ಕರ್ನಾಟಕದ ನೆಮ್ಮದಿಯ ನಾಳೆಗಳಿಗಾಗಿ ಬೇಕಿವೆ ಗ್ಯಾರಂಟಿಗಳು

Date:

Advertisements
ಐದು ಗ್ಯಾರಂಟಿಗಳನ್ನು ನೀಡಿಯೂ, ಜನಪರ ನೀತಿಗಳನ್ನು ಪಾಲಿಸಿಯೂ ರಾಜ್ಯದ ಆರ್ಥಿಕತೆಯನ್ನು ಹೇಗೆ ಕಾಪಾಡಿಕೊಳ್ಳಬಹುದು ಎನ್ನುವುದನ್ನು ಅತಿ ಹೆಚ್ಚು ಬಜೆಟ್ ಮಂಡನೆಯ ದಾಖಲೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ದೇಶಕ್ಕೆ ತೋರಿಸಿಕೊಡಬೇಕಿದೆ.

ಕರ್ನಾಟಕದಲ್ಲಿ ಒಂದು ರೀತಿಯ ಹೊಸ ಹುರುಪು ಕಾಣುತ್ತಿದೆ; ಕಾರಣ, ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು. ಚುನಾವಣೆಯ ಸಮಯದಲ್ಲಿ ಭರವಸೆ ಕೊಟ್ಟಿದ್ದಂತೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿಗಳನ್ನು ಈಡೇರಿಸಿದೆ.

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಜೂನ್ 11ರಿಂದ ಪ್ರಾರಂಭಿಸಲಾಗಿದೆ. ಯೋಜನೆ ಆರಂಭವಾದ ಮೊದಲ ದಿನ ಮಧ್ಯಾಹ್ನದ ನಂತರ 5.7 ಲಕ್ಷ ಮಹಿಳಾ ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸುವ ಮೂಲಕ ಅಪರೂಪದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಮಹಿಳೆಯರು ಬಸ್‌ಗಳಲ್ಲಿ ಓಡಾಡಲು ಆರಂಭಿಸಿದ್ದು, ಸಾರ್ವಜನಿಕ ಸಾರಿಗೆ ಬಲಪಡಿಸುವುದು ಸೇರಿದಂತೆ ಸರ್ಕಾರದ ಹಲವು ಉದ್ದೇಶಗಳು ಈ ಮೂಲಕ ಈಡೇರಿವೆ. ಕೆಲವು ಖಾಸಗಿ ಚಾನೆಲ್‌ಗಳು, ಸಂಘ ಪರಿವಾರದ ಮನಸ್ಸುಗಳು ಏನೇ ಬೊಬ್ಬೆ ಹೊಡೆದರೂ ಅದಕ್ಕೆ ಕಿಂಚಿತ್ ಸೊಪ್ಪು ಹಾಕದ ಮಹಿಳೆಯರು ಹೊಸ ಆತ್ಮವಿಶ್ವಾಸ ಮೈಗೂಡಿಸಿಕೊಂಡು ಮನೆ ಬಿಟ್ಟು ಹೊರಬರತೊಡಗಿದ್ದಾರೆ. ಸ್ತ್ರೀ ಸ್ವಾತಂತ್ರ್ಯ, ಸ್ತ್ರೀಯರ ದುಡಿಮೆ ಇತ್ಯಾದಿಗಳ ದೃಷ್ಟಿಯಿಂದಲೂ ಇದೊಂದು ಗಮನಾರ್ಹ ಹೆಜ್ಜೆ. ಈ ಒಂದು ಹೆಜ್ಜೆ ಅವರ ಜೀವನ ಪಯಣದಲ್ಲಿ ಮಹತ್ವದ್ದಾಗಿರಲಿದೆ.   

ಗೃಹಲಕ್ಷ್ಮಿ ಲಾಭ ಪಡೆಯಲು ಮುಂದಿನ ವಾರದಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಂಬುದೇ ಇರುವುದಿಲ್ಲ ಎಂದಿದ್ದಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್. ಇದು ಯೋಜನೆಯು ಪ್ರತಿಯೊಬ್ಬ ಅರ್ಹ ಮಹಿಳೆಗೆ ಸಿಗಬೇಕು ಎನ್ನುವ ಸರ್ಕಾರದ ನಿರ್ಧಾರದ ಫಲದಂತಿದೆ.

