ಕನ್ನಡ ಸಾಹಿತ್ಯಕ್ಕೆ ಅನುಕೂಲವಾಗುವಂತೆ ಕನ್ನಡ ಕೋಶ ರಚಿಸಿದ ಕಿಟೆಲ್ ಅವರ ಹೆಸರಿನಲ್ಲಿ ಸರ್ಕಾರ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ.ಸಂಕನೂರ ಹೇಳಿದರು.
ಧಾರವಾಡದ ದಕ್ಷಿಣ ಭಾರತ ಸಭೆ, ಉತ್ತರ ಸಭಾ ಪ್ರಾಂತ್ಯ ಬಾಸೆಲ್ ಮಿಷನ್ ಉಚ್ಚ ಶಿಕ್ಷಣ ಸಂಸ್ಥೆಯ , ಕಿಟೆಲ್ ವಿಜ್ಞಾನ ಮಹಾವಿದ್ಯಾಲಯ ಆಶ್ರಯದಲ್ಲಿ ಆಯೋಜಿಸಿದ್ದ ರೆವರೆಂಡ್ ಡಾ.ಫರ್ಡಿನಾಂಡ್ ಕಿಟೆಲ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.
ʼಕರ್ನಾಟಕಕ್ಕೆ ಕಿಟಲ್ ಅವರ ಕೊಡುಗೆ ಅನುಪಮವಾಗಿದೆ. ಕನ್ನಡ ಭಾಷಾ ಕೋಶ ರಚಿಸಿ ಕೊಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಅವರನ್ನು ಸ್ಮರಿಸುವ ನಿಟ್ಟಿನಲ್ಲಿ ಸರ್ಕಾರ ಕಿಟೆಲ್ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ ಮುಂದಾಗಬೇಕುʼ ಎಂದು ಆಗ್ರಹಿಸಿದರು.
ಪ್ರಾಚಾರ್ಯ ಡಾ.ಕ್ರಿಸ್ಟೋಫರ್ ಆರ್.ಭಾಸ್ಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೆವರೆಂಡ್ ಸಾಮುವೇಲ್ ಕೆಲ್ವಿನ್, ಸಾಲೇಮನರಾಜ, ದೇವರವಾಕ್ಯ ಪಠಣ ಮಾಡಿದರು.
ಕಾರ್ಯಕ್ರಮದಲ್ಲಿ ರೈಟ್ ರೆವರೆಂಡ್ ಡಾ ಮಾರ್ಟಿನ್ ಭೋರ್ಗಾಯಿ ಬಿಷಪ್, ವಿಜಯ ಕುಮಾರ ದಂಡಿನ, ಡಾ.ಜಿ.ಎಂ.ಹೆಗಡೆ, ಶಂಕರ ಹಲಗತ್ತಿ, ಧನರಾಜ್ ತುಡಿಮೆ ಸೇರಿದಂತೆ ಅಂಗ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ಅರ್ಪಿತಾ ಹೂಗಾರ ಪ್ರಾರ್ಥಿಸಿದರು, ಜಿ.ವಿಮಲಾ ನಿರೂಪಿಸಿದರು.