ಕಳೆದೆರಡು ವರ್ಷದಿಂದ ಗುಬ್ಬಿ ಅಬಕಾರಿ ವೃತ್ತದಲ್ಲಿ ಕೆಲಸ ಮಾಡಿ ಜನ ಮನ್ನಣೆ ಗಳಿಸಿ ಅಬಕಾರಿ ಇಲಾಖೆಯ ಜವಾಬ್ದಾರಿಯನ್ನು ನಿಯಮಾನುಸಾರ ಜಾರಿ ಮಾಡಿ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿ ವರ್ಗಾವಣೆಗೊಂಡ ನಿರೀಕ್ಷಕರಾದ ವನಜಾಕ್ಷಿ ಅವರಿಗೆ ಅದ್ದೂರಿಯಾಗಿ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ನಡೆಸಲಾಯಿತು.
ಗುಬ್ಬಿ ಹೊರ ವಲಯದ ಗ್ರೀನ್ ವ್ಯೂ ರೆಸ್ಟೋರೆಂಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ತಾಲ್ಲೂಕಿನ ಎಲ್ಲಾ ಪರವಾನಗಿ ಮಧ್ಯ ಮಾರಾಟಗಾರರು, ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ವರ್ಗಾವಣೆಗೊಂಡ ವನಜಾಕ್ಷಿ ಅವರಿಗೆ ಅಭಿನಂದನಾರ್ಹ ಬೀಳ್ಕೊಡುಗೆ ನೀಡಿದರು.
ಅಬಕಾರಿ ಉಪ ಆಯುಕ್ತ ಭರತೇಶ್ ಮಾತನಾಡಿ ಸಾರ್ವಜನಿಕ ಕೆಲಸ ಮಾಡುವ ಸಮಯ ಅದರಲ್ಲೂ ಅಬಕಾರಿ ಇಲಾಖೆ ಜವಾಬ್ದಾರಿ ಸುಲಭದ ಕೆಲಸವಲ್ಲ. ಇಂತಹ ಸಮಯದಲ್ಲಿ ತಾಲ್ಲೂಕಿನಲ್ಲಿ ಅಬಕಾರಿ ನಿರೀಕ್ಷಕರಾಗಿ ಮಹಿಳಾ ಅಧಿಕಾರಿ ವನಜಾಕ್ಷಿ ಸೇವೆ ಜನ ಮನ್ನಣೆ ಗಳಿಸಿದೆ. ಸಿಬ್ಬಂದಿಗಳ ಜೊತೆ ಹಗಲಿರುಳು ಕೆಲಸ ಮಾಡಿದ್ದಾರೆ. ಅಕ್ರಮ ಮದ್ಯ ತಡೆಯುವಲ್ಲಿ ನಿರಂತರ ಶ್ರಮ ಪಟ್ಟಿದ್ದಾರೆ. ಕೆಳಗಿನ ಸಿಬ್ಬಂದಿಗಳನ್ನು ಹಿಡಿತಕ್ಕೆ ಪಡೆದು ಕೆಲಸ ಮಾಡಿಸುವುದು ಒಂದು ಕಲೆ. ಈ ಕರ್ತವ್ಯ ನಿಭಾಯಿಸಿದ ವನಜಾಕ್ಷಿ ಅವರಿಗೆ ಇಲಾಖೆಯಲ್ಲಿ ಉನ್ನತ ಸ್ಥಾನಮಾನ ದೊರೆಯಲಿ ಎಂದು ಆಶಿಸಿದರು.
ವರ್ಗಾವಣೆಗೊಂಡ ಅಬಕಾರಿ ನಿರೀಕ್ಷಕರಾದ ವನಜಾಕ್ಷಿ ಮಾತನಾಡಿ ತಾಲ್ಲೂಕಿನಲ್ಲಿ 28 ಲೆಸೆನ್ಸ್ ಮಧ್ಯದಂಗಡಿಗಳಿತ್ತು. ಈಗ 38 ಅಂಗಡಿಗಳಿವೆ. ಮದ್ಯ ಮಾರಾಟದ ಗುರಿ ತಲುಪುವ ಜೊತೆಗೆ ಅಕ್ರಮ ಮದ್ಯ ಮಾರಾಟ ತಡೆಯುವುದು ಕ್ಲಿಷ್ಟಕರ. ಎರಡನ್ನೂ ನಿಭಾಯಿಸಿದ ಸಿಬ್ಬಂದಿಗಳು ನನ್ನ ಜೊತೆ ಹಗಲಿರುಳು ದುಡಿದಿದ್ದಾರೆ. ಎಲ್ಲಾ ಸಿಬ್ಬಂದಿಗಳು ಅರಿತು ಕೆಲಸ ಮಾಡಿದ್ದಾರೆ. ಇಲಾಖೆಯ ಜವಾಬ್ದಾರಿ ಅರಿತು ಕೆಲಸ ಮಾಡುವ ಸಮಯದಲ್ಲಿ ನನ್ನಿಂದ ಯಾರಿಗಾದರೂ ಬೇಸರ ಆಗಿದ್ದಲ್ಲಿ ಕ್ಷಮೆ ಇರಲಿ ಎಂದು ಹೇಳಿ ಇಲಾಖೆಯ ನಿಯಮಾನುಸಾರ ಕೆಲಸ ಮಾಡಲು ಬಯಸುತ್ತೇನೆ ಯಾವುದೇ ಸ್ಥಳವಾದರೂ ನಮ್ಮ ಕರ್ತವ್ಯದಲ್ಲಿ ನಿಷ್ಠೆ ಇಟ್ಟುಕೊಳ್ಳೋಣ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡ ನಿರೀಕ್ಷಕರಾದ ವನಜಾಕ್ಷಿ ಅವರಿಗೆ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಅಬಕಾರಿ ಉಪ ಅಧೀಕ್ಷಕ ಸಂದೀಪ್, ನಿರೀಕ್ಷಕರಾದ ಶೇಖ್ ಇಮ್ರಾನ್, ಲಂಕ ಹನುಮಯ್ಯ, ದಿವ್ಯಶ್ರೀ, ಮದ್ಯ ಉದ್ಯಮಿಗಳಾದ ಚರಣ್, ಮಧುಗೌಡ ಇತರರು ಇದ್ದರು.