ಪ್ರತಿನಿತ್ಯ ಗುಬ್ಬಿ ಪಟ್ಟಣದ ಸ್ವಚ್ಚತಾ ಕಾಯಕ ನಡೆಸಿ ರಜೆ ಇಲ್ಲದೆ ದುಡಿಯುವ ಪೌರ ಕಾರ್ಮಿಕರ ಸೇವೆ ಗುರುತಿಸಿ ನಿವೇಶನ ಹಂಚಿಕೆ ಮಾಡಲು ಈಗಾಗಲೇ ಒಂದು ಎಕರೆ ಜಮೀನಿನಲ್ಲಿ 30 ನಿವೇಶನ ಸಿದ್ಧವಿದೆ. ಮುಂದಿನ ಸದಸ್ಯರ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಶೀಘ್ರ ನಿವೇಶನ ಹಂಚಿಕೆ ಮಾಡುವುದಾಗಿ ಶಾಸಕ ಎಸ್.ಆರ್.ಶ್ರೀನಿವಾಸ್ ಭರವಸೆ ನೀಡಿದರು.
ಗುಬ್ಬಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಸನ್ಮಾನಿಸಿ ಮಾತನಾಡಿದ ಅವರು 45 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸದ್ಯದಲ್ಲೇ 20 ಮಂದಿ ಹೊರ ಗುತ್ತಿಗೆ ಆಧಾರದ ಕಾರ್ಮಿಕರ ನೇಮಕ ಆಗಲಿದೆ. ಈ ಹಿನ್ನಲೆ ಹೊರ ಗುತ್ತಿಗೆ ಕಾರ್ಮಿಕರಿಗೂ ಸೇರಿದಂತೆ ಎಲ್ಲರಿಗೂ ನಿವೇಶನ ನೀಡಲು ಇನ್ನೂ ಎರಡು ಎಕರೆ ಜಮೀನು ಕಂದಾಯ ಇಲಾಖೆಗೆ ಬೇಡಿಕೆ ಇಟ್ಟಿದ್ದೇವೆ ಎಂದು ತಿಳಿಸಿದರು.
ಎಸ್ಸಿ ಎಸ್ಟಿ ಮೀಸಲು ಹಣವನ್ನು ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ದಲಿತ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಮಕ್ಕಳ ಉನ್ನತ ವ್ಯಾಸಂಗಕ್ಕೆ ಅನುವು ಮಾಡಲಾಗಿದೆ. ಇದೇ ಮಾದರಿಯಲ್ಲಿ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರ ಮಕ್ಕಳಿಗೂ ಉತ್ತಮ ಶಿಕ್ಷಣ ಒದಗಿಸಲು ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮ ರಚಿಸಲಾಗುವುದು ಎಂದ ಅವರು ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಒಂದು ಕೋಟಿ ರೂ ಬಳಕೆ ಮಾಡಲಾಗುತ್ತಿದೆ. ಈ ಕೆಲಸ ಮುಗಿದ ತಕ್ಷಣ ಕಾರ್ಮಿಕರ ಮೇಲಿನ ಒತ್ತಡ ಕಡಿಮೆ ಆಗಲಿದೆ. ಅಗತ್ಯ ಸಲಕರಣೆ, ಸಮವಸ್ತ್ರ ವ್ಯವಸ್ಥೆ ಮಾಡಿಸಿ ನಿತ್ಯ ಶ್ರಮ ಜೀವಿಗಳಾದ ಪೌರ ಕಾರ್ಮಿಕರಿಗೆ ಸರ್ಕಾರದಿಂದ ವಿಶೇಷ ಸವಲತ್ತು ತರುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಪಪಂ ಸದಸ್ಯ ಮಹಮದ್ ಸಾದಿಕ್ ಮಾತನಾಡಿ ವರ್ಷವಿಡೀ ದುಡಿಯುವ ಪೌರ ಕಾರ್ಮಿಕರ ಸೇವೆ ಗುರುತರ ಕೆಲಸವಾಗಿದೆ. ಚುನಾಯಿತ ಪ್ರತಿನಿಧಿಗಳು