ಬೆಳಗಾವಿ ಅಧಿವೇಶನ | ಡಿಸೆಂಬರ್‌ ಬದಲು ಜನವರಿ 23ಕ್ಕೆ ಪಿಎಸ್‌ಐ ಮರು ಪರೀಕ್ಷೆ, ಪರಮೇಶ್ವರ್‌ ಘೋಷಣೆ

Date:

  • ಪಿಎಸ್‌ಐ ಪರೀಕ್ಷಾರ್ಥಿಗಳ ಪರವಾಗಿ ಧ್ವನಿ ಎತ್ತಿದ ಶಾಸಕ ಯತ್ನಾಳ
  • ಶಾಸಕರ ಕೋರಿಕೆಗೆ ಪರಮೇಶ್ವರ್‌ ಸ್ಪಂದನೆ, ದಿನಾಂಕ ಮುಂದೂಡಿಕೆ

545 ಪಿಎಸ್‌ಐ ನೇಮಕಾತಿಯ ಮರು ಪರೀಕ್ಷೆಯ ದಿನಾಂಕವನ್ನು ವಿಸ್ತರಿಸಿರುವುದಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಅವರು ಸದನಕ್ಕೆ ಮಾಹಿತಿ ನೀಡಿದರು.

16ನೇ ವಿಧಾನಸಭೆಯ ಎರಡನೇ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಆರಂಭವಾಗಿದ್ದು, ಮಧ್ಯಾಹ್ನ ನಡೆದ ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪಿಎಸ್‌ಐ ಪರೀಕ್ಷಾರ್ಥಿಗಳ ಪರವಾಗಿ ಧ್ವನಿ ಎತ್ತಿದರು.

ಸಭಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದ ಯತ್ನಾಳ, “ಪಿಎಸ್‌ಐ ಅಕ್ರಮದಲ್ಲಿ ಯಾರು ಭಾಗಿಯಾಗಿದ್ದಾರೋ ಅವರನ್ನು ಒದ್ದು ಒಳಗೆ ಹಾಕಬೇಕು. ಪಿಎಸ್‌ಐ ಅಕ್ರಮದ ಬಗ್ಗೆ ಧ್ವನಿ ಎತ್ತಿದ್ದ ಕಾಂಗ್ರೆಸ್‌ ಈಗ ಸರ್ಕಾರದ ಸ್ಥಾನದಲ್ಲಿದೆ. ದಯವಿಟ್ಟು ಆ ಪರೀಕ್ಷಾರ್ಥಿಗಳಿಗೆ ನ್ಯಾಯಕೊಡಿಸಬೇಕು. ಗೃಹ ಸಚಿವರು ಮರು ಪರೀಕ್ಷೆಗೆ ಆರು ತಿಂಗಳು ಸಮಯಕೊಡಬೇಕು” ಎಂದು ಆಗ್ರಹಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮುಂದುವರಿದು, “ವಿರೋಧ ಪಕ್ಷದಲ್ಲಿ ಪ್ರಿಯಾಂಕ್‌ ಖರ್ಗೆ ಅವರು ಆಗ ವೀರಾವೇಶದಿಂದ ಪಿಎಸ್‌ಐ ಅಕ್ರಮದ ಬಗ್ಗೆ ಮಾತನಾಡಿದ್ದರು. ಆಗಿನ ಅವರ ವೀರಾವೇಶ ಈಗ ಎಲ್ಲಿ ಹೋಯಿತು? ಪಿಎಸ್‌ಐ ಅಕ್ರಮವನ್ನು ಸಿಬಿಐ ತನಿಖೆಗೆ ಸರ್ಕಾರ ಕೊಡಬೇಕು. ರಾಜ್ಯದ ಜನತೆ ಯಾರು ಯಾರು ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗಬೇಕು” ಎಂದು ಒತ್ತಾಯಿಸಿದರು.

