‘ಧ್ವನಿ ಎತ್ತೋಣ: ಭವಿಷ್ಯದಲ್ಲಿ ಸಮನ್ವಯ ಸಾಧಿಸಲು ವಿಶೇಷಚೇತನರಲ್ಲಿ ನಾಯಕತ್ವವನ್ನು ಉತ್ತೇಜಿಸೋಣ” ಎಂಬ ಧ್ಯೇಯದ ಅಡಿಯಲ್ಲಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (APD) ಹಾಗೂ ನ್ಯಾಷನಲ್ ಸೆಂಟರ್ ಫಾರ್ ಪ್ರೊಮೋಷನ್ ಆಫ್ ಎಂಪ್ಲಾಯ್ಮೆಂಟ್ ಫಾರ್ ಡಿಸೆಬಲ್ಡ್ ಪೀಪಲ್ (NCPEDP) ವತಿಯಿಂದ ಕರ್ನಾಟಕ ರಾಜ್ಯ ವಿಕಲಾಂಗ ಆಯ್ತಕರ ಸಹಯೋಗದೊಂದಿಗೆ ವಿಶೇಣಚೇತನರಿಗಾಗಿ ದಕ್ಷಿಣ ಭಾರತ ಪ್ರಾದೇಶೀಕ ಸಮಾಲೋಚನಾ ಕಾರ್ಯಾಗಾರಕ್ಕೆ ಬೆಂಗಳೂರಿನ ಪಾಲನಾ ಭವನದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಫೆ 8 & 9ರಂದು ನಡೆಯಲಿರುವ ಈ ಕಾರ್ಯಾಗಾರದಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿ ಹಾಗೂ ಕರ್ನಾಟಕದಿಂದ 50ಕ್ಕೂ ಹೆಚ್ಚು ಡಿಪಿಓ ಹಾಗೂ ಸಂಘಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಿಶೇಷ ಚೇತನರ ಆಯೋಗದ ಆಯುಕ್ತರಾದ ದಾಸ್ ಸೂರ್ಯವಂಶಿ, “ವಿಶೇಷ ಚೇತನರಿಗೆ ಅಗತ್ಯವಿರುವ ಸೇವೆ ಹಾಗೂ ಸೌಕರ್ಯಗಳ ಕುರಿತು ನ್ಯಾಯಾಂಗ ಮತ್ತು ಸರ್ಕಾರದ ಕಣ್ಣು ತೆರೆಸುವ ಕೆಲಸವನ್ನು ವಿಶೇಷಚೇತನರು ಒಗ್ಗಟ್ಟಿನೊಂದಿಗೆ ಮಾಡಬೇಕಿದೆ” ಎಂದರು.

“ನ್ಯಾಯಾಂಗ ಮತ್ತು ಸರ್ಕಾರದ ಕಣ್ಣು ತೆರೆಸುವ ಕೆಲಸ ಆಗಬೇಕಿದೆ. ಇದಕ್ಕಾಗಿ ತಮ್ಮನ್ನು ತಾವು ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಕೆಲಸ ಮಾಡಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
“ಕರ್ನಾಟಕದಲ್ಲಿ ಈಗಾಗಲೇ ಜಾಗೃತಿ ಮೂಡುತ್ತಿದ್ದು, ದೇಶದಲ್ಲಿ ಸುಲಭಲಭ್ಯತೆಯ ಬಗ್ಗೆ ಸೇವೆ ಸಲ್ಲಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವೆಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ಒಂದು ಮೊಬೈಲ್ ಅಪ್ಲಿಕೇಶನ್ ಮೂಲಕ ಇವತ್ತು ನಗರ, ಪಟ್ಟಣ, ಜಿಲ್ಲೆ ದೇಶ ಹಾಗೂ ಪ್ರಪಂಚವನ್ನೇ ಸುಲಭ ಲಭ್ಯತೆಯತ್ತ ಆಹ್ವಾನಿಸುವ ಗುರಿಯನ್ನು ಈಗ ಕರ್ನಾಟಕ ಪಡೆದಿದೆ ಎಂಬುದು ವಿಶೇಷ” ಎಂದರು.