Advertisements

ಈ ಸುದ್ದಿ ಓದಿದ್ದೀರಾ: ಚುನಾವಣೆ ಹೊಸ್ತಿಲಲ್ಲಿ ಮಧ್ಯಪ್ರದೇಶ: ಸರ್ಕಾರದ ಮುಖ್ಯ ಕಚೇರಿಗೆ ಬೆಂಕಿ; ಭಯದಲ್ಲಿದೆಯಾ ಬಿಜೆಪಿ?

ಇನ್ನು ಅನ್ನಭಾಗ್ಯ ಯೋಜನೆಯಡಿ 10 ಕೇಜಿ ಅಕ್ಕಿ ಕೊಡಲು ಸಿದ್ದರಾಮಯ್ಯ ಸರ್ಕಾರ, ಸಿದ್ಧತೆ ಮಾಡಿಕೊಳ್ಳುತ್ತಿದೆ. ರಾಜ್ಯಕ್ಕೆ ಅಕ್ಕಿ ಕೊಡಲು ಮೊದಲು ಒಪ್ಪಿದ್ದ ಭಾರತೀಯ ಆಹಾರ ನಿಗಮವು ಕೇಂದ್ರ ಸರ್ಕಾರದ ಸೂಚನೆಗನುಗುಣವಾಗಿ ಇದೀಗ ನಿರಾಕರಿಸಿದೆ. ಕಾಂಗ್ರೆಸ್‌ಗೆ ಎಲ್ಲಿ ಉತ್ತಮ ಹೆಸರು ಬರುತ್ತದೋ ಎನ್ನುವ ಹೆದರಿಕೆಯಿಂದ ಜನರು ತಿನ್ನುವ ಅನ್ನದ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಆದರೆ, ರಾಜ್ಯ ಸರ್ಕಾರವು ಅಕ್ಕಿ ಪೂರೈಕೆಗಾಗಿ ತೆಲಂಗಾಣ ಮತ್ತಿತರ ರಾಜ್ಯಗಳ ಜೊತೆ ಮಾತುಕತೆ ನಡೆಸುತ್ತಿದ್ದು, ಹೇಗಾದರೂ ತನ್ನ ಭರವಸೆ ಈಡೇರಿಸಿಯೇ ತೀರುವುದಾಗಿ ಹೇಳುತ್ತಿದೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅಸಹಕಾರ ನಿರೀಕ್ಷಿತವೇ. ಕರ್ನಾಟಕಕ್ಕೆ ಮೋದಿಯ ಆಶೀರ್ವಾದ ಬೇಕು ಎಂದಿದ್ದರೆ ಬಿಜೆಪಿಗೆ ಮತ ಹಾಕಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಧಮ್ಕಿ ಹಾಕುವ ಶೈಲಿಯಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು.

ಹೀಗೆ ಹೇಳುವ ಬಿಜೆಪಿ ನಾಯಕರು ಅವರದ್ದೇ ಸರ್ಕಾರ ಇದ್ದಾಗ ಈ ರಾಜ್ಯಕ್ಕೆ ಏನು ಮಾಡಿದರು ಎಂದು ನೋಡಿದರೆ, ಅವರ ಆತ್ಮವಂಚನೆ ಬಯಲಾಗುತ್ತದೆ. ಡಬ್ಬಲ್ ಎಂಜಿನ್ ಸರ್ಕಾರದ ಬಗ್ಗೆ ಮಾತನಾಡುತ್ತಲೇ ಕರ್ನಾಟಕದ ಪಾಲಿನ ಹಣವನ್ನು ಉತ್ತರದ ರಾಜ್ಯಗಳಿಗೆ ಧಾರೆ ಎರೆದು ಕೊಟ್ಟದ್ದು ಇದೇ ಮೋದಿ ಸರ್ಕಾರ.