ಮತ್ತೊಂದು ಮುಖವಾಗಿ ಕೆಲಸ ಮಾಡುತ್ತಾ ತಮ್ಮ ಸೇವೆಯನ್ನು ಗೌರವಧನ ಪಡೆದು ಮಾಡುತ್ತಿದ್ದಾರೆ. ಪಟ್ಟಣ ಬೆಳೆದಂತೆ ಕಾರ್ಮಿಕರ ಸಂಖ್ಯೆ ಹೆಚ್ಚಳ ಆಗಬೇಕಿದೆ ಎಂದ ಅವರು ರಸ್ತೆ ವಿಭಜಕ ವಿಸ್ತರಣೆ ಮಾಡುವ ಜತೆ ಪಟ್ಟಣ ಬೆಳೆದಂತೆ ಕಾರ್ಮಿಕರ ಕೊರತೆ ಕಾಣುತ್ತಿದೆ. ಕೂಡಲೇ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಮುಖ್ಯಾಧಿಕಾರಿಗಳು ಮುಂದಾಗಬೇಕು. ಈಗಿರುವ ಸಿಬ್ಬಂದಿಗಳಿಗೆ ಇರುವ ಒತ್ತಡ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಪಟ್ಟಣದ ನಿವಾಸಿಗಳು ಬೆಳಿಗ್ಗೆ ರಸ್ತೆಗೆ ಬರುವ ಮುನ್ನವೇ ಸ್ವಚ್ಚತೆ ಮಾಡಿ ಆರೋಗ್ಯ ಕಾಪಾಡುವ ಕಾರ್ಮಿಕರ ಸೇವೆ ಅನನ್ಯವಾದದ್ದು. ವಾರ್ಡ್ ಸದಸ್ಯರಿಗೆ ಹೆಸರು ಗೌರವ ಸಿಗುವುದು ಸಹ ಕಾರ್ಮಿಕರ ಸೇವೆಯಿಂದ ಎಂಬುದು ಮರೆಯುವಂತಿಲ್ಲ. ಈ ನಿಟ್ಟಿನಲ್ಲಿ ಅವರದ್ದೇ ದಿನವಾದ ಪೌರ ಕಾರ್ಮಿಕರ ದಿನಾಚರಣೆ ಪ್ರತಿ ವರ್ಷ ಅರ್ಥಪೂರ್ಣವಾಗಿ ನಡೆಸಿದ್ದೇವೆ. ಉತ್ತಮ ಸೇವೆ ಗುರುತಿಸಿ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದ ಅವರು ಗುಬ್ಬಿ ಹೆದ್ದಾರಿಯ ವಿಭಜಕವನ್ನು ವಿಸ್ತರಿಸಿ ಎರಡು ರಸ್ತೆ ನಿರ್ಮಾಣಕ್ಕೆ ಶಾಸಕರು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಎಲ್ಲಾ ಕಾರ್ಮಿಕರಿಗೂ ಸನ್ಮಾನಿಸಿ ಗೌರವಿಸಲಾಯಿತು. ವಿಶೇಷ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಿಂದ ಪೌರ ಕಾರ್ಮಿಕರು ಮೆರವಣಿಗೆ ನಡೆಸಿದರು. ಮುಖ್ಯಾಧಿಕಾರಿಗಳ ಸಹಿತ ಎಲ್ಲಾ ಸಿಬ್ಬಂದಿಗಳು, ಪಪಂ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಕುಣಿದು ಕಾರ್ಮಿಕರ ಜತೆ ಹೆಜ್ಜೆ ಹಾಕಿ ಸಂತಸ ಹಂಚಿಕೊಂಡರು.
ವೇದಿಕೆಯಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಜಿ.ಸಿ.ಕೃಷ್ಣಮೂರ್ತಿ, ರೇಣುಕಾಪ್ರಸಾದ್, ಕುಮಾರ್, ಜಿ.ಸಿ.ಕೃಷ್ಣಮೂರ್ತಿ, ಶೌಕತ್ ಆಲಿ, ಮಹಾಲಕ್ಷ್ಮೀ, ಶ್ವೇತಾ, ನಾಮಿನಿ ಸದಸ್ಯರಾದ ಸುಮಾ, ಆನಂದ್, ಮುಖ್ಯಾಧಿಕಾರಿ ಮಂಜುಳಾದೇವಿ, ಆರೋಗ್ಯ ನಿರೀಕ್ಷಕಿ ವಿದ್ಯಾಶ್ರೀ ಇತರರು ಇದ್ದರು.