ಸಚಿವ ಪ್ರಿಯಾಂಕ್‌ ಖರ್ಗೆ ಅವರು ಯತ್ನಾಳ ಮಾತಿಗೆ ಪ್ರತಿಕ್ರಿಯಿಸಿ, “ನ್ಯಾಯಕೊಡಿಸಲು ನಾನು ಈಗಲೂ ಹೋರಾಡುತ್ತೇನೆ. ಅವರದ್ದೇ ಸರ್ಕಾರ ಹಗರಣವೇ ಇಲ್ಲ ಎಂದಿತ್ತು. ನಮ್ಮ ಸರ್ಕಾರ ಬಂದ ಮೇಲೆ ಫಾಲೋ ಅಪ್‌ ಮಾಡಿದ್ದರಿಂದ ಹೈಕೋರ್ಟ್‌ ಮರು ಪರೀಕ್ಷೆಗೆ ಅವಕಾಶ ಮಾಡಿದೆ. ಯತ್ನಾಳ ಅವರ ಮನಸಲ್ಲಿ ಏನಿದೆ ಅದನ್ನು ನಮ್ಮ ಸರ್ಕಾರ ಮಾಡಲಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸಿನ ಚಳಿ ಬಿಡಿಸಲಿದೆಯೇ ಬಿಜೆಪಿ?

ಗೃಹ ಸಚಿವ ಪರಮೇಶ್ವರ್‌ ಅವರು ಉತ್ತರಿಸಿ, “ಹಿಂದಿನ ಸರ್ಕಾರ ಪರೀಕ್ಷೆ ಮಾಡಿ, ದೈಹಿಕ ಪರೀಕ್ಷೆ ನಡೆಸಿತ್ತು. ಇನ್ನೇನು ಎಲ್ಲ ಮುಗಿದು ಹೋಯಿತು ಎನ್ನುವಷ್ಟರಲ್ಲಿ ಅಕ್ರಮ ಬೆಳಕಿಗೆ ಬಂದಿತು. ಮರು ಪರೀಕ್ಷೆಗೆ ಹಿಂದಿನ ಸರ್ಕಾರ ನಿರ್ಧಾರ ಮಾಡಿತ್ತು. ಪರೀಕ್ಷಾರ್ಥಿಗಳು ಕೋರ್ಟ್‌ ಮೆಟ್ಟಿಲೇರಿ ಎರಡು ವರ್ಷದ ನಂತರ ತೀರ್ಪು ಬಂದಿದೆ. ಮರು ಪರೀಕ್ಷೆ ಮಾಡಿ ಎಂದಿದೆ. ಆ ಪ್ರಕಾರ ನಾವು ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಮುಂದುವರಿದು, “ಪರೀಕ್ಷೆ ದಿನಾಂಕ ವಿಸ್ತರಣೆ ಮಾಡಲು ಆಗುವುದಿಲ್ಲ. ಎಲ್ಲ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಇನ್ನೂ 403 ಜನ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿಗಾಗಿ ಕಾಯುತ್ತಿದ್ದಾರೆ. ನಂತರ 600 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆ ತುಂಬಬೇಕಿದೆ. ನೇಮಕಾತಿ ಮುಂದೆ ಮುಂದೆ ಹಾಕಲು ಆಗುವುದಿಲ್ಲ. ದಯವಿಟ್ಟು ಅರ್ಥ ಮಾಡಿಕೊಳ್ಳಲಿ” ಎಂದು ಸದನಕ್ಕೆ ತಿಳಿಸಿದರು.

ಯತ್ನಾಳ ಮಧ್ಯೆ ಪ್ರವೇಶಿಸಿ, “ಜನವರಿ ಕೊನೆಯ ವಾರದಲ್ಲಿ ಆದರೂ ಅವಕಾಶ ಮಾಡಿಕೊಡಿ. 54 ಸಾವಿರ ವಿದ್ಯಾರ್ಥಿಗಳ ಭವಿಷ್ಯವಿದೆ. ದಯವಿಟ್ಟು ಸರ್ಕಾರ ಅರ್ಥಮಾಡಿಕೊಳ್ಳಲಿ” ಎಂದು ಸಭಾಧ್ಯಕ್ಷರನ್ನು ಕೋರಿದರು. ಯತ್ನಾಳ ಮಾತಿಗೆ ವಿರೋಧ ಪಕ್ಷದ ನಾಯಕ ಆರ್‌ ಅಶೋಕ ಸೇರಿದಂತೆ ಹಲವು ಶಾಸಕರು ಧ್ವನಿಗೂಡಿಸಿದರು.

