ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಪದವೀಧರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸದಲ್ಲಿ ಚುನಾವಣೆ ಯಶಸ್ವಿಯಾಗಲು ಸಾಧ್ಯವೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ಈಶಾನ್ಯ ಕರ್ನಾಟಕ ಮತಕ್ಷೇತ್ರದ ಮತದಾರರ ವಿಶೇಷ ನೋಂದಣಿ ಅಭಿಯಾನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಈಶಾನ್ಯ ಪದವೀಧರ ಮತಕ್ಷೇತ್ರಕ್ಕೆ ಚುನಾವಣೆ ಸಿದ್ಧತೆ ಈಗಾಗಲೇ ಆರಂಭವಾಗಿದ್ದು, ಪದವೀಧರ ಮತದಾರರನ್ನು ಹೆಚ್ಚಾಗಿ ನೋಂದಣಿ ಮಾಡಿಸುವುದರ ಜೊತೆಗೆ ಎಲ್ಲರೂ ಚುನಾವಣೆಯಲ್ಲಿ ಭಾಗಿಯಾಗಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗಿದೆ” ಎಂದರು.
“ಎಲ್ಲಾ ಚುನಾವಣೆಗಿಂತ ಈ ಚುನಾವಣೆ ವಿಭಿನ್ನ, ಪದವೀಧರ ಮತದಾರರೇ ಇಲ್ಲಿ ಪ್ರಮುಖ ಪಾತ್ರ, ಆದ್ದರಿಂದ ನೋಂದಣಿ ಮಾಡಿಸದ ಹೊಸ ಪದವೀಧರನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವಂತೆ ತಿಳಿಸಿ ಅವರು ಎಲ್ಲಿ ಮತದಾನ ಮಾಡಬೇಕೆಂಬುವ ಬಗ್ಗೆ ಮಾಹಿತಿ ನೀಡಬೇಕು. ಪದವೀಧರ ಚುನಾವಣೆಗೆ ಸಂಬಂಧಿಸಿದಂತೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಚುನಾವಣೆ ಆಯೋಗ ಸೂಚಿಸಿದ ಮಾರ್ಗಸೂಚಿ ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು” ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಹಮಾಸ್ ನೆಪ ಮಾತ್ರವಷ್ಟೇ, ಪ್ಯಾಲೆಸ್ತೀನ್ ಇಲ್ಲವಾಗಿಸುವುದು ಇಸ್ರೇಲ್ ಗುರಿ: ಚಿಂತಕ ಶಿವ ಸುಂದರ್
ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಜಶೇಖರ ಹೊಕ್ರಾಣ , ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುರೇಶ ಉಗ್ಗಿ, ಬಿಎನ್ ವಾಲ್ಮಿಕಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
ವರದಿ : ಸಿಟಿಜನ್ ಜರ್ನಲಿಸ್ಟ್, ಹಫೀಜುಲ್ಲ