ತಾನು ಬಾಲ್ಯದಲ್ಲಿ ಪಟ್ಟ ಸಂಕಷ್ಟದ ಪರಿಸ್ಥಿತಿ ಬೇರೆ ವಿದ್ಯಾರ್ಥಿಗಳಿಗೆ ಬರಬಾರದು ಎಂಬ ನಿಟ್ಟಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಶಿಕ್ಷಕರಾಗಿ, ಆ ಶಾಲೆಯ ಪರಿಸ್ಥಿತಿ ಕಂಡು ಮರುಗಿ ವೈಯಕ್ತಿಕವಾಗಿ ಹಾಗೂ ದಾನಿಗಳ ನೆರವಿನಿಂದ 8 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ಖರ್ಚು ಮಾಡುವ ಮೂಲಕ ಶಿಕ್ಷಕರೊಬ್ಬರು ಎಲ್ಲರೂ ಹೆಮ್ಮೆಪಡುವಂತಹ ಕೆಲಸವನ್ನು ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಲುವರಸನ ಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕೆ.ಬಿ.ಕುಮಾರ್ ಅವರೇ ಜನಮೆಚ್ಚುಗೆ ಪಡೆದವರು.
2013ರಲ್ಲಿ ಕೆ.ಬಿ.ಕುಮಾರ್ ಅವರು ಈ ಶಾಲೆಗೆ ಬಂದಾಗ ಕಳೆಗುಂದಿತ್ತು. 15 ಮಕ್ಕಳಿದ್ದ ಶಾಲೆಯ ಕಟ್ಟಡ ಶಿಥಿಲಗೊಂಡು, ಹೆಂಚುಗಳು ಅಲ್ಲಲ್ಲಿ ಒಡೆದು ಬಿದ್ದಿದ್ದವು. ಸುತ್ತಮುತ್ತ ದನದ ಕೊಟ್ಟಿಗೆ, ಎಲ್ಲೆಂದರಲ್ಲಿ ಒಣಗಿ ಹಾಕಿದ್ದ ಬಟ್ಟೆಗಳೇ ನೇತಾಡುತ್ತಿದ್ದವು. ಈ ವೇಳೆ ಶಾಲೆಗೆ ವರ್ಗಾವಣೆಯಾಗಿ ಬಂದ ಶಿಕ್ಷಕ ಕುಮಾರ್ ಅವರು, ಏನಾದರಾಗಲಿ. ಈ ಶಾಲೆಯನ್ನು ಉನ್ನತೀಕರಣಗೊಳಿಸುತ್ತೇನೆ ಎಂಬುದಾಗಿ ಶಪಥ ಮಾಡಿದ್ದರು. ಆ ಬಳಿಕ ಕೇವಲ ಕೆಲವೇ ವರ್ಷಗಳಲ್ಲಿ ಚಲುವರಸನ ಕೊಪ್ಪಲು ಶಾಲೆ ತಾಲೂಕಿನಲ್ಲೇ ಹೆಚ್ಚು ಗಮನ ಸೆಳೆಯುವಂತೆ ಈಗ ತಲೆ ಎತ್ತಿ ನಿಂತಿದೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ನೋಡಿದರೆ ಹೈಟೆಕ್ ಖಾಸಗಿ ಶಾಲೆಯೋ ಎನಿಸದೆ ಇರದು. ಇರುವ ಕಡಿಮೆ ಜಾಗದಲ್ಲೇ ಸುಸಜ್ಜಿತವಾದ ಹೊರಾಂಗಣ ಇದೆ. ಓದಿ ಕಲಿಯುವುದಕ್ಕಿಂತ ಮಕ್ಕಳು ನೋಡಿ ಕಲಿಯುವಂತೆ ಎಲ್ಲ ಗೋಡೆಗಳ ಮೇಲೂ ಸಮಾಜ ವಿಜ್ಞಾನ ವಿಜ್ಞಾನ, ಖಗೋಳ, ಇತಿಹಾಸ ವಿಷಯಗಳನ್ನು ಮಕ್ಕಳ ಮನಸ್ಸಿಗೆ ದಾಟಿಸುವಂತೆ ಚಿತ್ರಕಲೆಗಳನ್ನು ಮೈಸೂರಿನ ಕಾವಾ ವಿದ್ಯಾರ್ಥಿಗಳಿಂದ ಮೂಡಿಸಲಾಗಿದೆ. ಗ್ರಾಮೀಣ ಮಕ್ಕಳ ಕಲಿಕೆಗೆ ಏನು ಬೇಕೋ ಅದೆಲ್ಲವನ್ನೂ ಮಾಡಿರುವ ಶಿಕ್ಷಕ ಕುಮಾರ್ ಇದಕ್ಕಾಗಿ ರೂ. 8 ಲಕ್ಷಕ್ಕೂ ಹೆಚ್ಚು ಹಣವನ್ನು ವ್ಯಯಿಸಿದ್ದಾರೆ.