ಕರ್ನಾಟಕ ಭಾರತದಲ್ಲಿ ನಾಲ್ಕನೇ ಅತಿ ಶ್ರೀಮಂತ ರಾಜ್ಯ. ಆದರೆ, ತೆರಿಗೆ ವಸೂಲಿಯ ರಾಜ್ಯದ ಪಾಲನ್ನು ಕೇಂದ್ರ ಸರ್ಕಾರ ನ್ಯಾಯಯುತವಾಗಿ ನೀಡುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕತೆ ಕುಸಿದು ಹೋಗುತ್ತದೆ ಎಂದು ಹೇಳುತ್ತಿರುವ ಗೋಧಿ ಮೀಡಿಯಾದಿಂದ ಹಿಡಿದು ಪ್ರಧಾನಿ ಮೋದಿವರೆಗೂ, ಎಲ್ಲರಿಗೂ ಗೊತ್ತಿರುವ ಆದರೆ ಯಾರೂ ಒಪ್ಪಿಕೊಳ್ಳಲು ಮುಂದಾಗದ ಒಂದು ಸತ್ಯವೇನೆಂದರೆ, ಕೇಂದ್ರದಿಂದ ಬರಬೇಕಾದ ರಾಜ್ಯದ ತೆರಿಗೆ ಬಾಕಿ ಬಂದರೆ, ಗ್ಯಾರಂಟಿ ಯೋಜನಗಳನ್ನು ಸುಲಭವಾಗಿ ಜಾರಿ ಮಾಡಬಹುದು. ರಾಜ್ಯಗಳಿಗೆ ಕೇಂದ್ರವು ಶೇ.41ರಷ್ಟು ತೆರಿಗೆ ಸಂಪನ್ಮೂಲವನ್ನು ಹಂಚಿಕೆ ಮಾಡಬೇಕೆಂದು ಹೇಳಿದ್ದರೂ ಕೇಂದ್ರವು ಎಂದೂ ಅಷ್ಟು ಹಣವನ್ನು ಹಂಚಿಕೆ ಮಾಡಿಯೇ ಇಲ್ಲ. 2016-17 ಮತ್ತು 2019-20ರಲ್ಲಿ ಶೇ.35ರಷ್ಟು ಸಂಪನ್ಮೂಲ ಹಂಚಿಕೆ ಮಾಡಿದ್ದ ಕೇಂದ್ರವು ಕಳೆದ ಎರಡು ವರ್ಷಗಳಿಂದ ರಾಜ್ಯಕ್ಕೆ ನೀಡಿರುವುದು ಕೇವಲ ಶೇ.31ರಷ್ಟು ಸಂಪನ್ಮೂಲ ಮಾತ್ರ. ಡಬ್ಬಲ್ ಇಂಜಿನ್ ಸರ್ಕಾರ ಇದ್ದರೂ ಯಾಕೆ ಈ ಅನ್ಯಾಯ ಎಂಬ ಪ್ರಶ್ನೆಗೆ ಯಾರೂ ಉತ್ತರಿಸಲಿಲ್ಲ. ಇಷ್ಟೆಲ್ಲ ಇದ್ದರೂ ಕೇಂದ್ರ ಮತ್ತು ರಾಜ್ಯದ ಬಿಜೆಪಿ ನಾಯಕರು ಪದೇ ಪದೆ ಡಬ್ಬಲ್ ಇಂಜಿನ್ ಮಂತ್ರ ಪಠಿಸಿ ಜನರಿಗೆ ಮಂಕುಬೂದಿ ಎರಚಲು ಪ್ರಯತ್ನಿಸುವುದನ್ನು ಮಾತ್ರ ಮುಂದುವರೆಸಿದ್ದರು. ಕರ್ನಾಟಕದ ಮತದಾರರು ಅವರನ್ನು, ಅವರ ಸುಳ್ಳುಗಳನ್ನು ತಿರಸ್ಕರಿಸುವುದರ ಮೂಲಕ ಪ್ರಬುದ್ಧತೆ ಮೆರೆದರು.

