ಗುಬ್ಬಿ ಪಟ್ಟಣದ ಬಾಬು ಜಗಜೀವನರಾಂ ನಗರ ಬಡಾವಣೆಯಲ್ಲಿ ನಿರ್ಮಾಣ ಆಗುತ್ತಿರುವ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಮುಸ್ಲಿಂ ಸಮಾಜ 50 ಸಾವಿರ ರೂ ದೇಣಿಗೆ ನೀಡಿ ಪರಸ್ಪರ ಸೌಹಾರ್ದತೆ ಹಾಗೂ ಧಾರ್ಮಿಕ ವಿಚಾರದಲ್ಲಿ ಜಾತ್ಯತೀತ ಮನೋಭಾವ ತೋರಿದ್ದಾರೆ.
ಪಟ್ಟಣದಲ್ಲಿ ಮುಸ್ಲಿಂ ಸಮಾಜ ಪರವಾಗಿ ಚೆಕ್ ವಿತರಣೆ ಮಾಡಿದ ಪಪಂ ಸದಸ್ಯ ಮಹಮ್ಮದ್ ಸಾದಿಕ್ ಮಾತನಾಡಿ ಗುಬ್ಬಿ ತಾಲ್ಲೂಕಿನಲ್ಲಿ ಎಂದೆಂದೂ ಕೋಮು ಸೌಹಾರ್ದ ವಾತಾವರಣ ಸೃಷ್ಟಿಯಾಗಿದೆ. ಧರ್ಮ ಬೇಧವಿಲ್ಲದೆ ಎಲ್ಲಾ ಹಬ್ಬಗಳನ್ನು ಆಚರಿಸುವ ನಮ್ಮಲ್ಲಿ ಮತ್ತಷ್ಟು ಬಾಂಧವ್ಯ ಗಟ್ಟಿಯಾಗಲು ಮುಸ್ಲಿಂ ಸಮಾಜದಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಮಿತಿಗೆ 50 ಸಾವಿರ ನಗದು ದೇಣಿಗೆಯನ್ನು ಚೆಕ್ ಮೂಲಕ ನೀಡಿದ್ದೇವೆ ಎಂದರು.
ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ ನಮ್ಮ ಬಡಾವಣೆಯಲ್ಲಿ ದುರ್ಗಾ ಪರಮೇಶ್ವರಿ ದೇವಸ್ಥಾನ ನಿರ್ಮಿಸಲು ಬಹಳ ವರ್ಷಗಳ ಶ್ರಮವಿದೆ. ನಮ್ಮ ಧಾರ್ಮಿಕ ವಿಚಾರದಲ್ಲಿ ಸಾಥ್ ನೀಡಿದ ಮುಸ್ಲಿಂ ಸಮಾಜ ತಮ್ಮಲ್ಲೇ ದೇಣಿಗೆ ಸಂಗ್ರಹ ಮಾಡಿ ನಮಗೆ ನೀಡಿ ದೇವರ ಕಾರ್ಯಕ್ಕೆ ಧರ್ಮ, ಜಾತಿ ಭೇದವಿಲ್ಲ ಎಂದು ರುಜುವಾತು ಮಾಡಿದ್ದಾರೆ. ಅವರ ಸೌಹಾರ್ದ ಭಾವನೆಗೆ ಬೆಲೆ ನೀಡಿ ಅವರ ದೇಣಿಗೆ ಹಣವನ್ನು ದೇವಾಲಯ ಕೆಲಸಕ್ಕೆ ಬಳಸಿ ಸಾರ್ಥಕಗೊಳಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಶೌಕತ್ ಆಲಿ, ಎಸ್.ಎಸ್ ಬಾಬು, ಮಂಜನ್ ಇತರರು ಇದ್ದರು.