ಗುಬ್ಬಿ ತಾಲ್ಲೂಕಿನಲ್ಲಿ ಈಗಾಗಲೇ ಮಂಜೂರಾದ 75 ಶಾಲಾ ಕೊಠಡಿಗಳು, 95 ಅಂಗನವಾಡಿ ಕೇಂದ್ರ ಕಟ್ಟಡಗಳು ಹಾಗೂ ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡಗಳು ಶೀಘ್ರದಲ್ಲಿ ಜನರ ಬಳಕೆಗೆ ಸಿದ್ಧವಾಗಲಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಭರವಸೆ ನೀಡಿದರು.
ತಾಲ್ಲೂಕಿನ ಅಡಗೂರು, ಚಿಕ್ಕೋನಹಳ್ಳಿ ಪಾಳ್ಯ ಗ್ರಾಮದಲ್ಲಿ 2.60 ಕೋಟಿ ವ್ಯಯದ ರಸ್ತೆ ಅಭಿವೃದ್ಧಿ ಹಾಗೂ ಮಡೇನಹಳ್ಳಿ ಗ್ರಾಮದಲ್ಲಿ 4 ಕೋಟಿ ವೆಚ್ಚದ ಸರ್ಕಾರಿ ಆಸ್ಪತ್ರೆ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು 28 ಅಂಗನವಾಡಿ ಕಟ್ಟಡಗಳಿಗೆ ಸ್ವಂತ ಜಾಗವಿಲ್ಲದೆ ವಿಳಂಬವಾಗಿದೆ. ಶೀಘ್ರದಲ್ಲಿ ಈ ಕಟ್ಟಡಕ್ಕೂ ಸ್ಥಳ ಹುಡುಕಿ ಕೆಲಸ ಮಾಡಲಾಗುತ್ತದೆ. ಈ ಜೊತೆಗೆ ಎಚ್ ಎ ಎಲ್ ಘಟಕ ನೀಡುವ ಸಿಆರ್ ಎಫ್ ಫಂಡ್ ಪ್ರಸ್ತುತ ಸಾಲಿನಲ್ಲಿ ಅಧಿಕ ಹಣ ನೀಡಲಿದೆ ಎಂದರು.
ಏರ್ ಪೋರ್ಟ್ ನಿರ್ಮಾಣಕ್ಕೂ ಸೂಕ್ತ ಸ್ಥಳ ಪರಿಶೀಲನೆ ನಡೆದಿದೆ. ಜಿಲ್ಲಾ ಸಚಿವರು ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದಾರೆ. ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ನಿರ್ಮಾಣಕ್ಕೆ ಪಟ್ಟಣಕ್ಕೆ ಸಮೀಪದ ಸ್ಥಳ ಹುಡುಕಾಟ ನಡೆದಿದೆ. ಸುಮಾರು 5 ಎಕರೆ ಜಮೀನು ಅವಶ್ಯವಿದೆ. ಈಗಾಗಲೇ ಆಶ್ರಯ, ವಸತಿ ನಿಲಯಗಳು, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗೆ ಸ್ಥಳ ನೀಡಲಾಗಿದೆ. ಅಲ್ಲಲ್ಲಿ ಇರುವ ಸರ್ಕಾರಿ ಜಾಗ ಸರ್ಕಾರಿ ಉದ್ದೇಶಕ್ಕೆ ಮೀಸಲಿಟ್ಟು ಪಹಣಿ ದಾಖಲೆ ಮಾಡಲಾಗುತ್ತಿದೆ. ಸರ್ಕಾರ ಕೂಡಾ ಸರ್ಕಾರಿ ಜಮೀನು ಒತ್ತುವರಿ ನಡೆಯದಂತೆ ಅಗತ್ಯ ಕ್ರಮ ಕೈಗೊಂಡಿದೆ. ಈ ವೇಳೆ ಜಿ.ಹೊಸಹಳ್ಳಿ ಬಳಿ 10 ಎಕರೆ, ಮತ್ತಿಕೆರೆ ಬಳಿ 20 ಎಕರೆ ವಸತಿ ಶಾಲೆಗಳಿಗೆ ಜಾಗ ಮೀಸಲಿಡಲಾಗಿದೆ ಎಂದು ವಿವರಿಸಿದರು.
ಶಾಸಕ ಮುನಿರತ್ನ ಪ್ರಕರಣ ಪ್ರತಿಕ್ರಿಯೆ ನೀಡಿದ ಅವರು ತಪ್ಪು ಮಾಡದೆ ಇದ್ದರೆ ಯಾರೂ ಪೊಲೀಸ್ ದೂರು ನೀಡುವುದಿಲ್ಲ. ಅಧಿಕಾರ ಇದ್ದಾಗ ಒಬ್ಬರ ಮೇಲೆ ಮತ್ತೊಬ್ಬರ ಆರೋಪ ಕೇಸು ಎಂಬುದು ರಾಜಕಾರಣದಲ್ಲಿ ಮಾಮೂಲಿ ಎನಿಸಿದೆ ಎಂದರು. ಕಳ್ಳಿಪಾಳ್ಯದಿಂದ ಅಡಗೂರು ತಲುಪುವ ರಸ್ತೆ ಹಾಗೂ ಚಿಕ್ಕೋನಹಳ್ಳಿಪಾಳ್ಯ ನಡುವಲಪಾಳ್ಯ ರಸ್ತೆಗೆ 2.60 ಕೋಟಿ ನೀಡಲಾಗಿದೆ. ಬೇಡಿಕೆಯ ಈ ರಸ್ತೆ ಗುಣಮಟ್ಟದಲ್ಲಿ ಅಭಿವೃದ್ದಿಪಡಿಸಲು ಸೂಚಿಸಿದ್ದು, ಹೇಮಾವತಿ ನೀರು ತಾಲ್ಲೂಕಿನ ಬಹುತೇಕ ಕೆರೆಗಳಿಗೆ ಹರಿದು ತುಂಬಿದೆ. ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಂತರ್ಜಲ ನೀರು ನೀಡುವ ಅಜ್ಜಮ್ಮನ ಕೆರೆ ತುಂಬಿ ಕೋಡಿ ಬಿದ್ದ ಕಾರಣ ಬಾಗಿನ ಅರ್ಪಿಸಿ ಗಂಗಾಪೂಜೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಉಂಡೆ ರಾಮಣ್ಣ, ಮುಳುಕಟ್ಟಯ್ಯ ಯು.ರಾಜಣ್ಣ, ಬಸವರಾಜ್, ಸಿ.ಜಿ.ಲೋಕೇಶ್, ಪಪಂ ಸದಸ್ಯ ರೇಣುಕಪ್ರಸಾದ್, ಜಿಲ್ಲಾ ಆರೋಗ್ಯಾಧಿಕಾರಿ ಚಂದ್ರಶೇಖರ್, ತಾಲ್ಲೂಕು ಆರೋಗ್ಯಾಧಿಕಾರಿ ಬಿಂದುಮಾಧವ, ಕಟ್ಟಡ ಗುತ್ತಿಗೆ ಏಜೆನ್ಸಿಯ ಈಶ್ವರ್, ಕೋದಂಡರಾಮಯ್ಯ ಸೇರಿದಂತೆ ಜಿ.ಹೊಸಹಳ್ಳಿ ಮತ್ತು ಹೇರೂರು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.
