ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯರಿಗೆ ಒಳ್ಳೆಯ ಸಮಯವೇ ಇಲ್ಲವಾಗಿದೆ. ವಸತಿ ಯೋಜನೆಯಲ್ಲಿ ಒಂದೂ ಮನೆಯು ಬಂದಿಲ್ಲ. ಜನರು ಗ್ರಾಮ ಪಂಚಾಯಿತಿ ಸದಸ್ಯರನ್ನು ಉಗಿಯುತ್ತಿದ್ದಾರೆ ಎಂದು ಶಾಸಕ ಎಸ್. ಆರ್. ಶ್ರೀನಿವಾಸ್ ಹೇಳಿದರು.
ಗುಬ್ಬಿ ಪಟ್ಟಣದ ಎಸ್ ಸಿಎಸ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಮನೆಗಳನ್ನು ನಿಲ್ಲಿಸಿ ತಾಂತ್ರಿಕ ಸಮಸ್ಯೆ ಬಗ್ಗೆ ಹೇಳಿದ್ದರು. ನಮ್ಮ ಸರ್ಕಾರವು ಇನ್ನೂ ಮನೆಗಳ ಕಡೆ ಗಮನ ಕೊಟ್ಟಿಲ್ಲ. ಈ ವರ್ಷದಲ್ಲಿ ವಸತಿ ಮಂಜೂರು ಆಗಬಹುದು ಎಂದ ಅವರು ಅನುದಾನಗಳ ಕಾಯುವ ಬದಲು ನರೇಗಾ ಯೋಜನೆ ಅನುಷ್ಠಾನ ಮಾಡಲು ಸದಸ್ಯರು ಒಗ್ಗೂಡಿ ಕೆಲಸ ಮಾಡಬೇಕು ಎಂದರು.
ಈಗಾಗಲೇ ಕೆಲಸ ಮಾಡಿ ಬಿಲ್ ಪಡೆಯಲಾಗದ ದುಸ್ಥಿತಿ ಬಗ್ಗೆ ಸಹ ಸದಸ್ಯರು ಹೇಳುತ್ತಾರೆ. ಯೋಜನೆಯಲ್ಲಿ ನಿಯಮಗಳ ಬಗ್ಗೆ ಮಾಹಿತಿ ಪಡೆದು ಕೆಲಸ ಮಾಡಬೇಕಿದೆ. ನರೇಗಾ ಕೆಲಸ ಮಾಡುವುದು ಸುಲಭದ ಕೆಲಸವಲ್ಲ. ಜಾಬ್ ಕಾರ್ಡ್ ದಾರರನ್ನು ಹೊಂಚಿ ಕೆಲಸ ಮಾಡುವುದು ಕಷ್ಟ ಸಾಧ್ಯ ಎಂದ ಅವರು ತರಬೇತಿ ಪಡೆದು ನಿಯಮಾನುಸಾರ ಕೆಲಸ ಮಾಡಲು ಸದಸ್ಯರು ಮುಂದಾಗಬೇಕು. ಆದರೆ ಕೆಲ ಸದಸ್ಯರು ಪಂಚಾಯಿತಿ ವ್ಯವಸ್ಥೆಯನ್ನೇ ಮುಷ್ಟಿಯಲ್ಲಿ ಹಿಡಿದು ಕೆಲಸ ಮಾಡುವವರು ಇದ್ದಾರೆ. ಇನ್ನೂ ಕೆಲವರು ಬಿಲ್ ಪಡೆಯುವ ಕಲೆಯನ್ನು ಅರಿತಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿ ಅಬ್ದುಲ್ ನಜೀರ್ ಸಾಬ್ ಅವರ ಕನಸು ಪಂಚಾಯತ್ ರಾಜ್ ವ್ಯವಸ್ಥೆ ಹಳ್ಳಿಗಾಡಿನ ಜನರಿಗೆ ದೊಡ್ಡ ಕೊಡುಗೆ ಎಂದರು.
ಗ್ರಾಮೀಣಾಭಿವೃದ್ಧಿಗೆ ಸಹಕಾರಿಯಾಗಲು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಉತ್ತಮವೆನಿಸಿದೆ. ಕಾರ್ಯಾಗಾರ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಸೂಕ್ತ ತರಬೇತಿ ನೀಡುವುದು ಸರ್ಕಾರದ ಒಳ್ಳೆಯ ಕ್ರಮವಾಗಿದೆ. ಇದರ ಸದುಪಯೋಗ ಮಾಡಿಕೊಂಡು ಸದಸ್ಯರು ಉತ್ತಮ ಆಡಳಿತ ನಡೆಸಲಿ. ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಯಬೇಕಾದ ವಿಚಾರವನ್ನು ಮನದಟ್ಟು ಮಾಡಿಕೊಂಡು ಅದನ್ನು ತಮ್ಮ ಪಂಚಾಯಿತಿಯಲ್ಲಿ ಅಳವಡಿಸಿ ಸಾರ್ವಜನಿಕ ಸೇವೆ ಮಾಡಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ 34 ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಓಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಾಗಾರದಲ್ಲಿ ತಾಪಂ ಆಡಳಿತಾಧಿಕಾರಿ ಡಿ.ಆರ್.ಪುಷ್ಪ, ಇಓ ಶಿವಪ್ರಕಾಶ್, ತಾಲ್ಲೂಕು ಯೋಜನಾಧಿಕಾರಿ ಜಗನ್ನಾಥಗೌಡ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ರಂಗನಾಥ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ, ಕೃಷಿ ಸಹಾಯಕ ನಿರ್ದೇಶಕ ಜಗನ್ನಾಥಗೌಡ, ಪಂಚಾಯತ್ ರಾಜ್ ಎಇಇ ಚಂದ್ರಶೇಖರ್, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ನಟರಾಜ್, ಲೋಕೋಪಯೋಗಿ ಇಲಾಖೆ ಎಇಇ ಯೋಗೀಶ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಮೇಘನಾ ಇತರ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯಿತಿ ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿದ್ದರು.