“ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ ಸರ್ಕಾರವು ಮಣೆ ಹಾಕುತ್ತಿದೆ. ಈ ಮೂಲಕ ಬಡಮಕ್ಕಳ ಭವಿಷ್ಯವನ್ನು ಹಾಳುಗೆಡವುತ್ತಿದೆ. ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಷಡ್ಯಂತ್ರ ಇದು” ಎಂದು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯ ಮಾಜಿ ಕುಲಪತಿ ಗಳಾದ ಪ್ರೊ. ಎ ಮುರಿಗೆಪ್ಪ ಆರೋಪಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ, ‘ಸರ್ಕಾರಿ ಶಾಲೆಗಳನ್ನು ರಕ್ಷಿಸಿ, ಬಲಪಡಿಸಿ’ ಎಂದು ಆಗ್ರಹಿಸಿ ಎಐಡಿಎಸ್ಓ ನೇತೃತ್ವದಲ್ಲಿ ನಡೆದ 50 ಲಕ್ಷ ಸಹಿ ಸಂಗ್ರಹ ಅಭಿಯಾನದ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಕಡಿಮೆ ಸಂಖ್ಯೆಯ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ, ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಸಾಮಾನ್ಯ ಜನರು, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ತಿಳಿದಿರುವ ವಿಷಯ. ವಿದ್ಯಾರ್ಥಿಗಳು ಎಷ್ಟೇ ಇದ್ದರೂ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಬದಲಾಗಿ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಶಿಕ್ಷಕರ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯನ್ನು ಪರಿಹರಿಸಿ ದಾಖಲಾತಿ ಹೆಚ್ಚಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು ಮತ್ತು ಸರ್ಕಾರವು ಶಿಕ್ಷಣಕ್ಕೆ ಒತ್ತು ನೀಡಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚುವುದರ ವಿರುದ್ಧ 50 ಲಕ್ಷ ಜನರ ಸಹಿ ಸಂಗ್ರಹಿಸಿ ಪ್ರಬಲ ಹೋರಾಟ ಬೆಳೆಸಿರುವ ರಾಜ್ಯದ ಏಕೈಕ ವಿದ್ಯಾರ್ಥಿ ಸಂಘಟನೆ ಎಐಡಿಎಸ್ಓ” ಎಂದು ಪ್ರೊ. ಎ ಮುರಿಗೆಪ್ಪ ಅಭಿನಂದನೆ ಸಲ್ಲಿಸಿದರು.
ಎಐಡಿಎಸ್ಓ ಕೇಂದ್ರ ಕೌನ್ಸಿಲ್ ಕಾರ್ಯದರ್ಶಿಗಳಾದ ಶಿಬಾಶಿಶ್ ಪ್ರಹರಾಜ್ ಮಾತನಾಡಿ, “ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಬಂದ ಎಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುತ್ತಲೇ ಬಂದಿವೆ. ಸರ್ಕಾರಗಳ ಈ ಜನವಿರೋಧಿ ನೀತಿಗಳ ವಿರುದ್ಧ ಎಐಡಿಎಸ್ಓ ದೇಶಾದ್ಯಂತ ಹೋರಾಡುತ್ತಿದೆ. ಹೋರಾಟದ ಫಲವಾಗಿ, ಇಂದು ಕರ್ನಾಟಕದ ಶಿಕ್ಷಣ ಸಚಿವರು, ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಹೇಳಿದ್ದಾರೆ. ಇದು ರಾಜ್ಯದ ವಿದ್ಯಾರ್ಥಿಗಳ ಹೋರಾಟಕ್ಕೆ ದಕ್ಕಿರುವ ಜಯವಾಗಿದೆ ಎಂದರು.
