ಯಾವ ಗ್ರಾಮಕ್ಕೆ ತೆರಳಿದರೂ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಬಗ್ಗೆ ದೂರುಗಳು ಬರುತ್ತಿವೆ. ಯಾರೇ ಆಗಿರಲಿ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಹೆಚ್ಚು ಕಾಮಗಾರಿ ವಹಿಸಿಕೊಂಡು ಸತೀಶ್, ರಕ್ಷಿತ್ ಎಂಬ ಗುತ್ತಿಗೆದಾರರ ಬಗ್ಗೆ ಇಂಜಿನಿಯರ್ ಪ್ರಸ್ತಾಪ ಮಾಡಿದಾಗ ಯಾರೇ ಇರಲಿ ಕೆಲಸ ಕಳಪೆ ಮಾಡಿದ್ದರೆ ಬ್ಲಾಕ್ ಲಿಸ್ಟ್ ಸೇರಿಸಬೇಕು ಹಾಗೆಯೇ ಬಿಲ್ ಮಾಡಬಾರದು ಎಂದು ತಾಕೀತು ಮಾಡಿದರು.
ಮನೆ ಮನೆಗೆ ನಳ ಸಂಪರ್ಕ ಕಾಮಗಾರಿ ಪೂರ್ಣ ಗೊಂಡ ಬಗ್ಗೆ ಚರ್ಚೆ ಮಾಡಿದ ಶಾಸಕರು ಇಂಜಿನಿಯರ್ ಮೇಲೆ ಹರಿಹಾಯ್ದರು. ಬೆಳಿಗ್ಗೆ ಎದ್ದರೆ ನಿಮ್ಮಗಳ ಮೇಲೆ ದೂರು ಮೊಬೈಲ್ ಕರೆಯಲ್ಲಿ ಬರುತ್ತಿವೆ. ಮೊದಲ ಹಂತದಲ್ಲಿ ಸಾಕಷ್ಟು ಕಳಪೆ ದೂರು ಕೇಳಿ ಬಂದಿತ್ತು. ಎರಡನೇ ಮತ್ತು ಮೂರನೇ ಹಂತದಲ್ಲಿ 278 ಕಾಮಗಾರಿ ನಡೆದಿದೆ. 13 ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡಿರುವ ಮಾಹಿತಿ ಇದೆ. ಆದರೆ ಕಾಮಗಾರಿ ಬಗ್ಗೆ ಇರುವ ದೂರು ಸರಿಪಡಿಸಿ ಹಸ್ತಾಂತರ ಮಾಡಬೇಕು. ಈ ಬಗ್ಗೆ ತಾಪಂ ಇಓ ಸ್ಥಳ ಪರಿಶೀಲಿಸಿ ನಿರ್ಧರಿಸಬೇಕು ಎಂದು ಸೂಚಿಸಿದರು.
ಪಂಚಾಯತ್ ರಾಜ್ ಕುಡಿಯುವ ನೀರು ಪೂರೈಕೆ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಅಂತಿಮ ನಿರ್ಧಾರ ಮಾಡಲಾಗುವುದು. ಕಳಪೆ ದೂರು ಬರುವುದು ಗಮನಿಸಿದರೆ ಎಲ್ಲೂ ಕೂತು ಎಸ್ಟಿಮೇಟ್ ರೆಡಿ ಮಾಡುತ್ತೀರಿ ಅಂತ ಅನಿಸುತ್ತೆ ಎಂದು ಕಿಡಿಕಾರಿದ ಶಾಸಕರು 43 ಲಕ್ಷ ರೂಗಳ ದುರಸ್ಥಿ ಕಾರ್ಯದ ಕ್ರಿಯಾ ಯೋಜನೆ ತಯಾರಿಸಿದ. ಇಂಜಿನಿಯರ್ ಗಳು ರಸ್ತೆಗಳನ್ನು ಪೂರ್ಣ ಗೊಳಿಸಲು ಮೀನಾ ಮೇಷ ಎಣಿಸುತ್ತೀರಿ. ಈ ಜೊತೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಅಭಿವೃದ್ದಿ ಕಾಮಗಾರಿ ಗುದ್ದಲಿಪೂಜೆ ಮಾಡಿ ಕೆಲಸ ಮಾಡಲು ವಿಳಂಬ ಅನುಸರಿಸಿರುವುದು ಸಾರ್ವಜನಿಕರಲ್ಲಿ ಬೇರೆ ಆಲೋಚನೆಗೆ ಅವಕಾಶ ಆಗುತ್ತದೆ. ನಮ್ಮಗಳನ್ನು ಜನರು ನಿಂದಿಸುವ ಮುನ್ನ ಕೆಲಸ ಆರಂಭಿಸಿ ಗುಣಮಟ್ಟದ ರಸ್ತೆ ರೆಡಿ ಮಾಡಿ ಎಂದು ತಾಕೀತು ಮಾಡಿದರು.
