ರೈತರಿಗೆ ಚಿಲ್ಲರೆ ಪರಿಹಾರ ನೀಡುತ್ತಿರುವ ‘ಚಿಲ್ಲರೆ’ ಸರ್ಕಾರಗಳು

Date:

Advertisements

ರಾಜ್ಯದ ಹಾವೇರಿ ಜಿಲ್ಲೆಯ ರೈತರೊಬ್ಬರಿಗೆ ಬೆಳೆ ನಷ್ಟಕ್ಕೆ ಪರಿಹಾರವಾಗಿ ಅತಿ ಕಡಿಮೆ ಹಣವನ್ನು ಕೊಡುವ ಮೂಲಕ ಸರ್ಕಾರ ತನ್ನನ್ನು ತಾನೇ ಅವಮಾನಿಸಿಕೊಂಡಿದೆ. ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಕಡೂರು ಗ್ರಾಮದಲ್ಲಿ ಕಾಡುಹಂದಿಗಳ ಹಾವಳಿಯಿಂದ ಹತ್ತಿ ಮತ್ತು ಗೋವಿನ ಜೋಳ ಬೆಳೆಗಳು ಹಾಳಾಗಿದ್ದವು. ರೈತ ಸುರೇಶ ದೊಡ್ಡಕ್ಕಳವರ ಈ ಸಂಬಂಧ ಬೆಳೆ ಹಾನಿಗೆ ಪರಿಹಾರ ಕೋರಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಸುಮಾರು ಎರಡು ತಿಂಗಳ ನಂತರ ಬೆಳೆ ಹಾನಿಗೆ ಪರಿಹಾರ ಎಂದು ಸರ್ಕಾರ ಅವರ ಖಾತೆಗೆ 2804 ರೂಪಾಯಿ ಪರಿಹಾರ ಹಾಕಿದೆ.

ತೀರಾ ಕಡಿಮೆ ಮೊತ್ತದ ಪರಿಹಾರವನ್ನು ನೋಡಿ ರೈತ ಸುರೇಶ್ ಅವರಿಗೆ ಬೇಸರವಾಗಿದೆ. ಇತರೆ ರೈತರಂತೆ ಅವರು ಗೊಣಗಿಕೊಂಡು ಸುಮ್ಮನಾಗಲಿಲ್ಲ. ಪರಿಹಾರದ ಹಣವನ್ನು ವಾಪಸ್ ಕೊಡಲು ತಹಶೀಲ್ದಾರ್‌ ಕಚೇರಿಗೆ ಹೋಗಿದ್ದಾರೆ. ದುಗ್ಗಾಣಿ ಪರಿಹಾರ ಕೊಟ್ಟಿದ್ದ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ರೈತನ ಕ್ರಮದಿಂದ ಮುಖಕ್ಕೆ ಹೊಡೆದಂತಾಗಿದೆ. ಅವರು ಹಣವನ್ನು ವಾಪಸ್ ಪಡೆಯದೆ ಮನವಿ ಪತ್ರವನ್ನು ಮಾತ್ರ ಪಡೆದು ಹೇಗೋ ಸಮಾಧಾನ ಮಾಡಿ ರೈತ ಸುರೇಶ್ ಅವರನ್ನು ಅಲ್ಲಿಂದ ಸಾಗಹಾಕಿದ್ದಾರೆ.

ಇದು ಇತ್ತೀಚಿನ ಒಂದು ಘಟನೆಯಷ್ಟೇ. ಇಂಥ ಪ್ರಕರಣಗಳು ಪ್ರತಿ ವರ್ಷ ಪ್ರತಿ ತಾಲ್ಲೂಕಿನಲ್ಲೂ ನಡೆಯುತ್ತಲೇ ಇರುತ್ತವೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾದರೆ, ಒಂದೆರಡು ಸಾವಿರ ಪರಿಹಾರ ಕೊಡುವ ಸರ್ಕಾರಗಳು ರೈತರನ್ನು ಅವಮಾನಿಸುತ್ತಲೇ ಇವೆ.