“ಸರ್ಕಾರದ ಪ್ರತಿನಿಧಿಗಳು ಎಷ್ಟೇ ಹೇಳಿದರೂ ಇಂದಿಗೂ ಕರ್ನಾಟಕ ಸೇರಿದಂತೆ ದೇಶಾದ್ಯಂತ ಕನಿಷ್ಠ ಮೂಲಭೂತ ಸೌಕರ್ಯ ಹಾಗೂ ಶಿಕ್ಷಕರ ಕೊರತೆಯಿಂದಾಗಿ ಸಾವಿರಾರು ಸರ್ಕಾರಿ ಶಿಕ್ಷಣ ಸಂಸ್ಥೆಗಳು ನಲುಗುತ್ತಿವೆ. ಈ ಸಮಸ್ಯೆಗಳ ವಿರುದ್ಧ ಬಲಿಷ್ಠ ಹೋರಾಟವನ್ನು ಕಟ್ಟುವ ಅವಶ್ಯಕತೆಯನ್ನು ಮನಗಂಡು ವಿದ್ಯಾರ್ಥಿಗಳು ಎಐಡಿಎಸ್ಓ ನೇತೃತ್ವದಲ್ಲಿ ಸಂಘಟಿತರಾಗಬೇಕು” ಎಂದು ಕರೆ ನೀಡಿದರು.

ಎಐಡಿಎಸ್ಓ ತಮಿಳುನಾಡು ರಾಜ್ಯಾಧ್ಯಕ್ಷರಾದ ಸೆಬಾಸ್ಟಿಯನ್ ಮಾತನಾಡಿ, “ಶಿಕ್ಷಣದಲ್ಲಿ ವೈಜ್ಞಾನಿಕ ಚಿಂತನೆಯನ್ನು ಕುಂಠಿತಗೊಳಿಸಿ, ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡುವ ಮನೋಭಾವ ಇಲ್ಲವಾಗುವಂತೆ, ಸರ್ಕಾರಗಳು ತಮ್ಮ ನೀತಿಗಳ ಮೂಲಕ ಅವೈಜ್ಞಾನಿಕ ಚಿಂತನೆಗಳ ಹರಡುತ್ತಿವೆ. ಇದು ನಿಲ್ಲಬೇಕು” ಎಂದು ಆಗ್ರಹಿಸಿದ ಅವರು, “ಶಾಲೆಗಳನ್ನು ಮುಚ್ಚಿ ನಾಗರಿಕತೆಯನ್ನು ಅಜ್ಞಾನಕ್ಕೆ ದೂಡುವ ಹುನ್ನಾರದ ವಿರುದ್ಧದ ಕರ್ನಾಟಕದ ವಿದ್ಯಾರ್ಥಿಗಳ ಹೋರಾಟ ದೇಶಕ್ಕೆ ಮಾದರಿ” ಎಂದು ತಿಳಿಸಿದರು.
ಎಐಡಿಎಸ್ಓನ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, “ಹಲವೆಡೆ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಬಾರದಂತೆ ಶಿಕ್ಷಕರ ಮೂಲಕ ತಡೆ ಹಿಡಿಯಲಾಗಿದೆ. ಅನೇಕ ಶಾಲೆ-ಕಾಲೇಜುಗಳಲ್ಲಿ ದಿಢೀರಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮಕ್ಕಳನ್ನು ಫ್ರೀಡಂ ಪಾರ್ಕಿಗೆ ಕಳುಹಿಸದಂತೆ ಪಾಲಕರನ್ನು ಭಯಪಡಿಸಲಾಗಿದೆ. ಆದರೆ ಎಲ್ಲ ಅಡೆತಡೆಗಳನ್ನು ಮೀರಿ ವಿದ್ಯಾರ್ಥಿಗಳು ಈ ಹೋರಾಟಕ್ಕೆ ಧಾವಿಸಿ ತಾವು ನೇತಾಜಿ – ಭಗತ್ ಸಿಂಗರ ನೈಜ್ಯ ಅನುಯಾಯಿಗಳೆಂದು ಸಾಬೀತುಪಡಿಸಿದ್ದಾರೆ. ಈ ದೇಶದ ಎಲ್ಲ ಮಕ್ಕಳಿಗೂ ಶಿಕ್ಷಣ ದೊರಕಬೇಕೆಂದು ಶ್ರಮಿಸಿದ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಕುದ್ಮುಲ್ ರಂಗರಾವ್ ಹಾಗೂ ಈಶ್ವರ ಚಂದ್ರ ವಿದ್ಯಾಸಾಗರ ಅವರ ಚಿಂತನೆಗಳೇ ಈ ಹೋರಾಟದ ಪ್ರೇರಣೆ ಮತ್ತು ಶಕ್ತಿ. ಈ ಮಹನೀಯರಿಗೆ ನಿಜವಾದ ಅರ್ಥದಲ್ಲಿ ಗೌರವ ಸಲ್ಲಿಸಲು, ಇಂದು ಸರಕಾರಿ ಶಾಲೆಗಳನ್ನು ಬಲಪಡಿಸುವ ಹೋರಾಟಕ್ಕೆ ವಿದ್ಯಾರ್ಥಿ ಸಮೂಹ ಮುಂದಾಗಬೇಕು” ಎಂದು ಕರೆ ನೀಡಿದರು.