ದೊಡ್ಡಗುಣಿ ಶಾಲೆಗೆ ಬಂದ 65 ಲಕ್ಷ ರೂಗಳನ್ನು ವಾಪಸ್ ಸರ್ಕಾರಕ್ಕೆ ಬರೆದ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತೊಂದು ಇಲಾಖೆ ಮೂಲಕ ಕ್ರಿಯಾ ಯೋಜನೆ ಸಿದ್ಧಪಡಿಸಿ ಶಾಲೆ ಅಭಿವೃದ್ದಿ ಮಾಡಬೇಕಿತ್ತು ಎಂದು ತಿಳಿಸಿದ ಅವರು ಗಣಿಬಾಧಿತ ಪ್ರದೇಶಕ್ಕೆ ಇರುವ ಮೀಸಲು ಹಣದ ಕ್ರಿಯಾ ಯೋಜನೆ ಸಿದ್ಧವಾಗಿ ಆರು ವರ್ಷ ಕಳೆದರೂ ಕೆಲಸ ನಡೆದಿಲ್ಲ. ಶಾಲೆ ಕಟ್ಟಡ, ಸರ್ಕಾರಿ ಆಸ್ಪತ್ರೆ, ಬಾಧಿತ ಹಳ್ಳಿಗಳಲ್ಲಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಹಣ ಬಿಡುಗಡೆ ಆಗುತ್ತಿಲ್ಲ. ಅಧಿಕಾರಿಗಳು ಕೆಲಸಗಳ ಕಡತವನ್ನು ಫಾಲೋಪ್ ಮಾಡಬೇಕು ಎಂದು ಸೂಚನೆ ನೀಡಿ ಆರೋಗ್ಯ ಇಲಾಖೆ ಸಮಸ್ಯೆ ಆಲಿಸಿ 68 ಡೆಂಗ್ಯೂ ಪ್ರಕರಣಗಳು, 870 ಮಂದಿಗೆ ನಾಯಿ ಕಡಿತ ಪ್ರಕರಣ ಬಗ್ಗೆ ಮಾಹಿತಿ ಪಡೆದರು. ಗುಬ್ಬಿಯಲ್ಲಿ ಎರಡು ಡಯಾಲಿಸಿಸ್ ಯಂತ್ರಗಳಿವೆ. ಮತ್ತೊಂದು ಅವಶ್ಯ ಯಂತ್ರ ಅಳವಡಿಸಲು ಸೂಚಿಸಿ ಮೂವರು ವೈದ್ಯರ ನೇಮಕಕ್ಕೆ ಅಧಿಕಾರಿಗಳ ಬಳಿ ಚರ್ಚಿಸುವ ಬಗ್ಗೆ ತಿಳಿಸಿದರು.
ಸಭೆಯಲ್ಲಿ ತಾಪಂ ಇಓ ಶಿವಪ್ರಕಾಶ್, ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ವರದಿ – ಎಸ್. ಕೆ. ರಾಘವೇಂದ್ರ