- ಚಿಕ್ಕಮಗಳೂರಿನಲ್ಲಿ ಪೋಸ್ಟರ್ ಅಂಟಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
- ಕಾಂಗ್ರೆಸ್ ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮೂಲಕ ಬಿಜೆಪಿ ವಾಗ್ದಾಳಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಡಾ. ಯತೀಂದ್ರ ನಡುವಿನ ಫೋನ್ ಸಂಭಾಷಣೆ ಆಧರಿಸಿ ಬಿಜೆಪಿ ಕಾರ್ಯಕರ್ತರಿಂದ ‘ಹಲೊ ಅಪ್ಪ’ ಆ್ಯಪ್ ಬಳಸಿ ಎಂಬ ಪೋಸ್ಟರ್ ಅಭಿಯಾನ ಆರಂಭವಾಗಿದೆ.
“ಹತ್ತು ನಿಮಿಷದಲ್ಲಿ ವರ್ಗಾವಣೆ ಬೇಕೆ? ಅದೂ ಒಂದೇ ಕರೆಯಲ್ಲಿ ಹಾಗಿದ್ದರೆ ‘ಹಲೋ ಅಪ್ಪ ಆ್ಯಪ್’ ಡೌನ್‌ಲೋಡ್ ಮಾಡಿ” ಎಂಬ ಬರಹವುಳ್ಳ ಜೊತೆಗೆ ಯತೀಂದ್ರ ಭಾವಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪೋಸ್ಟರ್ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಪೋಸ್ಟರ್ ಅಂಟಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಿಜೆಪಿ ಕಿಡಿ
ಈ ಬೆಳವಣಿಗೆಗೆ ಪೂರಕವಾಗಿ ಬಿಜೆಪಿ ಈ ಕುರಿತು ಎಕ್ಸ್ ವೇದಿಕೆಯಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
“ಕರ್ನಾಟಕದ ಶ್ಯಾಡೋ ಸಿಎಂ ಯತೀಂದ್ರ ಅವರು, “ಹಲೋ ಅಪ್ಪಾ- ನಾನು ಹೇಳಿದ್ದಷ್ಟೆ ಮಾಡಬೇಕು” ಎಂದು ಆವಾಜ್ ಮೇಲೆ ಆವಾಜ್ ಹಾಕಿದ್ದು, ಶಾಲೆಗಳಿಗೆ ಬಣ್ಣ ಬಳಿಸುವುದಕ್ಕಲ್ಲ ಬದಲಿಗೆ ತಮ್ಮ ಎಟಿಎಂ ಸರ್ಕಾರದ ಕಲೆಕ್ಷನ್ ಬಯಲಾಟಕ್ಕಾಗಿ ಎಂಬುದು ಸಾಕ್ಷಿ ಸಮೇತ ಸಾಬೀತಾಗಿದೆ” ಎಂದು ಕುಟುಕಿದೆ.
“ನೆಲಕ್ಕೆ ಜಾರಿ ಬಿದ್ದರೂ ಮೀಸೆಗೆ ಮಣ್ಣು ಹತ್ತಿಲ್ಲ” ಎಂಬ ಪ್ರವೃತ್ತಿಯ ಸಿಎಂ ಸಿದ್ದರಾಮಯ್ಯ
ಅವರು ಇದಕ್ಕೂ ರಂಗ್ ಬಿರಂಗಿ ಕತೆಗಳನ್ನು ಹೆಣೆಯುತ್ತಿರುವುದು ಅಸಹ್ಯದ ಪರಮಾವಧಿ. “ಹಲೋ ಅಪ್ಪಾ” ಎಂದಿದ್ದು ವರುಣಾದ ಶಾಲೆಗಳಿಗೆ ಬಣ್ಣ ಬಳಿಸಲು ಎಂದು ಹಸಿ ಹಸಿ ಸುಳ್ಳಿನ ಸೌಧ ಕಟ್ಟಿದ್ದ ಸಿಎಂರನ್ನು, ಸಿದ್ದರಾಮಯ್ಯರವರು ಎಂದು ಕರೆಯಬೇಕೋ ಅಥವಾ ಸುಳ್ಳುರಾಮಯ್ಯರವರು ಎಂದು ಕರೆಯಬೇಕೋ ಎಂಬುದು ಸದ್ಯ ಆರೂವರೆ ಕೋಟಿ ಕನ್ನಡಿಗರಿಗಿರುವ ಗೊಂದಲ” ಎಂದು ಲೇವಡಿ ಮಾಡಿದೆ.
“ಸಿಎಂ ಸಿದ್ದರಾಮಯ್ಯ ಹಾಗೂ ಶ್ಯಾಡೋ ಸಿಎಂ ಯತೀಂದ್ರ ಸಿದ್ದರಾಮಯ್ಯ ಮತ್ತು ಡಮ್ಮಿ ಡಿಸಿಎಂ ಡಿ. ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ, ಸರ್ಕಾರದ ಶುರುವಾತಿನಿಂದ ಹಿಡಿದು ಇಲ್ಲಿಯವರೆಗೂ ಮಾಡಿದ್ದು ಬರೀ ಕಲೆಕ್ಷನ್-ಕಮಿಷನ್-ಕರಪ್ಷನ್” ಎಂದು ಆರೋಪಿಸಿದೆ.
“ಶ್ಯಾಡೋ ಸಿಎಂ ಯತೀಂದ್ರರವರು ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರೂ ಅದಕ್ಕೆ ಸಿ.ಎಸ್.ಆರ್. ಎಂಬ ಕಪೋಲಕಲ್ಪಿತ ಕತೆಗಳನ್ನು ಕಟ್ಟಿದ್ದ ಸಿಎಂ ಸಿದ್ದರಾಮಯ್ಯ & ಕೋ, ಈಗ ಏಕಾಏಕಿ ವಿವೇಕಾನಂದ ಎಂಬ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ವರ್ಗಾವಣೆ ಪಟ್ಟಿಯಲ್ಲಿ ನಂಬರ್ 4 ರಲ್ಲಿ ಕೂರಿಸಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಲು ಮಾತ್ರ ತಡಬಡಾಯಿಸುತ್ತಾರೆ” ಎಂದು ಹರಿಹಾಯ್ದಿದೆ.
“ಹೇರಳವಾಗಿ ತಪ್ಪುಗಳನ್ನು ಮಾಡುವುದು, ಆ ತಪ್ಪುಗಳನ್ನು ಮುಚ್ಚಿ ಹಾಕಲು ಸುಳ್ಳಿನ ಮಹಲುಗಳನ್ನೇ ನಿರ್ಮಿಸುವುದು ಸಿಎಂ ಸಿದ್ದರಾಮಯ್ಯರವರಿಗೆ ಹಾಗೂ ಕಾಂಗ್ರೆಸ್ಸಿಗರಿಗೆ ದೈನಂದಿನ ಕಾಯಕವಾಗಿಬಿಟ್ಟಿದೆ. ಕೊಂಚವೂ ನಾಚಿಕೆಯಿಲ್ಲದೆ ತಾವು ನುಡಿಯುವ ಸುಳ್ಳುಗಳನ್ನೇ ಸತ್ಯ ಎಂದು ವಾದಿಸುವುದು ಮುಖ್ಯಮಂತ್ರಿ ಹುದ್ದೆಗೆ ಶೋಭೆ ತರುವುದಿಲ್ಲ ಎಂಬ ಅಂಶವನ್ನು ಸಿದ್ದರಾಮಯ್ಯರವರು ಮನಗಂಡರೆ ಒಳಿತು” ಎಂದಿದೆ.