69 ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿತರಣೆಗೆ ಮುನ್ನ ನಿಗದಿತ 9 ವಿವಿಧ ಕ್ಷೇತ್ರದಿಂದ ಅರ್ಹ ಪುರಸ್ಕೃತರ ಆಯ್ಕೆಗೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿ ರಚನೆ ಮಾಡಿದ್ದು ಅರ್ಹ ಗಣ್ಯರು ಇದೇ ತಿಂಗಳ 25 ರ ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಲು ತಹಶೀಲ್ದಾರ್ ಬಿ.ಆರತಿ ಮನವಿ ಮಾಡಿದರು.
ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಅರ್ಜಿದಾರರು ತಮ್ಮ ಸಾಧನೆಯ ಕಿರು ಹೊತ್ತಿಗೆಯೊಂದಿಗೆ ಅರ್ಜಿಯನ್ನು ತಾಲ್ಲೂಕು ಪಂಚಾಯಿತಿ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ಹರೀಶ್ ಅವರಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು ಎಂದು ತಿಳಿಸಿದರು.
ಪ್ರತಿವರ್ಷದಂತೆ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಗುವುದು. ಶಿಕ್ಷಣ, ಕೃಷಿ, ಪರಿಸರ, ವೈದ್ಯಕೀಯ, ರಂಗಭೂಮಿ, ಸಾಹಿತ್ಯ, ಜನಪದ, ಸಮಾಜ ಸೇವೆ, ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರ ಆಯ್ಕೆಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯ ಸಮಿತಿ ರಚಿಸಲಾಗಿದೆ. ಕಸಾಪ ತಾಲ್ಲೂಕು ಅಧ್ಯಕ್ಷರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆರಕ್ಷಕ ವೃತ್ತ ನಿರೀಕ್ಷಕರು, ಡಿಗ್ರಿ ಕಾಲೇಜು ಪ್ರಾಂಶುಪಾಲರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ತಾಲ್ಲೂಕು ವೈದ್ಯಾಧಿಕಾರಿಗಳು ಹಾಗೂ ಪತ್ರಿಕಾ ಸಂಘದಿಂದ ಗಂಗಾಧರಸ್ವಾಮಿ, ಕನ್ನಡ ಪರ ಸಂಘಗಳಿಂದ ಜಿ.ಎಸ್.ಮಂಜುನಾಥ್ ಹಾಗೂ ಎಚ್.ಡಿ.ಯಲ್ಲಪ್ಪ ಸಮಿತಿಯಲ್ಲಿದ್ದಾರೆ. ಅರ್ಜಿಯನ್ನು ಪರಿಶೀಲಿಸಿ ಅರ್ಹ ಸಾಧಕರ ಪಟ್ಟಿ ತಯಾರಿಸಿ ಅಂತಿಮ ಗೊಳಿಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಪಂ ಇಓ ಶಿವಪ್ರಕಾಶ್, ಬಿಇಓ ನಟರಾಜು, ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್ ಇದ್ದರು.
