ಕೃಷಿ ಕ್ಷೇತ್ರ ಸದೃಢಗೊಳಿಸಲು ನಬಾರ್ಡ್ ಬ್ಯಾಂಕ್ ಸ್ಥಾಪನೆ ಮಾಡಲಾಗಿತ್ತು. ಆದರೆ ಈಚೆಗೆ ಕೇಂದ್ರ ಸರ್ಕಾರ ನಬಾರ್ಡ್ ಬ್ಯಾಂಕ್ ಗೆ ನೀಡುವ ಅನುದಾನದಲ್ಲಿ ಶೇಕಡಾ 58 ರಷ್ಟು ಕಡಿತ ಮಾಡಿದ ಹಿನ್ನಲೆ ರೈತರಿಗೆ ಅನಾನುಕೂಲವಾಗಿದೆ. ಕೂಡಲೇ ರೈತರ ಕೃಷಿ ಕ್ಷೇತ್ರ ನಾಶ ಮಾಡುವ ಹುನ್ನಾರಕ್ಕೆ ತೆರೆ ಎಳೆಯಲು ಕೇಂದ್ರ ಸರ್ಕಾರದ ಗಮನ ಸೆಳೆಯಲು ಸಾವಿರಾರು ರೈತರು ಇದೇ ತಿಂಗಳ 29 ರಂದು ಬೆಂಗಳೂರಿನ ರಿಸರ್ವ್ ಬ್ಯಾಂಕ್ ಮುಂದೆ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಿಂದ ಸಾಲದ ಮೊತ್ತ ಕಡಿತ ಮಾಡುತ್ತಾ ಬಂದಿದೆ. ಸಹಕಾರಿ ಸಂಘಗಳ ಮೂಲಕ ಕೊಡುವ ಸಾಲ ಸೌಲಭ್ಯ ಸಿಗದೆ ರೈತರು ವಾಣಿಜ್ಯ ಬ್ಯಾಂಕ್ ಮುಂದೆ ಹೆಚ್ಚಿನ ಬಡ್ಡಿಗೆ ಸರದಿಯಲ್ಲಿ ಕಾದು ಕುಳಿತಿದ್ದಾರೆ. ಇಂತಹ ದುಸ್ಥಿತಿಗೆ ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿ ನೇರ ಕಾರಣ. ಹಂತವಾಗಿ ಕಾರ್ಪೊರೇಟ್ ಕಂಪೆನಿಗೆ ಕೃಷಿ ಕ್ಷೇತ್ರ ಮಾರುವ ಸಂಕಷ್ಟ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶೂನ್ಯ ಬಡ್ಡಿ ದರ ಸಾಲ ನೀಡುವ ನಬಾರ್ಡ್ ಬ್ಯಾಂಕ್ ರೈತರಿಗೆ ಕೃಷಿ ಚಟುವಟಿಕೆಗೆ ಹತ್ತಿರವಾಗಿತ್ತು. ಅನುದಾನ ಕಡಿತದಿಂದ ವಾಣಿಜ್ಯ ಬ್ಯಾಂಕ್ ಜೊತೆಗೆ ಮೈಕ್ರೋ ಫೈನಾನ್ಸ್ ಬಳಿ ಸಾಲ ಪಡೆದ ರೈತ ಕುಟುಂಬ ಬೀದಿಗೆ ಬಂದಿದೆ. ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ರೈತರು ಸಾಲದ ಶೂಲಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೇಕಡಾ 20 ರಿಂದ 25 ರವರೆಗೆ ಬಡ್ಡಿ ವಿಧಿಸುವ ಮೈಕ್ರೋ ಫೈನಾನ್ಸ್ ಗೊಂಡಾ ವರ್ತನೆಯಲ್ಲಿ ಸಾಲ ವಸೂಲಿ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಬೇಕು ಎಂದು ಆಗ್ರಹಿಸಿದ ಅವರು ರೈತರ ನಿರಂತರ ಹೋರಾಟಕ್ಕೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಯಂತೆ ಬೇಡಿಕೆ ಈಡೇರಿಸಬೇಕು. ಸಾಲ ಮನ್ನಾ, ವಿದ್ಯುತ್ ಮೀಟರ್ ಅಳವಡಿಕೆ ರದ್ದು, ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ನಬಾರ್ಡ್ ಉಳಿವು ರೈತರ ಉಳಿವು ಹಾಗೂ ಸಹಕಾರಿ ಸಂಘಗಳ ಉಳಿವು ಎಂಬ ಅಂಶ ಕೇಂದ್ರ ಸರ್ಕಾರಕ್ಕೆ ತಿಳಿಸಬೇಕಿದೆ. ಕಳೆದ ವರ್ಷ ನಬಾರ್ಡ್ ರಾಜ್ಯಕ್ಕೆ 5600 ಕೋಟಿ ರೂಗಳನ್ನು ನೀಡಿತ್ತು. ಈ ಬಾರಿ 2340 ಕೋಟಿ ರೂಗಳನ್ನು ನೀಡಿದೆ. ಇದರಿಂದ ಶೂನ್ಯ ಬಡ್ಡಿಯ 5 ಲಕ್ಷ ಸಾಲಕ್ಕೆ ಕುತ್ತು ಬಂದಿದೆ. ಇದರಿಂದ ರಾಜ್ಯದ 30 ಲಕ್ಷ ರೈತರಿಗೆ ಅನ್ಯಾಯ ಆಗಲಿದೆ. ಸಾಲದ ಸುಳಿಗೆ ಸಿಲುಕಿ ರೈತರ ಸರಣಿ ಆತ್ಮಹತ್ಯೆ ನಡೆಯಲಿದೆ. ಈ ಎಲ್ಲಾ ಅಂಶಗಳನ್ನು ಒಳಗೊಂಡ ಪ್ರತಿಭಟನೆ ರಿಸರ್ವ್ ಬ್ಯಾಂಕ್ ಮುಂದೆ ಸಾವಿರಾರು ರೈತರು ನಡೆಸಲಿದ್ದಾರೆ. ಗುಬ್ಬಿ ತಾಲ್ಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ಹಕ್ಕು ಪ್ರತಿಪಾದಿಸೋಣ ಎಂದು ಕರೆ ನೀಡಿದರು.
ಈ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಯುವ ಘಕಟದ ಶಿವಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಸಿ.ಟಿ.ಕುಮಾರ್, ಸತ್ತಿಗಪ್ಪ, ಕುಮಾರಸ್ವಾಮಿ, ಯತೀಶ್ ಇತರರು ಇದ್ದರು.
