ಕರ್ನಾಟಕದ ವೈಶಿಷ್ಟ್ಯ ಪೂರ್ಣ ವಿಶ್ವ ವಿಖ್ಯಾತ ಪ್ರವಾಸೋದ್ಯಮ ತಾಣವಾದ ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಮಲಗಿದ ಬುದ್ಧನ ಬೆಟ್ಟದ ಯೋಜನೆಯನ್ನು ಸರ್ಕಾರ ತೀವ್ರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಸಾಹಿತಿ ಬುದ್ಧಘೋಷ್ ದೇವೇಂದ್ರ ಹೆಗ್ಗಡೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
“ಈ ಕುರಿತು ಪ್ರಕಟಣಾ ಹೇಳಿಕೆ ನೀಡಿರುವ ಅವರು ಶಹಾಪುರದ ಬೇರೆ ಸ್ಥಳಗಳಿಗೆ ಆದ್ಯತೆ ನೀಡುವ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್ ಅವರು ಬೌದ್ದ ಪ್ರವಾಸಿ ತಾಣಗಳನ್ನು ಯಾಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದಲಿತರು ಹೆಚ್ಚು ಹೆಚ್ಚು ಬೌದ್ಧ ಧರ್ಮದ ಕಡೆ ವಾಲುತ್ತಿದ್ದಾರೆ ಎಂಬ ಕಾರಣಕ್ಕೆ ಬೌದ್ಧ ತಾಣಗಳು ಸಚಿವರಿಗೆ ಅಸ್ಪೃಶ್ಯವಾಗಿ ಕಾಣುತ್ತಿವೆಯೆ” ಎಂದು ಪ್ರಶ್ನಿಸಿದ್ದಾರೆ.
“ಕೆಲ ದಿನಗಳ ಹಿಂದೆ ಸಚಿವರು ಶಹಾಪುರ ನಗರದ ಮಲಗಿದ ಬುದ್ಧನ ಬೆಟ್ಟದ ವೀಕ್ಷಣೆಗೆ ಬಂದಾಗ ಎಲ್ಲಾ ದಲಿತ ಸಂಘಟನೆಗಳ ಮುಖಂಡರು, ಭಾರತೀಯ ಬೌದ್ಧ ಮಹಾಸಭಾದ ನಾಯಕರು ಸಚಿವರನ್ನು ಭೇಟಿ ನೀಡಿ ಬೌದ್ಧ ತಾಣದ ಅಭಿವೃದ್ಧಿ ಕುರಿತು ಮನವಿ ಸಲ್ಲಿಸಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸೌಜನ್ಯಕ್ಕಾದರೂ ಯೋಜನೆಯ ಪ್ರದೇಶದಲ್ಲಿ ಸುತ್ತಾಡಿ ನೋಡಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಕಾನೂನುಬಾಹಿರವಾಗಿ ಅಕ್ರಮ ಗ್ರಾನೈಟ್ ಅಂಗಡಿ ಸ್ಥಾಪಿಸಿದ್ದರಿಂದ ಪ್ರವಾಸಿಗರಿಗೆ, ಜನರಿಗೆ ಬುದ್ಧ ಮಲಗಿದ ದೃಶ್ಯ ಕಾಣಲು ಅಡ್ಡಿಯಾಗುತ್ತದೆ. ಈ ಬಗ್ಗೆ ದೂರು ನೀಡಿದರೂ ಸ್ಥಳ ಪರಿಶೀಲನೆ ನಡೆಸಲಿಲ್ಲ. ಇದೊಂದು ಕಾಟಾಚಾರದ ಭೇಟಿ ಎಂಬಂತೆ ಇತ್ತು. ಶಹಾಪುರದ ಬೇರೆ ಬೇರೆ ಸ್ಥಳಗಳಿಗೆ ಆಸಕ್ತಿವಹಿಸಿ ಅಭಿವೃದ್ಧಿಗಾಗಿ ಅನುದಾನ ಒದಗಿಸುವ ಇಚ್ಚಾಶಕ್ತಿ ಬೌದ್ಧ ತಾಣಕ್ಕೆ ದೊರಕಲಿಲ್ಲ” ಎಂದು ವಿಷಾದ ವ್ಯಕ್ತಪಡಿದ್ದಾರೆ.
ರಾಜ್ಯದಲ್ಲಿ ಅಪರೂಪಕ್ಕೆ ಇರುವ ಬೌದ್ಧ ಸ್ಥಳಗಳ ಕಡೆಗಣನೆ ಅದೆಷ್ಟು ಸರಿ. ಶಿರಿವಾಳಕ್ಕೆ ಭೇಟಿ ನೀಡಿದ ಪ್ರವಾಸ್ಯೋದ್ಯಮ ಸಚಿವರು ಶಿರಿವಾಳ ಪಕ್ಕದಲ್ಲಿರುವ ಬೌದ್ಧ ಕ್ಷೇತ್ರ ಸನ್ನತ್ತಿಗೆ ಭೇಟಿ ನೀಡಲಿಲ್ಲ. ಸಚಿವರು ಬೌದ್ಧ ತಾಣಕ್ಕೆ ಯಾಕೆ ನಿರಾಸಕ್ತಿ ತೋರುತ್ತಿದ್ದಾರೆ. ಬೌದ್ಧ ಸ್ಥಳದ ಅಭಿವೃದ್ದಿಯಲ್ಲಿ ಆಗಿರುವ ಭ್ರಷ್ಟಾಚಾರಕ್ಕೆ ಯಾಕೆ ಮೌನ. ಯಾದಗಿರಿ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಯಾಕೆ ಶಹಾಪುರ ಬೌದ್ಧ ತಾಣದಲ್ಲಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ಆಸಕ್ತಿ ತೋರುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಈ ಪರಿ ನರಮೇಧದ ನಂತರವೂ ಮೇಲೇಳದೇಕೆ ನೆತ್ತರದಾಹಿಗಳ ತಕ್ಕಡಿ?
ಶಹಾಪುರ ತಾಲೂಕಿನ ಅಸ್ಮಿತೆಯನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಬೌದ್ಧ ತಾಣವನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಶಹಾಪುರ ತಾಲೂಕು ಮತ್ತು ರಾಜ್ಯದ ಎಲ್ಲಾ ಪ್ರಗತಿಪರ ನಾಗರಿಕರು ಮತ್ತು ಸಂಘ-ಸಂಸ್ಥೆಗಳು ಸರ್ಕಾರದ ತಾರತಮ್ಯದ ನಡೆಯನ್ನು ಖಂಡಿಸಬೇಕು ಮತ್ತು ಬೌದ್ಧ ತಾಣಗಳ ಉಳಿವಿಗೆ ಹಾಗೂ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಒತ್ತಾಯಿಸಬೇಕು” ಎಂದಿದ್ದಾರೆ.