ಸಚಿವ ಪರಮೇಶ್ವರ್ ಮತ್ತೆ ಮಾತನಾಡಿ, “ಶೆಡ್ಯೂಲ್‌ ಮಾಡಿ ಪರೀಕ್ಷೆ ನಡೆಸಲಾಗುತ್ತಿದೆ. ಹಿಂದಿನ ಅಕ್ರಮ ಮತ್ತೆ ಮರುಕಳಿಸಬಾರದು ಎಂದು ಈ ಸಲ ಬೆಂಗಳೂರಿನಲ್ಲಿ ಪರೀಕ್ಷೆ ನಡೆಸುತ್ತಿದ್ದೇವೆ. ಹಿಂದೆ ಪರೀಕ್ಷೆ ನಡೆದಾಗ ಸರಿಯಾಗಿ ಕ್ರಮ ತೆಗದೆಕೊಂಡಿದ್ದರೆ ಈ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಡಿಸೆಂಬರ್‌ 23ರ ಬದಲು ಜನವರಿ 23ಕ್ಕೆ ಪಿಎಸ್‌ಐ ಮರು ಪರೀಕ್ಷೆ ನಡೆಸುತ್ತೇವೆ” ಎಂದು ಘೋಷಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಸರ್ಕಾರ ಒಪ್ಪದೆ ಜಾತಿಗಣತಿ ವರದಿಯ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ: ಜಯಪ್ರಕಾಶ್ ಹೆಗ್ಡೆ

"ರಾಜ್ಯದ 5.98 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆ ಮಾಡಿದ ಸಾಮಾಜಿಕ ಶೈಕ್ಷಣಿಕ ಜನಗಣತಿ...

ಅಲ್ಪಸಂಖ್ಯಾತರ ಮೇಲೆ ಆರೋಪ ಬಂದರೆ ಪ್ರಕರಣ ಮುಚ್ಚಿಹಾಕಲು ಸರ್ಕಾರದಿಂದ ನಿರ್ದೇಶನ: ಆರ್‌ ಅಶೋಕ್‌ ಆರೋಪ

ಅಲ್ಪಸಂಖ್ಯಾತರ ಮೇಲೆ ಆರೋಪ ಬಂದರೆ ಅದನ್ನು ಮುಚ್ಚಿಹಾಕಿ, ಬಹು ಸಂಖ್ಯಾತರ ಮೇಲೆ...

ದೇವರು-ಧರ್ಮದ ಹೆಸರಲ್ಲಿ ಮರುಳು ಮಾಡಿ ನಾವು ಅಧಿಕಾರ ನಡೆಸಲ್ಲ: ಸಿದ್ದರಾಮಯ್ಯ

ನಾವು ನಿಮ್ಮನ್ನು ದೇವರು-ಧರ್ಮದ ಹೆಸರಲ್ಲಿ ಭಾವನಾತ್ಮಕವಾಗಿ ಕೆರಳಿಸಿ ಅಧಿಕಾರ ನಡೆಸುವುದಿಲ್ಲ. ಅನ್ನ-ಆರೋಗ್ಯ-ಅಕ್ಷರ-ಸೂರು-ನೀರಿಗಾಗಿ...

ಲಾಲೂ ಪ್ರಸಾದ್ ಟೀಕೆಯನ್ನೇ ಅಸ್ತ್ರವನ್ನಾಗಿಸಿಕೊಂಡ ಬಿಜೆಪಿ: ‘ಮೋದಿ ಕಾ ಪರಿವಾರ್’ ಅಭಿಯಾನ!

ನಿನ್ನೆ ಪಾಟ್ನಾದಲ್ಲಿ ನಡೆದಿದ್ದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ರಾಷ್ಟ್ರೀಯ ಜನತಾ ದಳ...