ಯಕ್ತಿಯಲ್ಲವೇ ಅಲ್ಲ. ಬೇರೊಂದು ಲೋಕದಿಂದ ದೇವರೇ ಅಮೃತಾರಿಗಾಗಿ ಕಳಿಸಿದ ದೂತನೆನೋ ಎನಿಸುತ್ತದೆ. ಅಪ್ಪಟ ಪ್ರೇಮಿ, ಆರಾಧಕ. ಅಮೃತಾರನ್ನು ನಿಜವಾಗಿ ಪ್ರೇಮಿಸಿದ್ದು, ಪೂಜಿಸಿದ್ದು ಇಮ್ರೋಜ್ ಒಬ್ಬರೇ…


ನಾನು
ಮೊಟ್ಟಮೊದಲ ಬಾರಿಗೆ ಇಮ್ರೋಜ್ ಅವರನ್ನು ಕಂಡದ್ದು ICCR ನಲ್ಲಿ ನಡೆದ ಒಂದು ಕವಿಗೋಷ್ಠಿಯಲ್ಲಿ. ಆಗಲೇ ದೆಹಲಿಯ ಪ್ರಖ್ಯಾತ ಹಿಂದಿ ಕವಿಗಳೆಲ್ಲಾ ಅವರನ್ನು “ಚಲತಾ ಫಿರತಾ ತಾಜ್ಮಹಲ್” ಎಂದು ಸಂಬೋಧಿಸಿ ವೇದಿಕೆಗೆ ಕರೆತಂದದ್ದು. ಅವತ್ತಿನಿಂದಲೂ ಈ ಚಲತಾ ಫಿರತಾ ತಾಜ್ಮಹಲ್ ನನ್ನನ್ನು ಕಾಡತೊಡಗಿತ್ತು. ಅಮೃತಾ ಪ್ರೀತಂ ಅವರ ಕಥೆಗಳನ್ನು, ಕಾದಂಬರಿಯನ್ನು ಓದಿದ್ದೆ. ಆದರೆ ಭೆಟ್ಟಿಯಾಗಿರಲಿಲ್ಲ. ಕವಿತೆಯ ಪುಟದಂತಿರುವ ಅವರ ತೆರೆದ ಬಾಗಿಲನ್ನು ತಟ್ಟುವ ಹೊತ್ತಿಗೆ ಅವರು ಇಲ್ಲವಾಗಿದ್ದರು. ಇಮ್ರೋಜ್‌ ನಸುನಗುತ್ತ ಸ್ವಾಗತಿಸಿದ್ದರು.

“ಆಪಕೋ ಕಭೀ ಉನಕಾ ನಾ ಹೋನೆ ಕಾ ಎಹಸಾಸ್ ಹುವಾ ಹೈ? ಅವರಿಲ್ಲದ ಶೂನ್ಯತೆ ಕಾಡಿದೆಯಾ?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಅಮೃತಾ ಜಿಸ್ಮ್ ಛೋಡಾ ಹೈ, ಮೇರಾ ಸಾಥ್ ನಹೀ ಛೋಡಾ” ಎಂದ ಇಮ್ರೋಜ್‌, ನಾನು ಮತ್ತು ಅಮೃತಾ ಒಂದಿಲ್ಲಾ ಒಂದಿನ ಭೇಟ್ಟಿಯಾಗೇ ಆಗುತ್ತಿದ್ದೆವು ಈ ಜನ್ಮದಲ್ಲಿ. ನಾನಂತೂ ಚಿಕ್ಕಂದಿನಿಂದಲೂ ಅವಳನ್ನು ಭೆಟ್ಟಿಯಾಗುವ ಕನಸಿನ ಬೆನ್ನೇರಿಯೇ ದೊಡ್ಡವನಾಗಿದ್ದೆ. ಅವಳು ದೇಹ ತ್ಯಜಿಸಿದ್ದಾಳೇ ಹೊರತು ನನ್ನ ಸಾಂಗತ್ಯವನ್ನಲ್ಲ. ನಾನು ಚಿಕ್ಕ ಹುಡುಗನಿಂದಲೂ ಆಕೆಯ ಬಗ್ಗೆ ಕೇಳುತ್ತಿದ್ದೆ. ಲಾಹೋರಿನಲ್ಲಿದ್ದಾಗ ಒಮ್ಮೆ ಅವಳ ವಿಳಾಸ ಹುಡುಕಿಕೊಂಡು ಹೊರಟಿದ್ದೆ. ಅರ್ಧದಾರಿ ನಡೆದು ಯೋಚಿಸಿದೆ, ಅವಳನ್ನು ಭೆಟ್ಟಿಯಾಗುವುದೇ ಆದರೆ ಏನಾದರೂ ಆಗಿ ಮತ್ತೆ ಅವಳನ್ನು ಕಾಣುತ್ತೇನೆ. ಈಗ ಅವಳು ನೀನು ಯಾರು?  ಯಾಕೆ ಬಂದೆ? ಏನಾಗಬೇಕಿತ್ತು? ಎಂದು ಕೇಳಿದರೆ ಏನುತ್ತರ ಕೊಡಲಿ? ಎಂದು ಸುಮ್ಮನೇ ವಾಪಸ್ ಬಂದೆ.  ಮುಂಬಯಿಯ ಆರ್ಟ್ಸ್ ಸ್ಕೂಲಿನಲ್ಲಿ ಚಿತ್ರಕಲೆಯನ್ನು ಕಲಿಯುವಾಗಲೂ ಆಕೆಯ ಬಗ್ಗೆಯೇ ಯೋಚಿಸುತ್ತಿದ್ದೆ.  ಅವಳನ್ನು ಕಾಣುವ ಯೋಗ ತಾನೇ ಕೂಡಿ ಬಂತು.