ಮೂಲತ ಸಾವಯವ ಕೃಷಿಕರೂ ಆದ ಕೆ.ಬಿ.ಕುಮಾರ್ ಅವರು ತಮ್ಮ ವೈಯಕ್ತಿಕ ಹಣ ತೊಡಗಿಸಿ ಸರ್ಕಾರಿ ಶಾಲೆಯನ್ನು ಈ ಮಟ್ಟಕ್ಕೆ ಅಭಿವೃದ್ಧಿಪಡಿಸುವ ಮೂಲಕ ಮಾದರಿ ಶಿಕ್ಷಕರಾಗಿದ್ದಾರೆ.
ಕಟ್ಟಡವನ್ನು ಸುಸ್ಥಿತಿಗೆ ತಂದಿದ್ದಾರೆ. ಹೆಂಚುಗಳನ್ನು ಅಳವಡಿಸಿ, ಕಾಂಪೌಂಡ್ ನಿರ್ಮಿಸಿ, ಎಲ್ಲ ಕೊಠಡಿಗಳಿಗೂ ಟೈಲ್ಸ್ ಹಾಕಿಸಿದ್ದಾರೆ. ಶಾಲೆಯ ಮುಂದೆ ಇರುವ ಸ್ವಲ್ಪ ಜಾಗದಲ್ಲೇ ರಂಗಮಂದಿರವನ್ನು ಕಟ್ಟಿಸಿದ್ದಾರೆ. ಅಲ್ಲಿಯೂ ಕೂಡ ತರಗತಿಯನ್ನು ನಡೆಸಲಾಗುತ್ತಿದೆ. ಗ್ರಂಥಾಲಯದಲ್ಲಿ ಮಕ್ಕಳ ಅಚ್ಚುಮೆಚ್ಚಿನ ಕಾಮಿಕ್ಸ್, ಮಕ್ಕಳ ಸಾಹಿತ್ಯದ ಪುಸ್ತಕಗಳಿವೆ. ಶಾಲಾವರಣದಲ್ಲೇ ಮಕ್ಕಳಿಗೆ ನಲಿ-ಕಲಿ ರೀತಿಯ ಚಿತ್ರಗಳು ಗಮನ ಸೆಳೆಯುತ್ತವೆ. 15 ಮಕ್ಕಳಿದ್ದ ಶಾಲೆಯಲ್ಲಿ ಈಗ ದಾಖಲಾತಿ ಹೆಚ್ಚಾಗಿದ್ದು, 96 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಇದನ್ನು ಓದಿದ್ದೀರಾ? ಶಿವಮೊಗ್ಗ | ಸೌಹಾರ್ದ ಸಮಿತಿಯಿಂದ ಗಣಪತಿಗೆ ಮಾಲಾರ್ಪಣೆ
ಚಲುವರಸನಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮುಖ್ಯಶಿಕ್ಷಕ ಕೆ.ಬಿ.ಕುಮಾರ್ ಅವರು ಹೆಚ್ಚಿನ ಮುತುವರ್ಜಿಯಿಂದ ತಮ್ಮ ವೈಯಕ್ತಿಕ ಹಣದೊಂದಿಗೆ ದಾನಿಗಳ ಸಹಕಾರವನ್ನೂ ಪಡೆದು ಅಭಿವೃದ್ಧಿಪಡಿಸಿದ್ದಾರೆ. ಇದೊಂದು ಶ್ಲಾಘನೀಯ ಮತ್ತು ಮಾದರಿ ಕಾರ್ಯ ಎಂದು ಪೋಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಥಳಾವಕಾಶದ ಕೊರತೆ
