ಶೋಷಣೆ ಮುಕ್ತ ಹಾಗೂ ಸಮಾನತೆಯ ಸಮಾಜ ನಿರ್ಮಾಣ ಮಾಡಿದ ಡಿ.ದೇವರಾಜ ಅರಸು ಅವರ ಶೈಕ್ಷಣಿಕ ಚಿಂತನೆ ಇಂದಿಗೂ ಅವಿಸ್ಮರಣೀಯ ನಿರ್ಣಯಗಳಾಗಿದ್ದವು ಎಂದು ತಹಶೀಲ್ದಾರ್ ಆರತಿ.ಬಿ ತಿಳಿಸಿದರು.
ಗುಬ್ಬಿ ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ರಾಜ್ಯದ 22 ಮುಖ್ಯಮಂತ್ರಿಗಳ ಪೈಕಿ ಅರಸು ಅವರಿಗೆ ಮಾತ್ರ ದಿನಾಚರಣೆ ಅವಕಾಶ ಕಲ್ಪಿಸಲಾಗಿದೆ. ಅಂದಿನ ಸಮಯದಲ್ಲಿ ದೀನ ದಲಿತರಿಗೆ, ಶೋಷಿತ ವರ್ಗಗಳಿಗೆ ಬೆನ್ನೆಲುಬಾಗಿ ನಿಂತು ಮುಂದಿನ ಭವಿಷ್ಯ ಕಟ್ಟಿಕೊಟ್ಟರು. ಅವರ ಆಡಳಿತಾವಧಿಯಲ್ಲಿ ಸಮಾಜ ಸುಧಾರಣಾ ಕ್ರಮಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣವಾಯಿತು. ಈ ಹಿನ್ನಲೆ ಜಯಂತಿ ಆಚರಣೆ ಸರ್ಕಾರಿ ಕಾರ್ಯಕ್ರಮವಾಗಿ ನಡೆಯುತ್ತಿದೆ ಎಂದರು.
ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿ ನಿರ್ಮಿಸಿದ ವಸತಿ ಶಾಲೆಗಳ ಫಲ ಇಂದು ತಿಳಿಯುತ್ತಿದೆ. ಬಡವರ ಮಕ್ಕಳು ಸಮಾಜದಲ್ಲಿ ಗಣ್ಯ ಸ್ಥಾನ ಪಡೆಯುವಲ್ಲಿ ಅರಸು ಅವರ ವಸತಿ ಶಾಲೆಗಳು ಕಾರಣವಾಗಿದೆ. ಅಹಿಂದ ವರ್ಗದ ಅಭಿವೃದ್ಧಿಗೆ ಹಲವು ನಿಗಮ ಮಂಡಳಿ ಸ್ಥಾಪಿಸಿ ಸಮಾಜದ ಮುಖ್ಯವಾಹಿನಿಗೆ ತಂದು ರಾಜಕೀಯ ಶಕ್ತಿ ಕೂಡ ತುಂಬಿದ್ದರು. ನಗರ ಪಟ್ಟಣ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದರ ಫಲವೇ ಇಂದು ಒಳಚರಂಡಿ ಯೋಜನೆ ಉತ್ತಮ ಯೋಜನೆಯಾಗಿದೆ. ಎಲ್ಲಾ ವರ್ಗವನ್ನು ಸಮಾನವಾಗಿ ಕಂಡು ಕೆಲ ಕಾಯಿದೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು. ಈ ಹಿನ್ನಲೆ ಹಿಂದುಳಿದ ವರ್ಗಗಳ ದೈವವಾಗಿ ಅರಸು ಅವರು ಮನದಲ್ಲಿದ್ದಾರೆ ಎಂದರು.
ಉಪನ್ಯಾಸಕ ಕೆ.ಲೋಕೇಶ್ ಮಾತನಾಡಿ 1972 ರಲ್ಲಿ ಹಿಂದುಳಿದ ವರ್ಗಗಳ ಆಯೋಗ ಸ್ಥಾಪಿಸಿ 1977 ರಲ್ಲಿ ಸಾಕಷ್ಟು ವಿರೋಧದ ನಡುವೆ ಹಿಂದುಳಿದ ವರ್ಗಗಳಿಗೆ ಶೇಕಡಾ 55 ರಷ್ಟು ಮೀಸಲಾತಿ ಜಾರಿಗೆ ತಂದರು. ಜೀತ ಪದ್ಧತಿ ನಿಷೇಧ ಶಾಸನ ಜಾರಿಗೆ ತಂದು ರಾಜ್ಯದ 45 ಸಾವಿರ ಮಂದಿಗೆ ಉತ್ತಮ ಬದುಕು ಕಟ್ಟಿಕೊಟ್ಟರು. ಈ ಜೊತೆ ಮಲ ಹೊರುವ ಪದ್ಧತಿ ನಿಷೇಧ, ಉಳುವವನೇ ಭೂಮಿಯ ಒಡೆಯ ಹೀಗೆ ಅನೇಕ ಕಾಯಿದೆಗಳು ಸಮಾನತೆಯ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿತು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ಕಲ್ಯಾಣಾಧಿಕಾರಿ ಎಚ್.ಎಸ್.ಪವಿತ್ರ ಮಾತನಾಡಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ದೇವರಾಜು ಅರಸು ಅವರ ಕೊಡುಗೆ ಅಪಾರ. ರಾಜ್ಯದ ಹಲವು ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ವಸತಿ ಶಾಲೆಗಳ ನಿರ್ಮಾತರಾಗಿ ಹಾಸ್ಟೆಲ್ ಮೂಲಕ ಬಂದ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಸಮಾಜದಲ್ಲಿ ಗಣ್ಯ ಸ್ಥಾನ ಒದಗಿಸಿದೆ. ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಶಿಕ್ಷಣ ಒದಗಿಸುವ ಪರಿಕಲ್ಪನೆ ಹೊಂದಿದ್ದ ಅರಸು ಅವರ ಜಯಂತಿ ಅರ್ಥಪೂರ್ಣವಾಗಿ ಆಚರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷೆ ಆಯಿಷಾ ತಾಸೀನ್, ಉಪಾಧ್ಯಕ್ಷೆ ಶ್ವೇತಾ, ಸದಸ್ಯ ಮಹಮದ್ ಸಾದಿಕ್, ಸವಿತಾ ಸಮಾಜ ತಾಲ್ಲೂಕು ಅಧ್ಯಕ್ಷ ಪಾಪಣ್ಣ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುಪ್ರಸಾದ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ವಾಲ್ಮೀಕಿ ಸಮಾಜದ ಮುಖಂಡ ನರಸಿಂಹಮೂರ್ತಿ, ರಾಜು ಕ್ಷತ್ರಿಯ ಸಮಾಜದ ಅಧ್ಯಕ್ಷ ಲಕ್ಷ್ಮೀಕಾಂತರಾಜ್ ಅರಸ್, ಉಪಾಧ್ಯಕ್ಷ ಜಿ.ಆರ್.ಶ್ರೀನಿವಾಸ್, ಪದಾಧಿಕಾರಿಗಳಾದ ಮಂಜುನಾಥ್ ಅರಸ್, ಪುರುಷೋತ್ತಮ್ ಅರಸ್, ಜಯರಾಮ್ ಅರಸ್ ಇತರರು ಇದ್ದರು.