ಸದ್ಯಕ್ಕೆ ಕಾಂಗ್ರೆಸ್ ಸರ್ಕಾರ ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿದ್ದ ಎಡವಟ್ಟುಗಳನ್ನು ಸರಿಪಡಿಸಿ ಶಾಲಾ ಮಕ್ಕಳಿಗೆ ಹೊಸ ಪಠ್ಯಪುಸ್ತಕ ನೀಡಲು ಮುಂದಾಗಿದೆ. ಬಹುತ್ವದ ಬದುಕಿನ ಅರಿವನ್ನು ಬಿತ್ತಲು ಶಾಲಾ ಮಟ್ಟದಲ್ಲಿಯೇ ಸಂವಿಧಾನದ ಪೀಠಿಕೆಯ ಓದು ಆರಂಭಿಸುವ ಬಗ್ಗೆಯೂ ಸರ್ಕಾರ ನಿರ್ಧರಿಸಿದೆ.  

ಈ ಸುದ್ದಿ ಓದಿದ್ದೀರಾ: ನೈತಿಕತೆಯೇ ಇಲ್ಲದ ರಾಜಕಾರಣದಲ್ಲಿ ’ಹೊಂದಾಣಿಕೆಯ’ ಒಣ ಚರ್ಚೆಯೂ, ಜೆ.ಎಚ್ ಪಟೇಲರ ಒಂದು ಪ್ರಸಂಗವೂ

ಇಂದಿರಾ ಕ್ಯಾಂಟೀನ್‌ಗಳನ್ನು ಉನ್ನತೀಕರಿಸುವುದರ ಜೊತೆಗೆ ಅವುಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿಯೂ ಸರ್ಕಾರ ಹೇಳಿದೆ. ಅನ್ನದಾತ ಸುಖೀಭವ ಎಂದು ಹೇಳಿದ್ದ ಜನರೇ ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್‌ನ ಅನುದಾನವನ್ನು ಕಡಿತಗೊಳಿಸಿದ್ದರು. ಬಾಯಲ್ಲಿ ಭಗವದ್ಗೀತೆ ಹೇಳಿದ ಸರ್ಕಾರ ಹಸಿದವರಿಗೆ ಅನ್ನ ಕೊಡಲು ನಿರಾಕರಿಸಿ ಬಡವರ ವಿರೋಧಿ ಎನ್ನಿಸಿಕೊಂಡಿತ್ತು.

ಇವುಗಳ ಜತೆಗೆ ಮತ್ತೊಂದು ಮಹತ್ವದ ಕೆಲಸ ಆಗಬೇಕಿದೆ. ಮೋದಿಯವರ ಹಾದಿಯಲ್ಲಿಯೇ ಸಾಗಿ ಕಾರ್ಪೊರೇಟ್ ಕುಳಗಳಿಗೆ, ಶ್ರೀಮಂತರಿಗೆ ಬಡ ಕೃಷಿಕರ ಜಮೀನುಗಳನ್ನು ಪರಭಾರೆ ಮಾಡಲು ಸಹಾಯಕವಾಗುವಂತೆ ರಾಜ್ಯ ಬಿಜೆಪಿ ಸರ್ಕಾರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿತ್ತು. ಅವನ್ನು ಹಿಂಪಡೆಯುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ.  

ಇವೆಲ್ಲವೂ ಆಗಲೇಬೇಕಿದ್ದ ಕಾರ್ಯಗಳು. ಕರ್ನಾಟಕದ ನೆಮ್ಮದಿಯ ನಾಳೆಗಳಿಗಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇವೆಲ್ಲವನ್ನೂ ದಕ್ಷತೆಯಿಂದ ಜಾರಿಗೆ ತರಬೇಕಿದೆ. ಇವೆಲ್ಲ ಗ್ಯಾರಂಟಿಗಳನ್ನು ನೀಡಿಯೂ, ಜನಪರ ನೀತಿಗಳನ್ನು ಪಾಲಿಸಿಯೂ ರಾಜ್ಯದ ಆರ್ಥಿಕತೆಯನ್ನು ಹೇಗೆ ಕಾಪಾಡಿಕೊಳ್ಳಬಹುದು ಎನ್ನುವುದನ್ನು ಅತಿ ಹೆಚ್ಚು ಬಜೆಟ್ ಮಂಡನೆಯ ದಾಖಲೆ ಹೊಂದಿರುವ ಸಿದ್ದರಾಮಯ್ಯ ಇಡೀ ದೇಶಕ್ಕೆ ತೋರಿಸಿಕೊಡಬೇಕಿದೆ.

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

Download Eedina App Android / iOS

X