ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಂ.ಎನ್.ಕೋಟೆ 3 ವಾರ್ಡ್ ಸದಸ್ಯರಾದ ಸಿದ್ದಗಂಗಮ್ಮ ಕಲ್ಲೇಶ್ ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಆರತಿ.ಬಿ ನಡೆಸಿಕೊಟ್ಟರು. ಎಸ್ಸಿ ಮಹಿಳೆ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಭಾಗ್ಯಮ್ಮ ಸಲ್ಲಿಸಿದ್ದ ರಾಜೀನಾಮೆ ಹಿನ್ನಲೆ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಸಲಾಗಿ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಿದ್ಧಗಂಗಮ್ಮ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ನೂತನ ಉಪಾಧ್ಯಕ್ಷೆ ಸಿದ್ದಗಂಗಮ್ಮ ಮಾತನಾಡಿ ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಮೂಲಭೂತ ಸವಲತ್ತುಗಳಾದ ನೀರು, ರಸ್ತೆ, ಚರಂಡಿ, ವಿದ್ಯುತ್ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಿ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಕೆಲಸ ಮಾಡುತ್ತೇನೆ. ಶಾಸಕ ವಾಸಣ್ಣ ಅವರ ಮಾರ್ಗದರ್ಶನದಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಪಂಚಾಯಿತಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಎಂ.ಎನ್.ಕೋಟೆ ಮಾದರಿ ಗ್ರಾಮ ಪಂಚಾಯಿತಿಯಾಗಿ ಗುರುತಿಸುವ ಕೆಲಸ ಎಲ್ಲಾ ಸದಸ್ಯರ ಜೊತೆ ಸೇರಿ ನಡೆಸುತ್ತೇವೆ. ಅಭಿವೃದ್ದಿ ಕೆಲಸಗಳಿಗೆ ಪಕ್ಷಾತೀತ ನಿಲುವು ತಾಳಿ ಎಲ್ಲಾ ಜನ ಪ್ರತಿನಿಧಿಗಳ ಭೇಟಿ ಮಾಡಿ ಸವಲತ್ತು ತರುವ ಕೆಲಸ ಮಾಡುತ್ತೇವೆ. ಸದಸ್ಯರ ಜೊತೆ ಅಭಿವೃದ್ದಿ ಪಡಿಸಲು ಉಳಿದ ನಾಲ್ಕೈದು ತಿಂಗಳು ನಿರಂತರ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಪಂ ಅಧ್ಯಕ್ಷ ನರಸಯ್ಯ, ಸದಸ್ಯರಾದ ದಿಲೀಪ್, ರವೀಶ್, ಉಮಾ, ದಲಿತ ಮುಖಂಡರಾದ ಜಗನ್ನಾಥ್, ಈಶ್ವರಯ್ಯ, ಕಡಬ ಶಂಕರ್, ಕಲ್ಲೂರು ರವಿಕುಮಾರ್, ಕುಂದರನಹಳ್ಳಿ ನಟರಾಜ್, ಹೊಸಹಳ್ಳಿ ಮಹೇಶ್, ಗ್ಯಾರಹಳ್ಳಿ ಯೋಗೀಶ್, ಬಸವರಾಜ್, ನಾಗಭೂಷಣ್, ಪಿಡಿಓ ಕೃಷ್ಣಮೂರ್ತಿ ಇತರರು ಅಭಿನಂದನೆ ಸಲ್ಲಿಸಿದರು.