ಯಾವುದೇ ಮೂಲ ಸೌಲಭ್ಯ ಹಾಗೂ ಭದ್ರತೆ ಇಲ್ಲದೆ ಸಾರ್ವಜನಿಕರ ಮಧ್ಯೆ ದುಡಿಯುವ ಗ್ರಾಮ ಆಡಳಿತ ಅಧಿಕಾರಿಗಳು ಒತ್ತಡದ ಕೆಲಸ ಮಾಡುತ್ತಿದ್ದಾರೆ. ಕಂದಾಯ ಇಲಾಖೆ ಜೊತೆಗೆ ಅನ್ಯ ಇಲಾಖೆಯ ಕೆಲಸ ಸಹ ಮಾಡುವ ನಮಗೆ ಸಿ ದರ್ಜೆ ಸಿಬ್ಬಂದಿಯಂತೆ ದುಡಿಸಿಕೊಳ್ಳಲಾಗಿದೆ. ಈ ಎಲ್ಲಾ ಸಮಸ್ಯೆಗೆ ಸೂಕ್ತ ಪರಿಹಾರ ಜೊತೆಗೆ ಅಗತ್ಯ ಸವಲತ್ತು ಒದಗಿಸಿ ನಮ್ಮ ಹಲವು ಬೇಡಿಕೆ ಕೂಡಲೇ ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕು ಆಡಳಿತ ಅಧಿಕಾರಿಗಳ ಸಂಘ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ದಿನವಿಡೀ ಮುಷ್ಕರ ನಡೆಸಿದರು.
ಬೆಳಿಗ್ಗೆ ಕಚೇರಿಯ ಆವರಣದಲ್ಲಿ ಒಗ್ಗೂಡಿದ ತಾಲ್ಲೂಕಿನ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಸಹಾಯಕರು ಇಂದಿನ ಕೆಲಸ ಕಾರ್ಯ ಸ್ಥಗಿತಗೊಳಿಸಿ ಕಪ್ಪು ಪಟ್ಟಿ ಧರಿಸಿ ಮುಷ್ಕರ ಆರಂಭಿಸಿ ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳನ್ನು ಬಿಡುವಿಲ್ಲದಂತೆ ದುಡಿಸಲಾಗುತ್ತಿದೆ. ಬೆಳಿಗ್ಗೆ ಆರಂಭವಾದರೆ ಕೆಲಸ ಮುಗಿಯುವ ಸಮಯ ನಿಗದಿಯಾಗಿಲ್ಲ. ಸರ್ಕಾರ ನಿಗದಿ ಮಾಡಿದ ಎಲ್ಲಾ ವೆಬ್ ಸೈಟ್, ಮೊಬೈಲ್ ತಂತ್ರಾಂಶ ಸೇರಿದಂತೆ ತಾಂತ್ರಿಕ ಹುದ್ದೆ ರೀತಿ ಬಳಸಿಕೊಳ್ಳಲಾಗುತ್ತಿದೆ. ಈ ಜೊತೆಗೆ ಅನ್ಯ ಇಲಾಖೆಯ ಕೆಲಸವನ್ನು ಸಹ ನಮ್ಮ ಮೇಲೆ ಪ್ರಯೋಗ ಮಾಡಿ ಒತ್ತಡದ ಜೀವನ ಸೃಷ್ಟಿಸಿದ್ದಾರೆ ಎಂದು ದೂರಿದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷೆ ಸುಮತಿ ಮಾತನಾಡಿ ಇ ಆಫೀಸ್, ಸಂಯೋಜನೆ, ಆಧಾರ್ ಸೀಡ್, ಲ್ಯಾಂಡ್ ಬೀಟ್, 1-5 ವೆಬ್, ಪವತಿ ಆಂದೋಲನ ಆಪ್ ಸೇರಿದಂತೆ ಅನೇಕ ತಾಂತ್ರಿಕ ಕೆಲಸ ಮಾಡುವ ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ಸಮೀಕ್ಷೆ, ಕೃಷಿ ಗಣತಿ, ಪಿಎಂ ಕಿಸಾನ್ ವೆಬ್ ಹೀಗೆ ಹಲವು ಅನ್ಯ ಇಲಾಖೆಯ ಕಾರ್ಯಕ್ರಮ ಸಹ ನಡೆಸುತ್ತಿದ್ದೇವೆ. ನಮ್ಮ ಈ ಕಾರ್ಯಕ್ಕೆ ತಾಂತ್ರಿಕ ಹುದ್ದೆ ಎಂದು ನಿಗದಿ ಮಾಡಿ ವೇತನ ಶ್ರೇಣಿ ಹೆಚ್ಚಳ ಮಾಡಬೇಕು. ಈ ಜೊತೆಗೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಪೀಠೋಪಕರಣಗಳು, ಗುಣಮಟ್ಟದ ಮೊಬೈಲ್, ಸಿಯುಜಿ ಸಿಮ್, ಡೇಟಾ, ಲ್ಯಾಪ್ ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಕಾರ್ಯದರ್ಶಿ ಅಭಿಷೇಕ್ ಮಾತನಾಡಿ ಖಾಲಿ ಇರುವ ಹುದ್ದೆಗೆ ಪದೋನ್ನತಿ ಮಾಡಿ ಅಂತರ್ ಜಿಲ್ಲಾ ಪತಿ ಪತ್ನಿ ವರ್ಗಾವಣೆಗೆ ಚಾಲನೆ ನೀಡಬೇಕು. ಆಹಾರ ಇಲಾಖೆಯ ಕೆಲಸ ಮಾಡುವ ಕಂದಾಯ ಇಲಾಖೆಯ ಸಿಬ್ಬಂದಿಯನ್ನು ಆಹಾರ ನಿರೀಕ್ಷಕರ ಹುದ್ದೆಗೆ ಪದೋನ್ನತಿ ಮಾಡುವ ಜತೆಗೆ ಸಾರ್ವಜನಿಕ ಕೆಲಸ ಮಾಡುವ ವೇಳೆ ಹಲವು ಅಪಾಯಕ್ಕೆ ತುತ್ತಾಗುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ದೈಹಿಕ ಹಲ್ಲೆ ನಡೆದ ನಿದರ್ಶನ ಸಾಕಷ್ಟಿದೆ. ಈ ಗುರುತರ ಜವಾಬ್ದಾರಿ ಕೆಲಸಕ್ಕೆ ಆಪತ್ತಿನ ಭತ್ಯೆ 3 ಸಾವಿರ ರೂಗಳನ್ನು ನೀಡಬೇಕು. ಪ್ರಯಾಣ ಭತ್ಯೆ 500 ರೂಗಳಿಂದ 3 ಸಾವಿರಕ್ಕೆ ಹೆಚ್ಚಳ ಮಾಡಬೇಕು. ಜಾತಿ, ವಂಶವೃಕ್ಷ ಸೇರಿದಂತೆ ಇತರೆ ಪ್ರಮಾಣಪತ್ರ ನೀಡುವ ಗ್ರಾಮ ಆಡಳಿತಾಧಿಕಾರಿ ಮೇಲೆ ಎಫ್ಐಆರ್ ದಾಖಲು ಮಾಡುತ್ತಿರುವ ಬಗ್ಗೆ ಕ್ರಮ ವಹಿಸಿ ಅರ್ಜಿದಾರರ ನೇರ ಹೊಣೆ ಮಾಡಿ ಪ್ರಕರಣ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.
ಈ ಮಧ್ಯೆ ನಲವತ್ತು ವರ್ಷಗಳಿಂದ ಕನಿಷ್ಠ ವೇತನದಲ್ಲಿ ಕೆಲಸ ಮಾಡುವ ಗ್ರಾಮ ಸಹಾಯಕರನ್ನು ಹಗಲಿರುಳು ದುಡಿಸಿಕೊಳ್ಳಲಾಗಿದೆ. ಬಿಡುವಿಲ್ಲದೆ ದುಡಿದರೂ ಖಾಯಂ ಮಾಡಲು ಸರ್ಕಾರ ಮನಸ್ಸು ಮಾಡಿಲ್ಲ. ನಮ್ಮ ಸೇವೆಗೆ ಮಾನ್ಯತೆ ಸಿಗಲಿ ಎಂದು ಗ್ರಾಮ ಸಹಾಯಕರ ಸಮೂಹ ಒತ್ತಾಯಿಸಿತು. ನಾಳೆ ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿ ಸಂಘದ ಉಪಾಧ್ಯಕ್ಷ ವಿನೋದ್, ಗೌರವಾಧ್ಯಕ್ಷ ಅಶ್ವಿನ್ ಕುಮಾರ್, ಪದಾಧಿಕಾರಿಗಳಾದ ಕುಮಾರ್, ಮೋಹನ್, ರಾಜಶೇಖರ್, ಶಿವಕುಮಾರ್, ಆನಂದ್, ಬಿಂದು, ಪುಟ್ಟರಾಜ, ಮೋಹನ್, ಮಾದೇವಿ, ಕವನ, ಬಸುವರಾಜ್, ದಯಾನಂದ್, ನಾಗಭೂಷಣ್ ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು ಭಾಗವಹಿಸಿದ್ದರು.