ಊರಲ್ಲಿ ಸಂಭ್ರಮವೋ ಸಂಭ್ರಮ, ಅದ್ದೂರಿ ಮೆರವಣಿಗೆ, ಇದು ಯಾವ ಸಿನಿಮಾ ಸ್ಟಾರ್‌ಗೆ ಸಿಕ್ಕ ಸ್ವಾಗತ ಅಲ್ಲ, ಯುದ್ಧಭೂಮಿಯಲ್ಲಿ 21 ವರ್ಷದಿಂದ ಸೇವೆ ಸಲ್ಲಿಸಿದ ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ ಸಿಕ್ಕಿತು.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜೀರ್ಗಾ(ಬಿ) ನಿವಾಸಿ ರವೀಂದ್ರ ಕೊಡಗೆ ಅವರು ಸಿಆರ್‌ಪಿಎಫ್ ಯೋಧನಾಗಿ ಕಳೆದ 21 ವರ್ಷದಿಂದ ಸೇನೆಯಲ್ಲಿ ಕೆಲಸ ಮಾಡಿ ತಮ್ಮ ಸ್ವಗ್ರಾಮಕ್ಕೆ ಬಂದಾಗ ಸ್ಥಳೀಯರು ಭವ್ಯ ಸ್ವಾಗತ ಕೋರಿ ವೀರ ಯೋಧನನ್ನು ಬರಮಾಡಿಕೊಂಡರು.
ಇಡೀ ಊರಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ನಿವೃತ್ತ ಯೋಧ ರವೀಂದ್ರ ಹಾಗೂ ಪತ್ನಿ ಅಶ್ವಿನಿ ಅವರನ್ನು ಧರಿ ಹನುಮಾನ ಕ್ಷೇತ್ರದಿಂದ ತೆರದ ವಾಹನದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸಂತಪೂರವರೆಗೆ ಕರೆ ತರಲಾಯಿತು. ವಿಶ್ವಗುರು ಬಸವಣ್ಣನವರ ವೃತ್ತದಲ್ಲಿ ಆಗಮಿಸಿದ ಯೋಧನಿಗೆ ಹೂ ಮಾಲೆ ಹಾಕಿ ಸ್ವಾಗತ ಕೋರಿದರು. ಬಳಿಕ ಅಲ್ಲಿಂದ ತೆರೆದ ಜೀಪ್‌ನಲ್ಲಿ ತವರೂರು ಜೀರ್ಗಾ(ಬಿ) ಗ್ರಾಮದವರೆಗೆ ಮೆರವಣಿಗೆ ಮೂಲಕ ಕರೆದೊಯ್ದರು.
ಗ್ರಾಮದ ಯುವಕರು, ಸುತ್ತಲಿನ ಗ್ರಾಮಸ್ಥರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು, ಜಯಘೋಷಗಳ ಮೂಲಕ ಬೈಕ್ ರ‍್ಯಾಲಿ ನಡೆಸಿದರು. ಬಳಿಕ ನಿವೃತ್ತ ಯೋಧ ಹುಟ್ಟೂರಿನಲ್ಲಿ ಕಾಲಿಡುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ, ಪುಷ್ಪ ಚೆಲ್ಲಿ ವೇದಿಕೆಗೆ ಕರೆತಂದರು. ಈ ವೇಳೆ ಯೋಧ ರವೀಂದ್ರ ಅವರು ಹೆತ್ತವರಿಗೆ ಸೆಲ್ಯೂಟ್ ಹೊಡೆದು, ತಲೆ ಮೇಲಿನ ಕ್ಯಾಪ್‌ನ್ನು ತೊಡಿಸಿ ಗೌರವ ಸಲ್ಲಿಸಿದರು. ಈ ಭಾವನಾತ್ಮಕ ಕ್ಷಣವನ್ನು ಕಂಡ ಎಲ್ಲರೂ ಮನಸೋತರು.

ನಿವೃತ್ತರಾದ ರವೀಂದ್ರ ಕೊಡಗೆ ಹಾಗೂ ಇತ್ತೀಚೆಗೆ ಭಾರತೀಯ ಸೇನೆಯಿಂದ ನಿವೃತ್ತಿಯಾದ ಅದೇ ಗ್ರಾಮದ ಮಹಾದೇವ ಕೋಟೆ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ನಿವೃತ್ತ ಯೋಧರು ಮತ್ತು ಕರ್ತವ್ಯ ನಿರತ ಸೈನಿಕರು, ಜತೆಗೆ ಸರ್ಕಾರಿ ಹುದ್ದೆಯಿಂದ ನಿವೃತ್ತರಾದ ಗ್ರಾಮದ ಹಿರಿಯರಿಗೆ, ಸಾಧಕರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಔರಾದ್ ತಾ.ಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿ, ʼಮನೆ, ಬಂಧು-ಬಳಗ ಮತ್ತು ಸಂಭ್ರಮ ತೊರೆದು ಗಡಿಯಲ್ಲಿ ದೇಶ ಕಾಯುವ ಯೋಧರ ತ್ಯಾಗ, ದೇಶಪ್ರೇಮ ಸದಾ ಸ್ಮರಣೀಯ. ಪ್ರತಿ ಕ್ಷಣ ಸಾವನ್ನು ಎದುರು ನೋಡುತ್ತಾ ದೇಶ ಕಾಯುವ ಕೆಲಸದಲ್ಲಿ ತೊಡಗಿರುವ ಕಾರಣಕ್ಕೆ ರಾಷ್ಟ್ರ ಸುರಕ್ಷಿತವಾಗಿದೆ. ಸೇವೆಯಿಂದ ನಿವೃತ್ತಿಯಾಗಿ ತಾಯ್ನಾಡಿಗೆ ಆಗಮಿಸಿದ ರವೀಂದ್ರ ಅವರನ್ನು ಹೃದಯಸ್ಪರ್ಷಿಯಾಗಿ ಬರಮಾಡಿಕೊಂಡಿದ್ದು ಹೆಮ್ಮೆಯ ವಿಷಯʼ ಎಂದರು.
ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿ ಮಾತನಾಡಿ, ʼಭಾರತವು ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ರೂಪಗೊಳ್ಳುವಲ್ಲಿ ಯೋಧರ ಪರಿಶ್ರಮವಿದೆ. ಯುವ ಜನರು ದುಶ್ಚಟಗಳ ದಾಸರಾಗದೆ ದೇಶ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಇಂತಹ ಯೋಧರು ಯುವ ಪೀಳಿಗೆಗೆ ಸ್ಪೂರ್ತಿಯಾಗಬೇಕು. ಈ ಗ್ರಾಮದಂತೆ ಎಲ್ಲ ಕಡೆ ಸಾಮರಸ್ಯದಿಂದ ಬದುಕಿದರೆ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆʼ ಎಂದು ಹೇಳಿದರು.

ನಿವೃತ್ತ ಯೋಧ ರವೀಂದ್ರ ಕೊಡಗೆ ಮಾತನಾಡಿ, ʼದೇಶದ ದೆಹಲಿ, ಜಮ್ಮು-ಕಾಶ್ಮೀರ್, ಬಿಹಾರ, ಹೈದ್ರಾಬಾದ್, ಬಾನಾಘಾಟ, ಛತ್ತಿಸಘಡ್, ಜಾರ್ಖಂಡ್‌ನಲ್ಲಿ ಕಾನಸ್ಟೇಬಲ್, ಹವಾಲ್ದಾರ್ ಆಗಿ ಕೆಲಸ ಮಾಡಿದ್ದು, ಕೊನೆಗೆ ಕ್ಲಿಷ್ಟ ಸೇವೆಯಾಗಿರುವ ಜಂಗಲ್ ಕೋಬ್ರಾ ಕಮಾಂಡೋ ಆಗಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತಿ ಪಡೆದಿದ್ದೇನೆʼ ಎಂದರು.
ʼಬಂಧು- ಬಳಗವನ್ನು ಬಿಟ್ಟು ಎರಡು ದಶಕಗಳ ಕಾಲ ದೇಶದ ಸೇವೆ ಮಾಡಿರುವುದು ಸಂತೃಪ್ತಿ ತಂದಿದೆ. ನಿವೃತ್ತಿಯಾದ ನನಗೆ ತಾವು ನೀಡಿದ ಗೌರವಕ್ಕೆ ಚಿರಋಣಿಯಾಗಿದ್ದೇನೆ. ನಾನೀಗ ಸ್ವಯಂ ನಿವೃತ್ತಿ ಪಡೆದಿದ್ದರೂ ದೇಶಕ್ಕಾಗಿ ಅಗತ್ಯ ಎನಿಸಿದರೆ ಯಾವುದೇ ಕ್ಷಣದಲ್ಲೂ ಸೇವೆ ಸಲ್ಲಿಸಲು ಸಿದ್ಧನಾಗಿದ್ದೇನೆʼ ಎಂದು ತಿಳಿಸಿದರು.

ಹೆಡಗಾಪುರ ಮಠದ ಕೇದಾರನಾಥ ಶಿವಾಚಾರ್ಯ ಮಾತನಾಡಿ, ʼದೇಶದ ರಕ್ಷಣೆಗಾಗಿ ಯೋಧನ ಹೆತ್ತವರು ಮತ್ತು ಪತ್ನಿಯ ತ್ಯಾಗ ದೊಡ್ಡದು. ನಮ್ಮ ನೆಮ್ಮದಿಯ ಬದುಕಿಗಾಗಿ ಯೋಧರು ಗಡಿಯಲ್ಲಿ ಹೋರಾಡುತ್ತಾರೆʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಈ ಹಳ್ಳಿಗಳಿಗೆ ಗ್ರಾಮ ಪಂಚಾಯಿತಿ ಕೇಂದ್ರ ಬಲು ದೂರ : ಸುತ್ತಿ ಬಳಸಿ ಬರುವುದೊಂದೇ ಮಾರ್ಗ
ಕಾರ್ಯಕ್ರಮದಲ್ಲಿ ಔರಾದ್ ಸಿಪಿಐ ರಘವೀರಸಿಂಗ್ ಠಾಕೂರ್ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯರಾದ ಸಂಗಪ್ಪ ದೇಗಲವಾಡೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಯೋಧರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಲದ್ದಿ, ಪಿಕೆಪಿಎಸ್ ಅಧ್ಯಕ್ಷ ಬಸಯ್ಯ ಸ್ವಾಮಿ, ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಸಂಜುಕುಮಾರ ಜುಮ್ಮಾ, ಪತ್ರಕರ್ತ ಶಿವಾನಂದ ಮೊಕ್ತೆದಾರ್, ವೀರನಾರಿ ಸುಮನ್ ಜಾಧವ್ ಸೇರಿದಂತೆ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.