Advertisements

ವಿಚಿತ್ರ ಎಂದರೆ, ಬೆಳೆ ಹಾನಿ ಪರಿಶೀಲನೆಗೆ ಎಂದು ಅಧಿಕಾರಿಗಳು ಪಡೆಯುವ ಟಿಎ, ಡಿಎ ಮತ್ತಿತರ ಖರ್ಚು ಪರಿಹಾರಕ್ಕಿಂತ ಹತ್ತಾರು ಪಟ್ಟು ಹೆಚ್ಚಾಗಿರುತ್ತದೆ. ರೈತ ಸುರೇಶ್ ಅವರ ಹೊಲಕ್ಕೂ ಹಲವು ಬಾರಿ ಅಧಿಕಾರಿಗಳು ಭೇಟಿ ನೀಡಿದ್ದರು. ಅವರ ಓಡಾಟಕ್ಕೇ ಹತ್ತಾರು ಸಾವಿರ ರೂಪಾಯಿ ಬಿಲ್ ಪಡೆದಿರುತ್ತಾರೆ. ಸ್ಥಳೀಯ ಶಾಸಕ ಯು ಬಿ ಬಣಕಾರ್‌ ಕೂಡ ಸುರೇಶ್ ಅವರ ಹೊಲಕ್ಕೆ ಭೇಟಿ ನೀಡಿ ಪರಿಹಾರ ಕೊಡಿಸುವುದಾಗಿ ಆಶ್ವಾಸನೆ ನೀಡಿದ್ದರು. ರೈತನ ನಿರಂತರ ಕಚೇರಿ ಅಲೆದಾಟ, ಶಾಸಕರ ಭೇಟಿ, ಅಧಿಕಾರಿಗಳ ಪರಿಶೀಲನೆ ಎಲ್ಲವೂ ಆದ ನಂತರ ಆನೆ ಲದ್ದಿ ಹಾಕಿದಂತೆ ರೈತ ಸುರೇಶ್ ಅವರಿಗೆ ಚಿಕ್ಕಾಸಿನ ಪರಿಹಾರ ನೀಡಿದ್ದಾರೆ.

ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಎಲ್ಲ ರಾಜ್ಯಗಳಲ್ಲೂ ನಾನಾ ಕಾರಣಕ್ಕೆ ಬೆಳೆ ನಾಶಕ್ಕೆ ರೈತರಿಗೆ ನೀಡುತ್ತಿರುವ ಪರಿಹಾರ ಅತ್ಯಲ್ಪ ಮೊತ್ತದ್ದಾಗಿದೆ. 2022ರಲ್ಲಿ ಮಹಾರಾಷ್ಟ್ರದಲ್ಲಿ ರೈತರಿಗೆ ಎಕರೆಗೆ 90 ರೂಪಾಯಿ ಬೆಳೆ ಹಾನಿಗೆ ಪರಿಹಾರವನ್ನಾಗಿ ನೀಡಲಾಗಿತ್ತು. ಅದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆಗ ಮಹಾರಾಷ್ಟ್ರದ ಕೃಷಿ ಸಚಿವರಾಗಿದ್ದ ಅಬ್ದುಲ್ ಸತ್ತಾರ್‌ಗೂ ಅದರ ಬಿಸಿ ತಟ್ಟಿತ್ತು. ಆಂಧ್ರಪ್ರದೇಶದಲ್ಲೂ ಇದೇ ರೀತಿ ಆಗಿತ್ತು. ರೈತರಿಗೆ ಕೊಟ್ಟ ಬೆಳೆ ನಾಶದ ಪರಿಹಾರಕ್ಕಿಂತ ಅದರ ಪ್ರಚಾರಕ್ಕೇ ಹೆಚ್ಚು ಹಣ ಖರ್ಚು ಮಾಡಲಾಗಿದೆ ಎಂದು ಜಗನ್ ಸರ್ಕಾರದ ವಿರುದ್ಧ ವಿರೋಧ ಪಕ್ಷವಾದ ತೆಲುಗು ದೇಶಂ ಮುಖಂಡರು ವಾಗ್ದಾಳಿ ನಡೆಸಿದ್ದರು.