ನಾನು ಮೊಟ್ಟಮೊದಲ ಬಾರಿಗೆ ಅಮೃತಾಳನ್ನು ಭೆಟ್ಟಿಯಾಗಿದ್ದು 1957ರಲ್ಲಿ. ಆಗ ಅಮೃತಾ ತನ್ನ ಪುಸ್ತಕವೊಂದರ ಮುಖಪುಟ ವಿನ್ಯಾಸಕ್ಕೆ ಕಲಾವಿದರನ್ನು ಹುಡುಕುತ್ತಿದ್ದಳು. ಆಗಲೇ ಅವಳ ಪರಿಚಯದ ನನ್ನ ಗೆಳೆಯನೊಬ್ಬ ನನ್ನ ಹೆಸರನ್ನು ಸೂಚಿಸಿದನಂತೆ. ಫಿರ್ ಇಸೀ ಬಹಾನೆ ಹಮ್ ದೋನೊಂಕಾ ಮುಲಾಕಾತ್ ಹೋ ಗಯಿ…ಭೆಟ್ಟಿ ಗೆಳೆತನದಲ್ಲಿ, ಗೆಳೆತನ ಗಾಢವಾದ ಸ್ನೇಹದಲ್ಲಿ, ಸ್ನೇಹ ಪ್ರೇಮದಲ್ಲಿ ಪರಿವರ್ತನೆಯಾಯಿತು.

ಅಮೃತಾಪ್ರೀತಂ ಜೊತೆ ಇಮ್ರೋಜ್‌

ಹಾಗಂತ ನಾವು ಯಾವತ್ತೂ ಒಬ್ಬರಿಗೊಬ್ಬರು ಐ ಲವ್ ಯೂ ಹೇಳಲಿಲ್ಲ. ಹೇಳುವ ಅಗತ್ಯವೂ ಇದ್ದಿಲ್ಲ.  ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದೆವು”. ರಸೀದಿ ಟಿಕೇಟಿನಲ್ಲಿ ಅಮೃತಾ ಹೇಳುವ ಆಧೀ ರೋಟಿ, ಆಧಾ ಚಾಂದ್  ಘಟನೆ ಏನು ಹೇಳಿ ಅಂತಾ ಕೇಳಿದ್ದಕ್ಕೆ, ಇಮ್ರೋಜ್‌ ಪಟೇಲ್ ನಗರದ ಕತೆ ಹೇಳತೊಡಗಿದರು.