ವಿಶೇಷ ಚೇತನರ ಬೆಂಗಳೂರು ನಗರ ಜಿಲ್ಲಾ ಕಲ್ಯಾಣಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ವಿಶೇಷ ಚೇತನರಿಗೆ ಬೇಕಾಗುವ ಎಲ್ಲ ಬಗೆಯ ಸೌಲಭ್ಯಗಳು ಜಿಲ್ಲೆಯಲ್ಲಿ ಒಂದೇ ಸೂರಿನಡಿಯಲ್ಲಿ ಲಭಿಸುವಂತೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಎಪಿಡಿ ಬೋರ್ಡ್ ಸದಸ್ಯರಾದ ದಿವಾಕರ್ ಮೆನನ್‌ರವರು ಮಾತನಾಡಿ, “ಸುಪ್ರೀಂ ಕೋರ್ಟ್ ಈಗಾಗಲೇ ವಿಶೇಷ ಚೇತನರಿಗೆ ಎಲ್ಲ ಸಾರ್ವಜನಿಕ ಸ್ಥಳಗಳನ್ನು ಸುಲಭಲಭ್ಯವಾಗಿಸಬೇಕು ಎಂದು ತೀರ್ಪು ನೀಡಿದ್ದರೂ ಅದನ್ನು ಹೇಗೆ ಅನುಷ್ಠಾನಕ್ಕೆ ತರಬಹುದು ಎಂಬ ಬಗ್ಗೆ ಎಸ್ ಟು ಆಕ್ಸೆಸ್ ಎಂಬ ಮೊಬೈಲ್ ಆ್ಯಪ್‌ನ್ನು ಎಪಿಡಿ ಹೊರತಂದಿದೆ. ಈ ಆ್ಯಪ್‌ನ ಸಹಾಯದಿಂದ ವಿಶೇಷ ಚೇತನರು ಸಾರ್ವಜನಿಕ ಸ್ಥಳಗಳಲ್ಲಿ ಇರುವ ರ‌್ಯಾಂಪ್, ವ್ಹೀಲ್‌ಚೇರ್, ಶೌಚಾಲಯ ಸೇರಿದಂತೆ ಇತರೆ ಸುಲಭ ಲಭ್ಯ ಸೇವೆಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಕುಂದು ಕೊರತೆಗಳನ್ನು ಫೋಟೋ ಸಮೇತ ದೂರು ನೀಡಬಹುದು. ಈ ಮಾಹಿತಿಯ ಆಧಾರದ ಮೇಲೆ ಸರ್ಕಾರ ಈ ಸ್ಥಳಗಳಲ್ಲಿ ಅಗತ್ಯವಿರುವ ಸೇವೆಗಳನ್ನು ಒದಗಿಸಲು ಮುಂದಡಿ ಇರಿಸಬೇಕಿದೆ” ಎಂದರು.

ಚುನಾವಣೆ, ಜನಗಣತಿ ಹಾಗೂ ರಾಜಕೀಯ ಪ್ರತಿನಿಧಿಗಳಾಗಿ ಸಾರ್ವಜನಿಕ ಸಂಸ್ಥೆಗಳಲ್ಲಿ ವಿಶೇಷಚೇತನರ ಭಾಗಿತ್ವದ ಬಗ್ಗೆ ಹಾಗೂ ಕೇಂದ್ರ ಮತ್ತು ರಾಜ್ಯಗಳ ವಿಶೇಷಚೇತನರ ಬಜೆಟ್, ಆರೋಗ್ಯ ಮತ್ತು ವಿಕಲಾಂಗತೆಯಲ್ಲಿ ವಿಮಾ ಯೋಜನೆ, ಆಯುಷ್ಮಾನ್ ಭಾರತ್, ನಿರಾಮಯ ಯೋಜನೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳ ಹಾಗೂ ಶಿಭಿರಾರ್ಥಿಗಳ ನಡುವೆ ವಿಚಾರ ವಿನಿಮಯ ಜರುಗಿತು.
ಕಾರ್ಯಕ್ರಮದ ಆರಂಭದಲ್ಲಿ ಎಪಿಡಿ ನೀತಿ ಮತ್ತು ವಕಾಲತ್ತು ವಿಭಾಗದ ಉಪಾಧ್ಯಕ್ಷರಾದ ಎಸ್. ಬಾಬುರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಕೆಎಸ್‌ಡಿಸಿಎಫ್ ಅಧ್ಯಕ್ಷರಾದ ಜಿ.ಎನ್ ನಾಗರಾಜ್, ಎನ್‌ಸಿಪಿಡಿಪಿ ಕಾರ್ಯಕ್ರಮಗಳ ವ್ಯವಸ್ಥಾಪಕರಾದ ಅಕ್ಷಯ್ ಜೈನ್ ಹಾಗೂ ಶಿವಾನಿ ಜಾಧವ್, ಪಾಂಡಿಚೇರಿ ಯುನಿವರ್ಸಿಟಿಯ ಪ್ರಾಧ್ಯಾಪಕರಾದ ಪ್ರೊ. ಎ. ಚಿದಂಬರಂ, ಕರ್ನಾಟಕ ಆರ್‌ಪಿಡಿ ಟಾಸ್ಕ್‌ಫೋರ್ಸ್ ಅಧ್ಯಕ್ಷರಾದ ಸುರೇಶ್ ಭಂಡಾರಿಯವರು ಉಪಸ್ಥಿತರಿದ್ದರು. ಭಾಸ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು.