ರೈತರ ಬೆಳೆ ನಾಶದ ಪರಿಹಾರ ಅತ್ಯಂತ ಕಡಿಮೆ ಇರುವುದಕ್ಕೆ ಕೇಂದ್ರ ಸರ್ಕಾರ ಕಾರಣ. 2015ರ ಏಪ್ರಿಲ್‌ನಲ್ಲಿ ನರೇಂದ್ರ ಮೋದಿ ಅವರು ಬೆಳೆ ಹಾನಿಗೆ ಪರಿಹಾರವನ್ನು ಹೆಚ್ಚಿಸುವುದಾಗಿ ಘೋಷಿಸಿದರು. ‘ಇದು ಒಂದು ಮಹತ್ವದ ನಿರ್ಧಾರ ಮತ್ತು ಇದರಿಂದ ನಮ್ಮ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಆದರೂ ರೈತರಿಗಾಗಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಪ್ರಧಾನಿ ಹೇಳಿದ್ದರು. ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ₹ 6,800, ನೀರಾವರಿ ಬೆಳೆಗಳಿಗೆ ₹ 13,500 ಮತ್ತು ದೀರ್ಘಕಾಲಿಕ ತೋಟಗಾರಿಕೆ ಬೆಳೆಗಳಿಗೆ ₹18,000 ಪರಿಹಾರ ನೀಡುವುದಾಗಿ ಮೋದಿ ಘೋಷಿಸಿದ್ದರು. ಅದರಿಂದ ರೈತರು ಬರದಿಂದ ಬೆಳೆ ಕಳೆದುಕೊಂಡಿದ್ದರಲ್ಲಿ ಐದನೇ ಒಂದು ಭಾಗದಷ್ಟು (ವಾಸ್ತವವಾಗಿ 17%) ಪರಿಹಾರವಾಗಿ ಪಡೆಯಬಹುದಿತ್ತು ಅಷ್ಟೇ. ಅದೂ ಕೂಡ ಕೇಂದ್ರ ತಂಡವನ್ನು ಕಳುಹಿಸಿ ಪರಿಸ್ಥಿತಿ ಅವಲೋಕಿಸಿ ಹಣ ಬಿಡುಗಡೆ ಮಾಡಿದ ನಂತರ. ಮೋದಿ ರೈತರ ಪರಿಹಾರ ಹೆಚ್ಚಿಸಿದ್ದೇವೆ ಎಂದು ಘೋಷಿಸಿದ ನಂತರ ಅದರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ‘ಪರಿಷ್ಕೃತ ಪರಿಹಾರದ ಮೊತ್ತವು ಒಂದು ತಮಾಷೆಯಾಗಿದೆ ಮತ್ತು ಪ್ರಾಕೃತಿಕ ವಿಕೋಪಗಳಿಂದ ರೈತರನ್ನು ರಕ್ಷಿಸಲು ಅದು ಅಗತ್ಯಕ್ಕಿಂತ ಕಡಿಮೆಯಾಗಿದೆ” ಎಂದು ದೆಹಲಿಯ ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳ ಸಂಶೋಧನಾ ಮಂಡಳಿಯ ಅಧ್ಯಕ್ಷರಾಗಿದ್ದ ಅಶೋಕ್ ಗುಲಾಟಿ ಟೀಕಿಸಿದ್ದರು.