“ನನಗೆ ಅಮೃತಾ ಸಿಕ್ಕಾಗ, ಆಕೆ ಒಬ್ಬರ ಪತ್ನಿ, ಇಬ್ಬರು ಮಕ್ಕಳ ತಾಯಿ ಹಾಗೂ ಸಾಹಿರ್‌ನ ಪ್ರೇಯಸಿಯಾಗಿದ್ದಳು. ಆದರೆ ನನಗೆ ಇದ್ಯಾವುದೂ ಕಣ್ಣಿಗೆ ಕಾಣಿಸಲೇ ಇಲ್ಲ. ಕೇವಲ ಅಮೃತಾ ಮಾತ್ರ ಗೋಚರಿಸಿದ್ದಳು. ನನಗಾಗಿಯೇ, ನನಗೋಸ್ಕರವೇ ಅಮೃತಾ ಇದ್ದಾಳೆನ್ನುವ ಭಾಸ. ಆಗ ನಾನೂ ಪಟೇಲ್ ನಗರದಲ್ಲಿ ಅವಳ ಮನೆ ಹತ್ತಿರದಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ. ಮಕ್ಕಳು ಕಾಂಡ್ಲಾ ಹಾಗೂ ನವರಾಜ್ ಮಾಡರ್ನ್ ಸ್ಕೂಲಿಗೆ ಹೋಗುತ್ತಿದ್ದರು. ನಾನು ಒಂದು ಉರ್ದು ಪತ್ರಿಕೆಗಾಗಿ ಕೆಲಸಮಾಡುತ್ತಿದ್ದೆ.  ಕೆಲವೊಮ್ಮೆ ಸ್ಕೂಲ್ ಬಸ್ ಬರುವುದು ತಡವಾಗುತ್ತಿತ್ತು. ಆಗ ನನ್ನ ಹತ್ತಿರ ಸ್ಕೂಟರ್ ಇತ್ತು. ನಾನು ಊಟದ ವೇಳೆಗೆ ಕಚೇರಿ ಬಿಟ್ಟು, ಶಾಲೆಗೆ ಹೋಗಿ ಮಕ್ಕಳನ್ನು ಪಿಕ್ ಮಾಡಿ ನನ್ನ ಸ್ಕೂಟರಿನಲ್ಲಿ ತಂದು ಮನೆಗೆ ಬಿಡುತ್ತಿದ್ದೆ. ಯಹ್ ಕಾಮ್ ಮುಝೆ ಕಿಸೀನೆ ನಹೀ ಕಹಾ… ಮಾಡು ಅಂತಾ ಯಾರೂ ಹೇಳಲಿಲ್ಲ, ನಾನೇ ಸ್ವತಃ ಮಾಡತೊಡಗಿದ್ದೆ. ಮಾಡಬೇಕೆನಿಸಿತು… ಮಾಡತೊಡಗಿದೆ.

ಆಗೆಲ್ಲ ಅಮೃತಾಳ ಮನೆಯಲ್ಲಿ ಅಡುಗೆಗೆ ನೌಕರರಿದ್ದರು. ಆಕೆ ಯಾವತ್ತೂ ಅಡುಗೆ ಮಾಡಿದ್ದಿಲ್ಲ. ನಾನು ಮಕ್ಕಳನ್ನು ಕರೆತರತೊಡಗಿದಾಗ ಅಮೃತಾ ಸ್ವತಃ ತಾನೇ ಅಡುಗೆ ಮಾಡತೊಡಗಿದಳು. ಬಿಸಿಬಿಸಿ ರೋಟಿಯನ್ನು ಮಾಡಿ, ಮುಡಾದ ಮೇಲೆ ಕೂರಿಸಿ ತಿನ್ನು ಎಂದು ಉಪಚರಿಸುತ್ತಿದ್ದಳು. ಕೆಲವೊಮ್ಮೆ ಅವಳ ಪತಿ ಪ್ರೀತಂ ಸಿಂಗ್ ಕೂಡ, ನಿನ್ನಿಂದಾಗಿ ಅಮೃತಾಳ ಕೈಯಡುಗೆ ಸಿಗುತ್ತಿದೆ, ನೀನೂ ಊಟ ಮಾಡು – ಎಂದು ನಿಲ್ಲಿಸಿಕೊಳ್ಳುತ್ತಿದ್ದರು.

