ತೋಟದಮನೆಯ ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ ಎರಡು ವರ್ಷದ ಸೀಮೆ ಕರುವನ್ನು ಬಲಿ ಪಡೆದ ಘಟನೆ ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಕರೇಗೌಡನ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಶಿವಕುಮಾರ್ ಎಂಬ ರೈತರಿಗೆ ಸಂಬಂಧಿಸಿದ ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ ಕರುವಿನ ಕುತ್ತಿಗೆ, ಹೊಟ್ಟೆ ಬಗೆದು ಬಲಿ ಪಡೆಯುವ ಜೊತೆಗೆ ರೈತನ ಪಾಲಿಗೆ ನಷ್ಟ ತಂದಿದೆ. ಈಗಾಗಲೇ ಕಡಬ ಹೋಬಳಿ ಗ್ರಾಮಗಳ ಸುತ್ತಮುತ್ತಲೂ ಕಾಣಿಸಿಕೊಳ್ಳುವ ಚಿರತೆಗಳು ಈ ಭಾಗದ ರೈತರಲ್ಲಿ ಆತಂಕ ತಂದಿದೆ.

ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿಗಳು ತೋಟದ ಮನೆಯ ಸಮೀಪದಲ್ಲಿ ಚಿರತೆ ಸೆರೆಗೆ ಬೋನು ಅಳವಡಿಸಿದ್ದು ಒಂದೆಡೆಯಾದರೆ ಇಲ್ಲಿರುವ ಚಿರತೆ ಉಪಟಳ ತಪ್ಪಿಸಲು ಅರಣ್ಯ ಇಲಾಖೆ ಚುರುಕುಗೊಳ್ಳಬೇಕು. ಕಡಬ ಹಾಗೂ ಕಸಬ ಹೋಬಳಿಯಲ್ಲಿ ಚಿರತೆ ಉಪಟಳ ಹೆಚ್ಚಾಗಿದೆ. ಚಿರತೆ ಸೆರೆ ಹಿಡಿದು ಸ್ಥಳೀಯ ಅರಣ್ಯದಲ್ಲಿ ಬಿಡದೆ ದೂರದ ಅರಣ್ಯ ಪ್ರದೇಶಕ್ಕೆ ಸಾಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.