ಬೆಳೆ ಹಾನಿ ಪರಿಶೀಲನೆ

ಚೆನ್ನಾಗಿ ಮಳೆ ಬಿದ್ದು ಉತ್ತಮ ಬೆಳೆ ಬಂದರೆ, ಯಾವ ರೈತನೂ ಸರ್ಕಾರದ ಬಿಡಿಗಾಸಿನ ಪರಿಹಾರಕ್ಕೆ ಕೈ ಚಾಚುವುದಿಲ್ಲ. ಆದರೆ, ಹಲವು ಸಂದರ್ಭಗಳಲ್ಲಿ ಅನಿವಾರ್ಯವಾಗಿ ರೈತರು ಪರಿಹಾರಕ್ಕೆ ಅರ್ಜಿ ಸಲ್ಲಿಸುತ್ತಾರೆ. ಬರ, ನೆರೆ ಮುಂತಾದ ಸಂದರ್ಭಗಳಲ್ಲಿ ಬೆಳೆ ಹಾಳಾಗಿ ರೈತರು ಹಾಕಿದ ಹಣವೂ ಕೂಡ ವಾಪಸ್ ಸಿಗುವುದಿಲ್ಲ. ಒಂದೊಮ್ಮೆ ಬೆಳೆ ಬಂದರೂ ಕಾಡು ಪ್ರಾಣಿಗಳ ಹಾವಳಿ. ರೈತರಿಗೆ ಅರಣ್ಯ ಇಲಾಖೆಯಿಂದ ಪ್ರಾಣಿಗಳ ನಿಯಂತ್ರಣಕ್ಕೆ ಸಹಕಾರ ಸಿಗುವುದಿಲ್ಲ. ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕಾಡು ಪ್ರಾಣಿಗಳನ್ನು ಕೊಂದರೆ, ಅರಣ್ಯ ಇಲಾಖೆಯವರು ಅವರ ಮೇಲೆ ಇಲ್ಲಸಲ್ಲದ ಕೇಸುಗಳನ್ನು ಜಡಿಯುತ್ತಾರೆ. ಆಗ ರೈತರು ಲಂಚ ಕೊಟ್ಟು ಅದರಿಂದ ಪಾರಾಗಬೇಕು. ಅಂಥ ಪರಿಸ್ಥಿತಿಯನ್ನು ಅಧಿಕಾರಿಗಳೇ ಸೃಷ್ಟಿಸುತ್ತಾರೆ. ಸುಮ್ಮನಿದ್ದರೆ ಬೆಳೆಗಳು ಕಾಡುಪ್ರಾಣಿಗಳ ಪಾಲಾಗುತ್ತವೆ. ಆಗ ರೈತರು ಪರಿಹಾರ ಕೋರಿದರೆ ರೈತ ಸುರೇಶ್ ಅವರಿಗೆ ಸಿಕ್ಕಂತೆ ದುಗ್ಗಾಣಿ ಪರಿಹಾರ ಸಿಗುತ್ತದೆ. ಆ ಪರಿಹಾರದ ಹಣದಲ್ಲೂ ಅಧಿಕಾರಿಗಳಿಗೆ ಅರ್ಧದಷ್ಟು ಲಂಚ ಕೊಡಬೇಕು.

ಈ ಸುದ್ದಿ ಓದಿದ್ದೀರಾ: ತನ್ನ ಗೋರಿಯನ್ನು ತಾನೇ ತೋಡಿಕೊಂಡ ಜಾತ್ಯತೀತ ಜನತಾ ದಳ: ಒಂದು ಅವಲೋಕನ

ಇಂಥ ಪರಿಹಾರವನ್ನು ಕೊಡುವುದಕ್ಕಿಂತಲೂ ಸುಮ್ಮನಿದ್ದರೆ ಸರ್ಕಾರದ ಮರ್ಯಾದೆಯಾದರೂ ಉಳಿಯುತ್ತದೆ. ಆದರೆ, ಸರ್ಕಾರಗಳಿಗೆ ರೈತರಿಗೆ ನೆರವಾಗುತ್ತಿದ್ದೇವೆ ಎನ್ನುವ ಹೆಸರು ಬೇಕು. ಅದಕ್ಕಾಗಿ ರೈತರಿಗೆ ಭಾರಿ ಉಪಕಾರ ಮಾಡುತ್ತಿದ್ದೇವೆ ಎಂದು ಗತ್ತಿನಲ್ಲಿ ಅಲ್ಪ ಮೊತ್ತದ ಪರಿಹಾರ ನೀಡುತ್ತಿವೆ. ಸರ್ಕಾರಗಳು ರೈತರಿಗೆ ಪರಿಹಾರ ಕೊಟ್ಟಂತೆಯೂ ಇರಬೇಕು. ಅದರಿಂದ ಬೊಕ್ಕಸಕ್ಕೆ ಹೆಚ್ಚು ಹೊರೆಯೂ ಆಗಬಾರದು ಎನ್ನುವಂತೆ ಮಾಡುತ್ತಿವೆ.

ಅತ್ಯಲ್ಪ ಮೊತ್ತದ ಪರಿಹಾರ ವಿತರಿಸಿ ಕಣ್ಣೊರೆಸುವ ತಂತ್ರ ಮಾಡುವ ಬದಲು ಸರ್ಕಾರಗಳಿಗೆ ನಿಜಕ್ಕೂ ರೈತರ ಬಗ್ಗೆ ಕಾಳಜಿಯಿದ್ದರೆ ಹಾನಿಯಾದ ಬೆಳೆಯ ಅಂದಾಜು ಲೆಕ್ಕ ಹಾಕಿ ಅದರ ಆಧಾರದ ಮೇಲೆ ಪರಿಹಾರ ಕೊಡಬೇಕು ಎನ್ನುವುದು ರೈತರ ಬೇಡಿಕೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X