ಈ ಶಾಲೆಯಲ್ಲಿ ಕ್ಯಾತನಹಳ್ಳಿ, ಎಣ್ಣೆಹೊಳೆ ಕೊಪ್ಪಲು, ಕಡತನಾಲು, ದೊಡ್ಡೇಗೌಡನ ಕೊಪ್ಪಲು ಹಾಗೂ ಚಲುವರಸನ ಕೊಪ್ಪಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಮಕ್ಕಳು ಕಲಿಯಲು ದಾಖಲಾತಿಗೊಂಡಿದ್ದಾರೆ. ಶಾಲೆಯನ್ನು ಅಭಿವೃದ್ಧಿಪಡಿಸಿದ್ದರಿಂದ ಸದ್ಯ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಸ್ಥಳಾವಕಾಶದ ಕೊರತೆ ಉಂಟಾಗಿದೆ. ಪ್ರೀ ಕೆಜಿ-ಎಲ್‌ಕೆಜಿಯಿಂದ ಹಿಡಿದು 5ನೇ ತರಗತಿಯವರೆಗೆ ಎಂಟು ವಿಭಾಗಗಳು ಈ ಶಾಲೆಯಲ್ಲಿದ್ದು, ಒಟ್ಟು ಈಗ 96 ಮಕ್ಕಳಿದ್ದಾರೆ. ಮೂರು ಕೊಠಡಿ, ರಂಗಮಂದಿರದಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತಿದೆ.
ಪೋಷಕರ ಸಹಕಾರ
ಈ ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರು ಹಾಗೂ ಅವರ ಸ್ನೇಹಿತರು ಕೂಡ ಕೈಜೋಡಿಸಿದ್ದಾರೆ. ಶಾಲೆಯ ಮಕ್ಕಳಿಗಾಗಿ ಕೂರಲು ಹಾಗೂ ಬರೆಯುವುದಕ್ಕೂ ಆಗುವಂತಹ ಸುಮಾರು 30 ಕುರ್ಚಿ(ಚೇರ್) ಅನ್ನು ದಾನವಾಗಿ ನೀಡುವಲ್ಲಿ ಸಹಕರಿಸಿದ್ದಾರೆ.
ಬೇಕಿದೆ ಕಂಪ್ಯೂಟರ್ ನೆರವು
ಈ ಶಾಲೆಯಲ್ಲಿ ಇರುವ ಜಾಗದಲ್ಲೇ ಚೊಕ್ಕದಾಗಿ ಗ್ರಂಥಾಲಯ ಮೂಲೆಯನ್ನು ರಚಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ತಮಗೆ ಬಿಡುವಿದ್ದಾಗ ಬಂದು ಪುಸ್ತಕಗಳನ್ನು ಓದುತ್ತಿದ್ದಾರೆ. ಇದರ ಜೊತೆಗೆ ಕಂಪ್ಯೂಟರ್ ಮೂಲೆಯನ್ನು ಕೂಡ ಮಾಡಿ ಇಡಲಾಗಿದೆ. ಆದರೆ, ಈವರೆಗೆ ಯಾರೂ ಕೂಡ ಕಂಪ್ಯೂಟರ್ ನೀಡಿಲ್ಲ. ಯಾರಾದರೂ ದಾನಿಗಳು ಶಾಲೆಗೆ ಕಂಪ್ಯೂಟರ್ ನೀಡಲು ಇದ್ದಲ್ಲಿ ನೆರವು ನೀಡಬಹುದು ಎಂದು ಮುಖ್ಯ ಶಿಕ್ಷಕ ಕೆ.ಬಿ.ಕುಮಾರ್ ಅವರು ವಿನಂತಿಸಿದ್ದಾರೆ.
