ಗುಬ್ಬಿ ತಾಲ್ಲೂಕಿನ ಬಹುತೇಕ ಗ್ರಾಮೀಣ ರಸ್ತೆಯಲ್ಲಿ ಬೆಳೆದು ನಿಂತ ಜಂಗಲ್ ಬೈಕ್ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಆತಂಕ ಮೂಡಿಸಿದೆ. ಏಕಕಾಲದಲ್ಲಿ ಎರಡು ವಾಹನ ಸಂಚಾರ ಕಷ್ಟವಾದ ಈ ಜಂಗಲ್ ಮಳೆಗಾಲದಲ್ಲಿ ಆರೇಳು ಅಡಿಗಳ ಎತ್ತರದ ಬೆಳೆದು ರಸ್ತೆಯ ಅಂಚಿನ ಎರಡು ಅಡಿ ಕಬಳಿಸಿದೆ. ಈ ಜಂಗಲ್ ತೆರವು ಕೂಡಲೇ ಮಾಡದಿದ್ದರೆ ಆಗುವ ಅಪಘಾತ, ಜೀವ ಹಾನಿಗೆ ಲೋಕೋಪಯೋಗಿ ಇಲಾಖೆ ಜವಾಬ್ದಾರಿ ಹೊರಬೇಕಿದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಗ್ರಾಮೀಣ ರಸ್ತೆಯಲ್ಲಿ ಬೆಳೆದ ಗಿಡಮರಗಳ ನಡುವೆ ರೈತರು ತಮ್ಮ ಜಾನುವಾರು ಕಟ್ಟುತ್ತಿದ್ದು ವಾಹನ ಸವಾರರಿಗೆ ಕಣ್ಣಿಗೆ ಕಾಣದ ದನಕರುಗಳು ವಾಹನ ಶಬ್ದಕ್ಕೆ ಏಕಾಏಕಿ ರಸ್ತೆಗೆ ಬಂದು ವಾಹನ ಅಪಘಾತಕ್ಕೀಡಾಗಿದೆ. ಬೈಕ್ ಸವಾರರು ಬಿದ್ದು ಮೂಳೆ ಮುರಿದುಕೊಂಡ ನಿದರ್ಶನ ಸಾಕಷ್ಟಿದೆ. ಕೆಲ ಗ್ರಾಮದಲ್ಲಿ ರಸ್ತೆ ಬದಿ ಮುಂಜಾನೆ ಮತ್ತು ಸಂಜೆ ವೇಳೆ ವಾಯುವಿಹಾರ ಮಾಡುವ ಸಾಕಷ್ಟು ಮಂದಿಗೆ ಜಂಗಲ್ ಕಿರಿಕಿರಿ ಉಂಟು ಮಾಡಿದೆ. ವಾಹನಗಳು ಬಂದರೆ ಪಾದಚಾರಿಗೆ ರಸ್ತೆಯೇ ಇಲ್ಲ. ಎಲ್ಲವೂ ಗಿಡ ಬಳ್ಳಿಗಳೇ ಆವರಿಸಿಕೊಂಡಿದೆ. ಈ ನಿತ್ಯ ಸಂಕಟವನ್ನು ಸ್ಥಳೀಯ ಗ್ರಾಮಸ್ಥರು ಹೇಳುತ್ತಾರೆ.

ಹೆಬ್ಬೂರು ರಸ್ತೆ, ಕಕ್ಕೇನಹಳ್ಳಿ ರಸ್ತೆ, ಸಿ.ಎಸ್.ಪುರ ರಸ್ತೆ, ಸೇರಿದಂತೆ ಚೇಳೂರು, ಹಾಗಲವಾಡಿ ಹೋಬಳಿಯ ಗ್ರಾಮೀಣ ರಸ್ತೆಗಳ ಜಂಗಲ್ ತೆರವು ಕಾರ್ಯಾಚರಣೆ ತುರ್ತು ನಡೆಯಬೇಕಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿದಾಗ ಒಂದು ತಿಂಗಳಲ್ಲಿ ಕೆಲಸ ಮಾಡುವ ಮಾತುಗಳಾಡಿದರು. ಆದರೆ ತಿಂಗಳಾದರೂ ಕೆಲಸ ಮಾಡುವ ಲಕ್ಷಣವೇ ಕಾಣುತ್ತಿಲ್ಲ ಎಂದು ದೂರಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ರಸ್ತೆಯ ಪಕ್ಕ ಜಂಗಲ್ ತೆರವಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಕೂಡಾ ಜವಾಬ್ದಾರಿ ವಹಿಸಬೇಕಿದೆ. ನಮ್ಮಿಂದ ಪಡೆಯುವ ತೆರಿಗೆ ಹಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಹಿನ್ನಲೆ ಜಂಗಲ್ ತೆರವು ಮಾಡಬೇಕು. ಗ್ರಾಮಠಾಣಾ ವ್ಯಾಪ್ತಿಯಲ್ಲಿ ಇಂದಿಗೂ ಜಂಗಲ್ ತೆಗೆಯದ ಹಿನ್ನಲೆ ಸೊಳ್ಳೆಗಳ ಕಾಟ ಉಪಟಳವಾಗಿದೆ. ಮಾರಕ ರೋಗಕ್ಕೆ ಈ ಜಂಗಲ್ ಕೂಡಾ ನೇರ ಕಾರಣವಾಗಿದೆ ಎಂದು ಆರೋಪಿಸಿದರು.
ಮಳೆಗಾಲದಲ್ಲಿ ರಸ್ತೆ ಬದಿ ಜಂಗಲ್ ಬೆಳೆದಿದೆ. ಪ್ರತಿ ವರ್ಷದಂತೆ ಮಳೆಗಾಲದ ಎರಡು ತಿಂಗಳ ಸಮಯದಲ್ಲಿ ಜಂಗಲ್ ತೆರವು ಮಾಡುತ್ತೇವೆ. ಅದೇ ರೀತಿ ಸರ್ಕಾರ ಅನುದಾನ ನೀಡಿದ್ದು ಗುತ್ತಿಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಹದಿನೈದು ದಿನದಲ್ಲಿ ಜಂಗಲ್ ತೆರವು ತಾಲ್ಲೂಕಿನ ರಸ್ತೆಗಳಲ್ಲಿ ನಡೆಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಇಇ ಯೋಗೀಶ್ ಹೇಳಿದರು.

8971963685