- ರಾಜ್ಯದ 195 ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆ
- 5 ರಿಂದ 6 ಸಾವಿರ ಕೋಟಿ ರೂ. ಪರಿಹಾರ ಪಡೆಯಲು ಅವಕಾಶ
- ಮೇವು-ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ
ರಾಜ್ಯದ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಈ ತಾಲ್ಲೂಕುಗಳಿಗೆ ಸಂಬಂಧಪಟ್ಟಂತೆ ಕೇಂದ್ರದ ಪರಿಹಾರಕ್ಕಾಗಿ ಮನವಿ ಸಲ್ಲಿಸಲು ಬೇಕಾಗಿರುವ ವರದಿಯನ್ನು (ಮೆಮೊರಾಂಡಮ್) ವಾರದಲ್ಲಿ ಸಲ್ಲಿಸಲಾಗುವುದು ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಸಚಿವರು, “ಈ ವರ್ಷ ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಎದುರಾಗಿದೆ. ಅಂದಾಜಿನ ಪ್ರಕಾರ 40 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದರೆ, 2 ಲಕ್ಷ ಹೆಕ್ಟೇರ್ ನಷ್ಟು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಬರ ತಾಲ್ಲೂಕುಗಳಿಗೆ ಸಂಬಂಧಪಟ್ಟಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಬೇಕಾಗಿರುವ ವರದಿಯನ್ನು (ಮೆಮೊರಾಂಡಮ್) ತ್ವರಿತವಾಗಿ ತಯಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದರು.
“ಮೆಮೊರಾಂಡಮ್ ಸಿದ್ದಪಡಿಸುವ ಕೆಲಸ ಈಗಾಗಲೇ ಶೇ.70 ರಷ್ಟು ಮುಗಿದಿದೆ. ಮೇವಿಗೂ, ಕುಡಿಯುವ ನೀರಿಗೂ ಪ್ರತ್ಯೇಕ ಪರಿಹಾರದ ಅವಕಾಶವಿದ್ದು, ಮುಂದಿನ ಮೂರು ದಿನದಲ್ಲಿ ಈ ಎಲ್ಲವನ್ನೂ ಸೇರಿಸಿ ಸಂಪೂರ್ಣ ಮೆಮೊರಾಂಡಮ್ ತಯಾರಿಸಲಾಗುವುದು. ಎನ್ ಡಿ ಆರ್ ಎಫ್ ನಿಯಮಗಳ ಅನ್ವಯ ಒಟ್ಟಾರೆ 5 ರಿಂದ 6 ಸಾವಿರ ಕೋಟಿ ಪರಿಹಾರ ಪಡೆಯಲು ಅವಕಾಶ ಇದೆ. ಕೇಂದ್ರಕ್ಕೆ ಮನವಿ ಸಲ್ಲಿಸಿದ ಕೂಡಲೇ ಕೇಂದ್ರದ ಅಧಿಕಾರಿಗಳೂ ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ. ಹೀಗಾಗಿ ಮೆಮೊರಾಂಡಮ್ ಅನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆದು ಈ ವಾರಾಂತ್ಯದೊಳಗೆ ಸಲ್ಲಿಸಲಾಗುವುದು” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಅ.1ರಿಂದ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಜಾರಿ: ಕೃಷ್ಣಭೈರೇಗೌಡ
ಎರಡನೇ ಹಂತದಲ್ಲಿ ಮತ್ತೆ ಬರ ಘೋಷಣೆ
“ಇನ್ನೂ 41 ತಾಲ್ಲೂಕುಗಳಲ್ಲೂ ಸಹ ಪರಿಸ್ಥಿತಿ ಭಿನ್ನವಾಗೇನು ಇಲ್ಲ. ಆದರೆ, ಕೇಂದ್ರದ ಮಾರ್ಗಸೂಚಿಯಂತೆ ಈ ತಾಲ್ಲೂಕುಗಳಲ್ಲಿ ಬರ ಘೋಷಣೆ ಸಾಧ್ಯವಿಲ್ಲ. ಆದರೆ, ಅಕ್ಟೋಬರ್ ತಿಂಗಳ ಕೊನೆಯ ವರೆಗೆ ಬೆಳೆ ಸಮೀಕ್ಷೆ ನಡೆಸಿ ಬರ ಘೋಷಣೆಗೆ ಅವಕಾಶ ಇದೆ. ಬದಲಾಗಿ ಅಕ್ಟೋಬರ್ ತಿಂಗಳ ಮಳೆ ಪರಿಸ್ಥಿತಿ ಗಮನಿಸಿ ಮುಂದಿನ ದಿನಗಳಲ್ಲಿ ಬೆಳೆ ಸಮೀಕ್ಷೆ ಆಧರಿಸಿ ಮತ್ತೊಂದಷ್ಟು ತಾಲ್ಲೂಕುಗಳನ್ನೂ ಎರಡನೇ ಪಟ್ಟಿಯಲ್ಲಿ “ಬರ ಪೀಡಿತ” ಎಂದು ಘೋಷಿಸಲಾಗುವುದು” ಎಂದು ತಿಳಿಸಿದರು.
