ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ ಸುಗಮವಾಗಿ ತರಗತಿಗಳನ್ನು ನಡೆಸಲು ಅನುವು ಮಾಡಿಕೊಡಬೇಕೆಂದು ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳ ಒಕ್ಕೂಟ ಆಗ್ರಹಿಸಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.
“ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನ.23 ರಿಂದ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟವಾಧಿ ಧರಣಿ ನಡೆಸುತ್ತಿರುವ ಕಾರಣದಿಂದ ನಮಗೆ ತರಗತಿಗಳು ನಡೆಯದೆ ತೊಂದರೆಯಾಗಿದೆ, ಇದರಿಂದ ಶೈಕ್ಷಣಿಕ ಹಿನ್ನಡೆಯಾಗುತ್ತದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ” ವಿದ್ಯಾರ್ಥಿಗಳು ಆಗ್ರಹಿಸಿದರು.
ಅತಿಥಿ ಉಪನ್ಯಾಸಕ ರಾಮಣ್ಣ ಬೇರ್ಗಿ ಮಾತನಾಡಿ, ” ಅತಿಥಿ ಉಪನ್ಯಾಸಕರ ಬೇಡಿಕೆ ಕುರಿತು ಸ್ಥಳೀಯ ಶಾಸಕ ಹಂಪನಗೌಡ ಬಾದರ್ಲಿಯವರ ಭೇಟಿಗೆ ಹೋದರೂ ಸ್ಪಂದಿಸುತ್ತಿಲ್ಲ. ಸುವರ್ಣ ಮಹೋತ್ಸವ ಕಾರ್ಯಕ್ರಮ, ಕಾರ್ಯಕರ್ತರ ಸಭೆ ಮಾಡಲು ಸಮಯವಿದೆ, ಆದರೆ ಹತ್ತಾರು ಬಾರಿ ಮನೆಗೆ ಹೋಗಿ ಮನವಿ ಸಲ್ಲಿಸಿದರೂ ಕನಿಷ್ಠ ಸೌಜನ್ಯಕ್ಕಾದರೂ ನಮಗೆ ಸ್ಪಂದಿಸುತ್ತಿಲ್ಲ. ಸಚಿವರಾದ ನಾಗೇಂದ್ರ, ಈಶ್ವರ ಖಂಡ್ರೆ ಅವರಿಗೂ ಕೂಡ ಒತ್ತಾಯಿಸಿದ್ದೆವೆ. ಆದರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಾವು ಹತ್ತಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರೂ ಕಾಯಂಗೊಳಿಸುತ್ತಿಲ್ಲ. ಇದೇ ರೀತಿ ಮುಂದುವರಿದಲ್ಲಿ ಪಾಲಕರೊಂದಿಗೆ ಬೀದಿಗಳಿದು ಹೋರಾಟ ಮಾಡಲಾಗುವುದು. ಡಿ.7 ರಂದು ಬೆಳಗಾವಿ ಅಧಿವೇಶನದಲ್ಲಿ ಧ್ವನಿಯೆತ್ತುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬೈಸಿಕಲ್‌ನಲ್ಲಿ ಕಚೇರಿಗೆ ತೆರಳಿ ಗಮನ ಸೆಳೆದ ಡಿಸಿ, ಎಸ್‌ಪಿ
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಚಂದ್ರಶೇಖರ ಗೋರೆಬಾಳ, ಮದಗಪ್ಪ, ಅರುಣಕುಮಾರ ಬೇರ್ಗಿ, ಬಸವರಾಜ ಬಾದರ್ಲಿ, ಶಂಕರ್ ವಾಲೆಕರ್, ಪರಶುರಾಮ, ಸೇರಿದಂತೆ ಹಲವು ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.