ನನ್ನ ಜಮೀನಿಗೆ ಹಾಗೂ ಮನೆಗೆ ಹೋಗಲು ದುರುದ್ದೇಶದಿಂದ ರಸ್ತೆ ತಡೆದು ತೊಂದರೆ ನೀಡುತ್ತಿದ್ದು, ನಕಾಶೆಯಲ್ಲಿರುವ ರಸ್ತೆ ಬಿಡಿಸಿಕೊಡಲು ಅರ್ಜಿ ಸಲ್ಲಿಸಿ ಕೇಳಿದಾಗ ತಾಲ್ಲೂಕು ಆಡಳಿತ ವಿಳಂಬ ಅನುಸರಿಸುತ್ತಿದ್ದು ಸಿನಿಯಾರಿಟಿ ಕಾರಣ ನೀಡಿ ನಮ್ಮ ಮನೆಗೆ ಹೋಗಲು ಅಡ್ಡಿಪಡಿಸಿದವರ ಪರ ಪರೋಕ್ಷವಾಗಿ ನಿಂತಂತೆ ಕಾಣುತ್ತಿದೆ ಎಂದು ವಕೀಲ ಎಚ್.ಜಿ.ನವೀನ್ ಕುಮಾರ್ ನೇರ ಆರೋಪ ಮಾಡಿದರು.
ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ತಾಲ್ಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂಬರ್ 88/2, 105/2, 41/2 ರ ಜಮೀನು ಖರೀದಿ ಮಾಡಿದ ನನಗೆ ಸುಖಾಸುಮ್ಮನೆ ಕೆಲ ಪ್ರಭಾವಿಗಳು ತಮಗೆ ಸಿಗದ ಈ ಜಮೀನು ಬೆಂಗಳೂರಿನಿಂದ ಖರೀದಿ ಮಾಡಿದ್ದಾರೆ ಎಂದು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ನಕಾಶೆಯಲ್ಲಿ ಸರ್ವೇ ನಂಬರ್ 47/2 ರಲ್ಲಿ ಇರುವ ನನ್ನ ಮನೆಗೆ ರಸ್ತೆ ಓಡಾಡಲು ಅಡ್ಡಿಪಡಿಸಿದ್ದಾರೆ. ನಕಾಶೆಯಲ್ಲಿ ಇರುವ ರಸ್ತೆಯನ್ನು ಹಳ್ಳ ತೆಗೆದು ಮುಚ್ಚಿದ್ದಾರೆ. ಮತ್ತೊಂದು ರಸ್ತೆ ನರೇಗಾ ಯೋಜನೆಯಲ್ಲಿ ನಿರ್ಮಿಸಿದ್ದರೂ ಅದನ್ನು ಮಣ್ಣು ಜಲ್ಲಿ ಸುರಿದು ಅಡ್ಡಿಪಡಿಸಿದ್ದಾರೆ. ಎರಡು ಬಾರಿ ಅರ್ಜಿ ನೀಡಿದರೂ ತಹಶೀಲ್ದಾರ್ ಗಣನೆಗೆ ತೆಗೆದುಕೊಂಡಿಲ್ಲ. ಸಿನಿಯಾರ್ಟಿ ಪ್ರಕಾರ ಒಂದು ಅಥವಾ ಎರಡು ತಿಂಗಳು ಕಳೆದರೂ ನನ್ನ ಮನೆಗೆ ರಸ್ತೆ ಇಲ್ಲವಾಗುತ್ತದೆ. ಊರಿನಲ್ಲಿ ಸಂಘರ್ಷ ಬೆಳೆಯದಂತೆ ತಾಲ್ಲೂಕು ಆಡಳಿತ ಮಾಡಬೇಕಾದ ಕೆಲಸ ಮಾಡದೆ ಪ್ರಭಾವಿಗಳ ಪರ ವಹಿಸಿ ನಮ್ಮ ಅರ್ಜಿ ನಿರ್ಲಕ್ಷ್ಯ ತೋರುತ್ತಾ ಹೀಗೆ ಮುಂದುವರೆದಲ್ಲಿ ತಾಲ್ಲೂಕು ಕಚೇರಿ ಮುಂದೆ ನಾನು ನನ್ನ ಬಾಣಂತಿ ಪತ್ನಿ, ಸಣ್ಣ ಮಗುವಿನ ಜೊತೆ ಧರಣಿ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.