ಅಮೃತಾ ಆ ದಿನಗಳಲ್ಲಿ ರೇಡಿಯೋದಲ್ಲಿ ಪಂಜಾಬಿ ಉದ್ಘೋಷಕಿಯಾಗಿ ಕೆಲಸ ಮಾಡುತ್ತಿದ್ದಳು. ಅವಳನ್ನೂ ಸ್ಕೂಟರ್ ಮೇಲೆ ಹೋಗಿ ನಾನೇ ಬಿಟ್ಟು ಬರುತ್ತಿದ್ದೆ. ಅವಳೊಂದಿಗೆ ಕೆಲಕ್ಷಣಗಳನ್ನು ಕಳೆದರೂ ನನಗೆ ಖುಶಿಯಾಗುತ್ತಿತ್ತು. ರಾತ್ರಿಯಾದರೆ ಆಕಾಶವಾಣಿಯ ವಾಹನ ಅವಳನ್ನು ಮನೆಗೆ ಬಿಡುತ್ತಿತ್ತು. ವಾಹನವಿದ್ದಾಗಲೂ ನಾನು ದಿನಾ ಸಂಜೆ ಕಚೇರಿ ಮುಗಿಸಿ ಆಕಾಶವಾಣಿಗೆ ಅಮೃತಾಳನ್ನು ಕಾಣಲು ಹೋಗುತ್ತಿದ್ದೆ. ಒಮ್ಮೆ ಅವಳ ವಾಹನ ರಾತ್ರಿ ಹತ್ತಾದರೂ ಬರಲಿಲ್ಲ. ಕಾದು ಕಾದು ಕೊನೆಗೆ ನಾನೇ ಚಲೋ ಚಲತೇ ಹೈ ಅಂದೆ. ಅಮೃತಾ ಎಲ್ಲಿ? ಯಾಕೆ? ಎಂಬ ಒಂದು ಪ್ರಶ್ನೆಯನ್ನೂ ಕೇಳದೇ ನನ್ನೊಂದಿಗೆ ಹೆಜ್ಜೆ ಹಾಕತೊಡಗಿದಳು. ಅವತ್ತು ಬೆಳದಿಂಗಳ ರಾತ್ರಿಯಾಗಿತ್ತು. ಹಾಗೇ ಇಬ್ಬರೂ ಆಕಾಶವಾಣಿಯಿಂದ ಪಟೇಲ್ ನಗರದವರೆಗೂ ಕಾಲು ನಡಿಗೆಯಲ್ಲೇ ಬಂದೆವು. ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಮನೆ ತಲುಪಿದಾಗ ಮಧ್ಯರಾತ್ರಿ. ಎಲ್ಲರೂ ಮಲಗಿಯಾಗಿತ್ತು. ಉಣ್ಣಲು ಉಳಿದದ್ದು ಒಂದೇ ರೊಟ್ಟಿ. ಆಗ ಅಮೃತಾ ಇದ್ದುದರಲ್ಲೇ ಹಂಚಿ ತಿನ್ನೋಣವೆಂದು ಇಬ್ಬರೂ ಅರ್ಧರ್ಧ ರೋಟಿ ತಿಂದೆವು. ಅವತ್ತು ಮೇಲೆ ಆಗಸದಲ್ಲಿ ಚಂದ್ರನೂ ಅರ್ಧದಷ್ಟೇ ಇದ್ದ”.

ಅಮೃತಾ ಪ್ರೀತಂ ಯವ್ವನದ ದಿನಗಳಲ್ಲಿ

ಇಮ್ರೋಜ್ ಈ ಘಟನೆಯನ್ನು ಮೊನ್ನೆ ಮೊನ್ನೆ ನಡೆದಂತೆ ವಿವರಿಸುತ್ತಿದ್ದರು. ಮಾತುಗಳು ಮೂಕವಾಗಿದ್ದವು.

“ಪಟೇಲ್ ನಗರದಲ್ಲಿದ್ದಾಗ ಒಮ್ಮೆ ಅಮೃತಾ ನನ್ನ ಟೇರೆಸಿನ ಕೋಣೆಗೆ ಬಂದು ಬಾಗಿಲು ಬಡಿದಳು. ಬಾಗಿಲು ತೆರೆಯುವುದು ಸ್ವಲ್ಪ ತಡವಾಯಿತು. ಆಗ ಅಮೃತಾ ..”.ಅಬ್ ತುಮ್ಹಾರಾ ಭೀ ದರವಾಜಾ ಖಟಖಟಾನಾ ಪಡೇಗಾ?” ಎಂದಳು. ತಕ್ಷಣವೇ ನಾನು ಕೋಣೆಯ ಚಾವಿಯನ್ನು ಅಮೃತಾ ಕೈಯಲ್ಲಿಟ್ಟುಬಿಟ್ಟೆ.ಇದು ನಿಂದೇ ಮನೆ, ಯಾವಾಗ ಬೇಕಾದರೂ ಬಾ -ಎನ್ನುವಂತೆ. ಇಸೀ ಘಟನಾ ಕೋ ಬಾದ ಮೇ ಮೈನೇ ಏಕ್  ಕವಿತಾ ಲಿಖಿ…