ಎಐಡಿಎಸ್ಓನ ರಾಜ್ಯಾಧ್ಯಕ್ಷೆ ಅಶ್ವಿನಿ ಕೆ. ಎಸ್ ಮಾತನಾಡಿ, 50 ಲಕ್ಷ ಸಹಿ ನೀಡಿರುವ ಜನರು ವಿದ್ಯಾರ್ಥಿಗಳನ್ನು ಬೆಂಬಲಿಸಿ ಕಾರ್ಯಕ್ರಮಕ್ಕೆ ಕಳುಹಿಸಿದ್ದಾರೆ . ಸರ್ಕಾರಿ ಶಾಲೆ ಉಳಿಸಲು ವಿದ್ಯಾರ್ಥಿಗಳು ಮಾಡಿರುವ ಕೆಲಸ ಐತಿಹಾಸಿಕವಾದದ್ದು. ರಾಜ್ಯಾದ್ಯಂತ ಎಐಡಿಎಸ್‌ಓ ಬೆಳೆಸಿದ ಹೋರಾಟದ ಒತ್ತಡದಿಂದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸದನದಲ್ಲಿ ಹೇಳಿದ್ದಾರೆ. ಆದರೆ ಈ ಆಶ್ವಾಸನೆ ನಂಬಿ ಹೋರಾಟವನ್ನು ಕೈ ಬಿಡುವಂತಿಲ್ಲ ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು. ‘ಹಬ್ ಅಂಡ್ ಸ್ಪೋಕ್ ‘ ಹೆಸರಿನಲ್ಲಿ ಶಾಲೆಗಳನ್ನು ವಿಲೀನಗೊಳಿಸುವ ಆದೇಶವನ್ನು ಅಧಿಕೃತವಾಗಿ ವಾಪಸು ಪಡೆಯಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಸಮಾವೇಶದಲ್ಲಿ ಭಾಗವಹಿಸಲು ಸಾಧ್ಯವಾಗದ ಪ್ರೊ ಬರಗೂರು ರಾಮಚಂದ್ರಪ್ಪ, ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಚಿತ್ರನಟ ಕಿಶೋರ್ ಹೋರಾಟವನ್ನು ಅಭಿನಂದಿಸಿ ಕಳುಹಿಸಿದ್ದ ಸಂದೇಶವನ್ನು ಮುಖಂಡರು ವಾಚಿಸಿದರು.
ಇದನ್ನು ಓದಿದ್ದೀರಾ? ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ: ವಶಕ್ಕೆ ಪಡೆಯುವ ಸಾಧ್ಯತೆ?
ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಅನಿತಾ ನಜಾರೆ ಅವರು ಸರ್ಕಾರದ ಪರವಾಗಿ ಸಮಾವೇಶಕ್ಕೆ ಆಗಮಿಸಿ ರಾಜ್ಯದ ಜನತೆಯು ನೀಡಿದ 50 ಲಕ್ಷ ಸಹಿಗಳನ್ನು ಸ್ವೀಕರಿಸಿದರು. ರಾಜ್ಯದ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಾದ ಶಿಕ್ಷಕರ ಕೊರತೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಿಸುವಂತೆ ಒತ್ತಾಯಿಸಿ ಮನವಿ ಪತ್ರವನ್ನು ಅವರಿಗೆ ಸಲ್ಲಿಸಲಾಯಿತು.


