ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ತರವಾದದ್ದು ಎಂದು ಕಾಂಗ್ರೆಸ್ ಮುಖಂಡ ಲಕ್ಷ್ಮಿ ನಾರಾಯಣಪ್ಪ ತಿಳಿಸಿದರು.
ಗುಬ್ಬಿ ತಾಲೂಕಿನ ಕಡಬ ಹೋಬಳಿಯ ದಾಸರಕಲ್ಲಹಳ್ಳಿ ಗ್ರಾಮದಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಸ್ವಾಮಿ ವಿವೇಕಾನಂದ ವೃತ್ತ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಅರಳು ವರ್ಷಗಳಿಂದ ದಾಸರಕಲ್ಲಹಳ್ಳಿ ಗ್ರಾಮದ ಯುವಕರು ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಸಂಘ ಸ್ಥಾಪಿಸಿಕೊಂಡು ಅವರ ವಿಚಾರಧಾರೆಗಳನ್ನು ಯುವಕರಿಗೆ ತಿಳಿಸುತ್ತಾ ಬರುತ್ತಿದ್ದಾರೆ. ದಾಸರಕಲ್ಲಹಳ್ಳಿ ಗ್ರಾಮದ ಮುಖ್ಯ ರಸ್ತೆಗೆ ಸ್ವಾಮಿ ವಿವೇಕಾನಂದ ವೃತ್ತ ಎಂದು ನಾಮಕರಣ ಮಾಡಿರುವುದು ಶ್ಲಾಘನೀಯ. ಯುವಕರು ಸ್ವಾಮಿ ವಿವೇಕಾನಂದ ವಿಚಾರಧಾರೆ ಹಾಗೂ ಅಂಬೇಡ್ಕರ್ ವಿಚಾರಧಾರೆಗಳನ್ನು ಓದುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದ ಅವರು ಮುಂದಿನ ದಿನಗಳಲ್ಲಿ ಯುವಕರ ಕಾರ್ಯ ಚಟುವಟಿಕೆಗಳಿಗಾಗಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಕಟ್ಟಡ ನಿರ್ಮಿಸಿ ಕೊಡುವುದಾಗಿ ಭರವಸೆಯನ್ನು ನೀಡಿದರು.

ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಮಾತನಾಡಿ ಸಂಘ ರಾಜಕೀಯ ಹೊರತಾಗಿರಬೇಕು. ಎಲ್ಲರೂ ಸಾಮಾಜಿಕ ಬದ್ಧತೆ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯದರ್ಶಿ ಅಭಿಷೇಕ್ ಮಾತನಾಡಿ ಅಂಬೇಡ್ಕರ್ ಜಯಂತಿ ಹಾಗೂ ಸ್ವಾಮಿ ವಿವೇಕಾನಂದ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಾ ಬರುತ್ತಿದ್ದು ಅಂಬೇಡ್ಕರ್, ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಯುವ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಘ ಕಾರ್ಯ ಪ್ರವೃತ್ತವಾಗಿದೆ ಎಂದು ತಿಳಿಸಿದರು.
ಯುವ ಮುಖಂಡ ಅನಂತ ನಾರಾಯಣ್ ಮಾತನಾಡಿ ಈಗಾಗಲೆ ಸಂಘಟನೆ, ಯುವಕರ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ್ದು ಕ್ರೀಡಾ ಸ್ಫೂರ್ತಿ ಬೆಳಸುತ್ತ ಬಂದಿದೆ. ಗ್ರಾಮದಲ್ಲಿ ಸ್ಥಳಾವಕಾಶವಿದ್ದು ಜನಪ್ರತಿನಿಧಿಗಳು ಕ್ರೀಡಾಂಗಣ ನಿರ್ಮಾಣ ಮಾಡಿ ಕೊಡಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಸಂಘದ ಉಪಾದ್ಯಕ್ಷ ನಾರಾಯಣ್, ಖಜಾಂಚಿ ವಿಜಯ್ ಕುಮಾರ್,ಸದಸ್ಯರಾದ ನವೀನ್, ರಮೇಶ್, ಮಂಜುನಾಥ್, ಸಂತೋಷ್ ಡಿ ವಿ, ಯಶವಂತ, ನಯನ, ಶ್ರೀನಿವಾಸ, ಶಿವಕುಮಾರ್, ಆನಂದಮೂರ್ತಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.