ಆಕೆ ಬಾಗಿಲು ಬಡಿದಳು
ನಾನು
ಚಾವಿಯ ಗೊಂಚಲನ್ನೇ ಕೊಟ್ಟೆ ಆಕೆಗೆ
ಕೋಣೆ
ಮನೆಯಾಗುವುದನ್ನು
ನೋಡುತ್ತಿತ್ತು…

ಮತ್ತು ನಾನು ಆ ಕಣ್ಣ ಹೊಳಪಿನಲ್ಲಿ
ಪ್ರೀತಿಯುದಿಸುವುದನ್ನು
ನೋಡುತ್ತಿದ್ದೆ…!

“ಕಮರಾ ಘರ್ ಬನತೇ ದೇಖ ರಹಾ ಥಾ”… ಎಂಥ ಸುಂದರ ರೂಪಕ. ಎಂಥ ಭರವಸೆಯ ಮಾತು. ಆಳದ ಪ್ರೀತಿ. ಅಮೃತಾ ಸ್ಕೂಟರಿನಲ್ಲಿ ಕೂತಾಗ ನಿಮ್ಮ ಬೆನ್ನ ಮೇಲೆ ಸಾಹಿರ್…ಸಾಹಿರ್… ಎಂದು ಗೀಚುತ್ತಿದ್ದರಂತೆ. ನಿಮಗೆ ಗೊತ್ತಿತ್ತಾ? ಗೊತ್ತಾದರೂ ಏನೂ ಅನಿಸಲಿಲ್ಲವಾ?” ಈ ಪ್ರಶ್ನೆಗೆ ಇಮ್ರೋಜ್‌ ನಗುತ್ತಿದ್ದರು ಮಗುವಿನಂತೆ.

“ಪೀಠ್ ಮೇರಾ, ಪೀಛೆ ಮೇರೇ ದೋಸ್ತ್, ವೋಹ್ ದೋಸ್ತ್ ಕಾ ದೋಸ್ತ್…”  ನಾನ್ಯಾಕೆ ಬೇಸರ ಪಡಲಿ? ಸಾಹಿರ್ ಯಾವತ್ತೂ ಮದುವೆಯಾಗುತ್ತಿದ್ದಿಲ್ಲ. ಸಾಹಿರ್ ಕೇವಲ ಒಂದು ಭ್ರಮೆಯಾಗಿದ್ದ. ಅಮೃತಾ ಅವನನ್ನು ಹುಚ್ಚಳಂತೆ ಪ್ರೀತಿಸುತ್ತಿದ್ದಳು. ಅವಳಿಗೆ ಸಾಹಿರ್ ಗೀಳು ಎಷ್ಟಿತ್ತೆಂದರೆ, ನಿಂತಲ್ಲಿ, ಕೂತಲ್ಲಿ, ಟೇಬಲ್, ಕುರ್ಶಿ, ಕಾಗದ ಎಲ್ಲೆಂದರಲ್ಲಿ ಬೆರಳಿನಿಂದ ಸಾಹಿರ್….ಸಾಹಿರ್…ಎಂದು ಗೀಚತೊಡಗುತ್ತಿದ್ದಳು. ಅದೇ ಒಂದು ಚಟವಾಗಿಹೋಗಿತ್ತು. ನಾನು ಯಾವತ್ತೂ ಅವಳ ಖಾಸಗೀ ವಿಷಯಗಳನ್ನು ಕೇಳುತ್ತಿದ್ದಿಲ್ಲ. ಅವಳೂ ನನ್ನನ್ನು ನನ್ನ ಪೇಂಟಿಂಗ್…ಕ್ಯಾನವಾಸ್..ಬಣ್ಣಕ್ಕೆ ಯಾಕೆ ದುಡ್ಡು ಸುರಿತೀಯಾ ಅಂತಾ ಯಾವತ್ತೂ ಪ್ರಶ್ನಿಸುತ್ತಿರಲಿಲ್ಲ. ನಾವು ಯಾವತ್ತೂ ಒಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಯತ್ನಿಸಲಿಲ್ಲ. ಎಲ್ಲಿ ಹೋದೆ? ಯಾರ ಹತ್ತಿರ ಮಾತಾಡಿದೆ? ಈ ತರಾ ಯಾವತ್ತೂ ಪ್ರಶ್ನಿಸಲೂ ಇಲ್ಲ. ನಾನೇನು ಚೌಕಿದಾರನಾ ಇವೆಲ್ಲ ಕೇಳಲು!

