ಪ್ರತಿ ಮನೆಗೆ ನೀರು ಸರಬರಾಜು ಮಾಡುವ ಜಲ ಜೀವನ್ ಮಿಷನ್ ಯೋಜನೆ ಕೇಂದ್ರ ಸರ್ಕಾರದ ಕಾರ್ಯಕ್ರಮ ಎನ್ನಲಾಗಿದೆ. ಆದರೆ ವಾಸ್ತವದಲ್ಲಿ ರಾಜ್ಯ ಸರ್ಕಾರ, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಜನರ ವಂತಿಕೆ ಹಣ ಸೇರಿ ಕಾಮಗಾರಿ ಮಾಡಲಾಗುತ್ತಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಪ್ರತಿಕ್ರಿಯಿಸಿದರು.
ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ರೈತ ಸಂಜೀವಿನಿ ವಾಹನ ಚಾಲನೆ ಹಾಗೂ ರೈತರಿಗೆ ಕೃಷಿ ಯಂತ್ರೋಪಕರಣ ವಿತರಿಸಿ ಮಾತನಾಡಿದ ಅವರು ಜೆಜೆಎಂ ಯೋಜನೆ ಕೇಂದ್ರ ಸರ್ಕಾರದ ಕಾರ್ಯಕ್ರಮ ಮಾತ್ರ ನಡೆದಿದೆ ಎನ್ನುವ ತುರುವೇಕೆರೆ ಶಾಸಕರ ಮಾತಿಗೆ ಪ್ರತಿಕ್ರಿಯಿಸಿ ಶೇಕಡಾವಾರು ಎಲ್ಲಾ ಮೂಲದ ಅನುದಾನ ಬಳಕೆ ಮಾಡಿದ ಜಲ ಜೀವನ್ ಮಿಷನ್ ಯೋಜನೆ ರಾಜ್ಯ ಸರ್ಕಾರ ಕೂಡಾ ಅನುದಾನ ನೀಡಿದೆ ಎಂದರು.
ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಜೆಜೆಎಂ ಕಾಮಗಾರಿ ಮೊದಲ ಹಂತದಲ್ಲಿ ಕೆಲ ನ್ಯೂನ್ಯತೆ ಕಂಡಿದೆ. ಕಾಂಕ್ರೀಟ್ ರಸ್ತೆ ಕಟ್ ಮಾಡಿದ ನಂತರ ರಸ್ತೆ ದುರಸ್ಥಿ ಮಾಡಬೇಕಿದೆ. ಮೂರು ಅಡಿಗಳ ಆಳದಲ್ಲಿ ಪೈಪ್ ಲೈನ್ ಅಳವಡಿಸಬೇಕು. ಇವೆಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಗ್ರಾಮ ಪಂಚಾಯಿತಿಗೆ ಹತಾಂತರ ಮಾಡಿಕೊಳ್ಳಲು ಎಲ್ಲಾ ಪಿಡಿಓಗಳಿಗೆ ಸೂಚಿಸಿದ್ದೇನೆ. ಗುಣಮಟ್ಟ ಪರಿಶೀಲನೆ ಮಾಡಿಯೇ ಹಸ್ತಾಂತರ ಮಾಡಿಕೊಳ್ಳದಿದ್ದರೆ ಭ್ರಷ್ಟಾಚಾರಕ್ಕೆ ಪರೋಕ್ಷ ಸಹಕಾರ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದರು.
ಉದ್ಯೋಗ ಖಾತ್ರಿ ಯೋಜನೆ ಜಾಬ್ ಕಾರ್ಡ್ ದಾರರ ಮೂಲಕ ಕೆಲಸ ಮಡಿಸಬೇಕಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಸದಸ್ಯರೇ ಕಾಮಗಾರಿ ಮಾಡುತ್ತಿರುವುದು ಓಪನ್ ಸೀಕ್ರೆಟ್ ಆಗಿದೆ. ಪಿಡಿಓ ಕ್ರಮಬದ್ಧತೆ ಪರಿಶೀಲಿಸಿದಾಗ ಸದಸ್ಯರು ಮಧ್ಯೆ ಪ್ರವೇಶಿಸಿ ಇಲ್ಲಸಲ್ಲದ ಆರೋಪ ಮಾಡುವುದು ಎಲ್ಲಡೆ ಕಂಡಿದೆ. ನರೇಗಾ ಯೋಜನೆಯಲ್ಲಿ ಭ್ರಷ್ಟಚಾರ ಬಗ್ಗೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಶಾಸಕ ಜಯಚಂದ್ರ ಅವರು ಪ್ರಸ್ತಾಪ ಮಾಡಿದ್ದರು. ಸಿಇಓ ತನಿಖೆ ನಡೆಸಿದ್ದಾರೆ. ಈ ಯೋಜನೆಯ ಅಭಿವೃದ್ದಿ ಕೆಲಸ ಪೂರೈಸುವುದು ಕಷ್ಟಸಾಧ್ಯ ಎನಿಸಿದೆ ಎಂದ ಅವರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣ ವಿತರಿಸಲಾಯಿತು.
ತಾಪಂ ಇಓ ಶಿವಪ್ರಕಾಶ್, ಕೃಷಿ ಉಪ ನಿರ್ದೇಶಕ ಹುಲಿರಾಜ್, ಸಹಾಯಕ ನಿರ್ದೇಶಕ ಜಗನ್ನಾಥಗೌಡ, ಕೃಷಿ ಅಧಿಕಾರಿ ಪ್ರಕಾಶ್ ಇತರರು ಇದ್ದರು.