ನೀರಿಗೂ, ಮೇವಿಗೂ ಕೊರತೆ ಇಲ್ಲ
“ರಾಜ್ಯದಲ್ಲಿ ಸದ್ಯಕ್ಕೆ ಕುಡಿಯುವ ನೀರಿಗೆ ತೀವ್ರ ಅಭಾವ ಇಲ್ಲ. ಕುಡಿಯುವ ನೀರಿನ ಪೂರೈಕೆ ಸಲುವಾಗಿಯೇ ಎಲ್ಲ ಜಿಲ್ಲಾ ಪಂಚಾಯತ್ ಸಿಇಒಗಳ ಖಾತೆಗೆ ಈಗಾಗಲೇ ಒಂದು ಕೋಟಿ ರೂ. ಹಣವನ್ನು ವರ್ಗಾಯಿಸಲಾಗಿದೆ. ಅಲ್ಲದೆ, ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 462 ಕೋಟಿ ಹಣ ಇದೆ. ಈ ಹಣವನ್ನು ಕುಡಿಯುವ ನೀರು ಪೂರೈಕೆಗೆ ಬಳಸಲು ಸೂಚಿಸಲಾಗಿದೆ. ಮತ್ತಷ್ಟು ಹಣದ ಅಗತ್ಯ ಇದ್ದರೆ ಅದನ್ನೂ ಪೂರೈಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಮೇವಿನ ಕೊರತೆ ಇಲ್ಲ. ಬರ ಘೋಷಣೆಗೆ ಮುನ್ನವೇ ಅಗತ್ಯ ಮೇವಿನ ದಾಸ್ತಾನಿಗೆ ಸೂಚಿಸಲಾಗಿದೆ. ಅಲ್ಲದೆ, ನೀರಿನ ಲಭ್ಯತೆ ಇರುವ ರೈತರಿಗೆ ಮೇವಿನ ಬಿತ್ತನೆ ಬೀಜಗಳನ್ನು ಉಚಿತವಾಗಿ ವಿತರಿಸಲು 20 ಕೋಟಿ ರೂ. ನೀಡಲಾಗಿದೆ” ಎಂದರು.
ಬರ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ
“ದೇಶದ ಹಲವು ರಾಜ್ಯಗಳಲ್ಲಿ ಇಂದು ಬರದ ಸ್ಥಿತಿ ಇದೆ. ಕೇರಳ, ಬಿಹಾರ, ಜಾರ್ಖಂಡ್, ಮಣಿಪುರ, ಮಿಜೋರಾಂ ರಾಜ್ಯಗಳಲ್ಲೂ ಈ ವರ್ಷ ತೀವ್ರ ಮಳೆ ಕೊರತೆ ಎದುರಾಗಿದೆ. ಆದರೆ, ಈ ಯಾವ ರಾಜ್ಯಗಳೂ ಈವರೆಗೆ “ಬರ” ಘೋಷಣೆ ಮಾಡಿಲ್ಲ. ಆದರೆ, ಕರ್ನಾಟಕದಲ್ಲಿ ರಾಜ್ಯ ಮಾತ್ರ ಮುಂಜಾಗ್ರತಾ ಕ್ರಮವಾಗಿ ಬರ ಘೋಷಿಸಲಾಗಿದೆ. ಜೂನ್ ತಿಂಗಳಿಂದಲೂ ರಾಜ್ಯದ ಮಳೆ ವರದಿಯನ್ನು ಪ್ರತಿ ವಾರ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಕಳುಹಿಸಲಾಗಿದೆ” ಎಂದು ಹೇಳಿದರು.