ದಿಢೀರ್ ಬಿರುಗಾಳಿ ಬೀಸಿ ಮಳೆಯು ಬಿದ್ದು ಗಾಳಿಯ ರಭಸಕ್ಕೆ ನೂರಾರು ಅಡಿಕೆ, ತೆಂಗು, ಮಾವು, ಬಾಳೆಗಿಡಗಳು ಧರೆಗುರುಳಿದರಲ್ಲದೆ ಮರಗಳು ವಿದ್ಯುತ್ ಕಂಬ ತಂತಿಯ ಮೇಲೆ ಬಿದ್ದ ಹಿನ್ನಲೆ ಶುಕ್ರವಾರ ರಾತ್ರಿ ಪೂರಾ ಕೆಲ ಗ್ರಾಮಗಳಲ್ಲಿ ಕಗ್ಗತ್ತಲು ಆವರಿಸಿತ್ತು.
ನಿಟ್ಟೂರು, ಬಾಗೂರು, ಜಿ.ಅರಿವೇಸಂದ್ರ, ಹೇರೂರು ಮಾರ್ಗವಾಗಿ ಬೀಸಿದ ಬಿರುಗಾಳಿಗೆ ತೆಂಗು, ಅಡಿಕೆಮರಗಳು ಕ್ಷಣಾರ್ಧದಲ್ಲಿ ಧರೆಗುರುಳಿವೆ. ಈ ಜೊತೆಗೆ ಮಾವು ಬಾಳೆ ಕೂಡಾ ಮಣ್ಣು ಪಾಲಾಗಿದೆ. ಗಾಳಿಯ ರಭಸಕ್ಕೆ ಜಿ. ಅರಿವೇಸಂದ್ರ ಗ್ರಾಮದ 5 ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಕೆಲ ಮನೆಗಳ ಮೇಲೆ ತೆಂಗಿನಮರ ಬಿದ್ದು ಮನೆ ಭಾಗಶಃ ಹಾನಿಯಾಗಿದೆ. ವಿದ್ಯುತ್ ಕಂಬ ಧರೆಗುರುಳಿವೆ. ತಂತಿ ಮೇಲೆ ಬಿದ್ದ ಮರಗಳನ್ನು ತೆರೆವು ಗೊಳಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುವ ಅನಿವಾರ್ಯವಾಯಿತು.

ಸುಂಟರಗಾಳಿ ಸುಳಿಗೆ ಸಿಲುಕಿದ ಸಿಮೆಂಟ್ ಶೀಟ್, ತಗಡಿನ ಶೀಟ್ ಹಾರಿ ಬಿದ್ದಿವೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನ ವಿಚಾರ. ನಿಟ್ಟೂರು ಹೋಬಳಿ ಬಾಗೂರು ಗ್ರಾಮದಲ್ಲಿ ಬಹುತೇಕ ಮನೆಗಳ ಹಾನಿ ಉಂಟಾಗಿದೆ. ಅಂದಾಜು 35 ಮನೆಗಳು ವಾಸಕ್ಕೆ ಯೋಗ್ಯವಲ್ಲ ಎಂಬಂತೇ ದುಸ್ಥಿತಿ ಗಾಳಿ ತಂದಿದೆ. ಈ ಜೊತೆಗೆ ಕಂಬಗಳ ಮೇಲೆ ಬಿದ್ದ ಮರಗಳ ತೆರವಿಗೆ ಸಮಯವಿಲ್ಲದೆ ಸಂಜೆಯಿಂದ ರಾತ್ರಿ ಪೂರಾ ಕಗ್ಗತ್ತಲಲ್ಲಿ ಬದುಕು ನಡೆಸಿದ್ದಾರೆ. ದೇವಾಲಯ ಸೇರಿದಂತೆ ಗ್ರಾಮದ ಅರ್ಧ ಭಾಗದ ಮನೆಗಳು ಹಾನಿಯಾಗಿವೆ. ಈ ಜೊತೆಗೆ ಚನ್ನಶೆಟ್ಟಿಹಳ್ಳಿ, ಹೇರೂರು, ಅಮ್ಮನಘಟ್ಟ ಅರಣ್ಯ ಪ್ರದೇಶ ಎಲ್ಲವೂ ತಲ್ಲಣಗೊಳಿಸಿದ ಬಿರುಗಾಳಿ ರೈತರಿಗೆ ತೀವ್ರ ನಷ್ಟ ತಂದಿದೆ. ಸಂಬಂಧಪಟ್ಟ ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳ ಮಹಜರು ನಡೆಸಿ ಸೂಕ್ತ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು ಎಂದು ಸ್ಥಳೀಯ ಮುಖಂಡರು ಆಗ್ರಹಿಸಿದ್ದಾರೆ.

ಜಿ. ಅರಿವೇಸಂದ್ರ ಭಾಗದಲ್ಲಿ ಮಳೆ ಜೊತೆ ಬೀಸಿದ ಬಿರುಗಾಳಿಗೆ ಸುಮಾರು 300 ಅಡಿಕೆಮರಗಳು, 80 ತೆಂಗಿನಮರಗಳು, 10 ಮಾವು, 250 ಬಾಲೆಗಿಡಗಳು ಧರೆಗುರುಳಿವೆ. ಸಿದ್ದರಾಮಯ್ಯ ಅವರ ತೋಟದಲ್ಲಿ 50 ಅಡಿಕೆ, 20 ತೆಂಗಿನಮರಗಳು, ಮಲ್ಲಿಕಾರ್ಜುನಯ್ಯ ಅವರ 30 ಅಡಿಕೆ, ರಾಮಚಂದ್ರಯ್ಯ ತೋಟದಲ್ಲಿ 35 ಅಡಿಕೆ, ಗಂಗಣ್ಣ ಅವರ 30 ಅಡಿಕೆ, 20 ತೆಂಗು ಹೀಗೆ 25 ಮಂದಿಯ ರೈತರ ಅಡಿಕೆ ತೆಂಗು ನಷ್ಟಕ್ಕೆ ಸಿಲುಕಿವೆ. ಸ್ಥಳಕ್ಕೆ ಕಂದಾಯ ಹಾಗೂ ತೋಟಗಾರಿಕೆ ಸಿಬ್ಬಂದಿ ಪರಿಶೀಲನೆ ಮಾಡಿದ್ದಾರೆ.

ಹತ್ತಾರು ವರ್ಷದಿಂದ ಕಷ್ಟಪಟ್ಟು ಸಾಲ ಮಾಡಿ ಬೆಳೆದ ತೆಂಗು ಅಡಿಕೆಮರಗಳು ಏಕಾಏಕಿ ನೆಲಕ್ಕುರುಳಿದ ದೃಶ್ಯ ಸಾಕಿ ಸಲಹಿದ ರೈತರಿಗೆ ತೀವ್ರ ಆಘಾತ ತಂದಿದೆ. ಫಲ ಬಿಡುವ ಮರಗಳು ಮಣ್ಣುಪಾಲಾದರೆ ಅವರ ನಷ್ಟ ತುಂಬುವವರು ಯಾರು. ಈ ಹಿನ್ನಲೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರೈತರ ನಷ್ಟ ಪಟ್ಟಿ ಮಾಡಿ ಸರ್ಕಾರದ ಮೂಲಕ ಪರಿಹಾರ ನೀಡುವಂತೆ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಒತ್ತಾಯಿಸಿದರು.