ಮತ್ತೆ ಸಾಹಿರ್, ಅವನೆಂದೂ ಅಮೃತಾಳನ್ನು ಮದುವೆಯಾಗುತ್ತಿದ್ದಿಲ್ಲ. ಕೇವಲ ಅಮೃತಾಳ ಭ್ರಮೆ, ಅವಳ ಹದ್ದು ಮೀರಿದ ಪ್ರೇಮದ ಹುಚ್ಚು! ಅಷ್ಟೆ. ಒಮ್ಮೆ ದಿಲ್ಲಿಗೆ ಬಂದಿದ್ದ ಸಾಹಿರ್. ಅಮೃತಾ ಬದುಕಿನಲ್ಲಿ ನಾನಿದ್ದೇನೆ ಅಂತಾ ಗೊತ್ತಾಗಿ ಬೇರೆ ಹೋಟೇಲಿನಲ್ಲಿ ತಂಗಿದ್ದು ಹೊರಟು ಹೋದ. ಮತ್ತೆ ಅವರೆಂದೂ ಭೇಟಿಯಾಗಲಿಲ್ಲ”.

ಒಂದು ವೇಳೆ ಅಮೃತಾ ಜೀ ನಿಮಗೇ ಸಿಗದೇ ಹೋಗಿದ್ದರೇ, ಸಾಹಿರ್ ಮದುವೆಯಾಗಿದ್ದರೇ…? ಎಂದೆ.

“ಇಲ್ಲ. ಅವಳು ನನಗೇ ಸಿಗುತ್ತಿದ್ದಳು. ಅದು ನನಗೆ ಗೊತ್ತಿತ್ತು. ಅಕಸ್ಮಾತ್ ಸಾಹಿರ್ ಮನೆಯಲ್ಲಿ ಕೂತು ನಮಾಜ್ ಮಾಡುತ್ತಿದ್ದರೂ ನಾನು ಹೋಗಿ ಹೊತ್ತುಕೊಂಡು ಬರುತ್ತಿದ್ದೆ” ಇಮ್ರೋಜ್ ಅದೇ ತುಂಟತನದಲ್ಲಿ ಹೇಳುತ್ತಿದ್ದದ್ದು ಈಗಲೂ ಕಿವಿಯಲ್ಲಿ ಅನುರಣಿಸುತ್ತದೆ.

“ಸಾಹಿರ್ ಕಡಿಮೆ ಮಾತಾಡುತ್ತಿದ್ದ. ಅಮೃತಾ ದಿಲ್ಲಿಗೆ ವಲಸೆ ಬಂದ ಮೇಲೆ ಹೆಚ್ಚು ಭೆಟ್ಟಿಯಾಗಿಲ್ಲ.  ಲಾಹೋರಿನಲ್ಲಿ ಸಿಕ್ಕಿದ್ದು ಅಷ್ಟೆ. ಸಿಕ್ಕಾಗೆಲ್ಲ ಅಮೃತಾ ಸಾಹಿರ್‌ನನ್ನು ಮಾತಾಡು ಮಾತಾಡು ಎಂದು ಗೋಗರೆಯುತ್ತಿದ್ದಳು. ಅವನು “ಮೈ ರೋಶನಿ ಮೇ ಬಾತ್ ನಹೀ ಕರ್ ಸಕತಾ” ಅಂತಿದ್ದನಂತೆ. ಅದಕ್ಕೇ ಒಮ್ಮೆ ಅಮೃತಾ ರೋಸಿ ಹೋಗಿ, “ಆ ಸೂರ್ಯನನ್ನೇ ಅಡಗಿಸಿಡಬೇಕು. ಆಗ ನೀನು ಮಾತನಾಡುತ್ತೀ” ಅನ್ನೋ ಕವಿತೆ ಬರೆದಿದ್ದಳು. ಸಾಹಿರ್ ಕಭೀ ನಹೀ ಮಿಲತಾ…!”

ಹೀಗೆ ಹೇಳುವ ಇಮರೋಜ್ ಅವರ ಪ್ರೇಮದ ಪರಿಗೆ ವಿಸ್ಮಯ ಪಡುತ್ತೇನೆ. ಮೂಕವಾಗುತ್ತೇನೆ. ಅವರು ಈ ಲೋಕದ ವ್ಯಕ್ತಿಯಲ್ಲವೇ ಅಲ್ಲ. ಬೇರೊಂದು ಲೋಕದಿಂದ ದೇವರೇ ಅಮೃತಾರಿಗಾಗಿ ಕಳಿಸಿದ ದೂತನೆನೋ ಎನಿಸುತ್ತದೆ. ಅಪ್ಪಟ ಪ್ರೇಮಿ, ಆರಾಧಕ. ಅಮೃತಾರನ್ನು ನಿಜವಾಗಿ ಪ್ರೇಮಿಸಿದ್ದು, ಪೂಜಿಸಿದ್ದು ಇಮ್ರೋಜ್ ಒಬ್ಬರೇ.

ಈಗ ಇಮ್ರೋಜ್ ಇಲ್ಲ. ತಮ್ಮ 97ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದ್ದಾರೆ. ಕೊನೆಗೂ ಅವರ ಜೀವ “ಮೈ ತೆನೂ ಫಿರ್ ಮಿಲಾಂಗಿ – ನಾ ನಿನಗೆ ಮತ್ತೆ ಸಿಗುವೆ” ಎಂದ ಅಮೃತಾರನ್ನು ಸೇರಿಕೊಂಡಿದೆ. “ಆಕೆ ದೇಹ ತ್ಯಜಿಸಿದ್ದಾಳೆಯೇ ಹೊರತು ನನ್ನ ಸಂಗಾತ ತೊರೆದಿಲ್ಲ” ಎಂದೇ ನಂಬಿ ಬದುಕಿದ ಈ ಪ್ರೇಮಿಗೊಂದು ಅಶ್ರುತರ್ಪಣ, ಭಾವಪೂರ್ಣ ಶ್ರದ್ಧಾಂಜಲಿ.

ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

2 COMMENTS

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ Exclusive ಸಂದರ್ಶನ | ದೇಶಕ್ಕೆ ಸಾಮೂಹಿಕ ಜೋಮು ಹಿಡಿದಿದೆ; ಹೊಸ ಭ್ರಮೆಗಳ ಕಟ್ಟಲಾಗುತ್ತಿದೆ: ಪರಕಾಲ ಪ್ರಭಾಕರ್

ಪರಕಾಲ ಪ್ರಭಾಕರ್ ಬುಧವಾರ(ಜ.24)ದಂದು ಬೆಂಗಳೂರಿಗೆ ಭೇಟಿ ನೀಡಿದ್ದರು. 'ಈ ದಿನ' ಯೂಟ್ಯೂಬ್...

ಭಾರತೀಯರಿಗೆ ಪುರಾಣ ಪಥ್ಯವಾಯಿತು, ವಾಸ್ತವ ಅಪಥ್ಯವಾಯಿತು

ಭಾರತದ ಇತಿಹಾಸದ ನೆಲೆಗಳೆಲ್ಲವೂ ವಾಸ್ತವದಲ್ಲಿ ಬೌದ್ಧ ಹಾಗೂ ಜೈನ ನೆಲೆಗಳು. ಇದಕ್ಕೆ...

ರಾಮಮಂದಿರ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ ನಾಲ್ವರು ಧರ್ಮ ಗುರುಗಳು; ಕಾರಣಗಳೇನು?

ಕಾರ್ಯಕ್ರಮದಲ್ಲಿ ಮೋದಿ ಅವರು ಮುಂಚೂಣಿಯಲ್ಲಿ ಇರುತ್ತಾರೆ. ಅದು, ಸನಾತನ ಶಾಸ್ತ್ರಗಳು ನಿರ್ದೇಶಿಸಿದ...