ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ವ್ಯಾಪ್ತಿಯ ತ್ಯಾಗಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಟಿ.ಎನ್.ಓಂಕಾರ ಪ್ರಸಾದ್ ಅಧ್ಯಕ್ಷರಾಗಿ ಹಾಗೂ ನಳಿನಾ ಪ್ರಕಾಶ್ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಗುಬ್ಬಿ ತಹಶೀಲ್ದಾರ್ ಬಿ.ಆರತಿಯವರು ನಡೆಸಿಕೊಟ್ಟರು. ಈ ಹಿಂದೆ ಅಧ್ಯಕ್ಷರಾಗಿದ್ದ ಶಿವಕುಮಾರಸ್ವಾಮಿ ಹಾಗೂ ಉಪಾಧ್ಯಕ್ಷೆ ವಸಂತಕುಮಾರಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರೆವಾದ ಸಾಮಾನ್ಯ ಮೀಸಲಿನ ಎರಡೂ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.
ಚುನಾವಣಾ ಪ್ರಕ್ರಿಯೆ ಆರಂಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ತ್ಯಾಗಟೂರು ಸದಸ್ಯ ಟಿ.ಎನ್.ಓಂಕಾರ ಪ್ರಸಾದ್ ಹಾಗೂ ಕೋಡಿ ನಾಗೇನಹಳ್ಳಿ ಸದಸ್ಯ ಮಂಜುನಾಥ್ ಅವರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಳಿನಾ ಪ್ರಕಾಶ್ ಹಾಗೂ ಕೋಡಿ ನಾಗೇನಹಳ್ಳಿ ಸದಸ್ಯೆ ಜಯಮಾಲಾ ನಾಮಪತ್ರ ಸಲ್ಲಿಸಿದ್ದರು.
ಮತ ಚಲಾವಣೆ ನಂತರ ಓಂಕಾರ ಪ್ರಸಾದ್ ಅವರಿಗೆ 11 ಮತಗಳು ಲಭಿಸಿ ಅಧ್ಯಕ್ಷರಾಗಿ ಚುನಾಯಿತರಾದರು. ಪ್ರತಿಸ್ಪರ್ಧಿ ಮಂಜುನಾಥ್ 8 ಮತಗಳನ್ನು ಪಡೆದು ಮೂರು ಮತಗಳ ಅಂತರದಿಂದ ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನದಲ್ಲಿ ಸಹ ನಳಿನಾ ಪ್ರಕಾಶ್ 11 ಮತಗಳನ್ನು ಪಡೆದರು. ಪ್ರತಿಸ್ಪರ್ಧಿ ಜಯಮಾಲಾ 8 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ನೂತನ ಅಧ್ಯಕ್ಷ ಟಿ.ಎನ್.ಓಂಕಾರ ಪ್ರಸಾದ್ ಸುದ್ದಿಗಾರರ ಜೊತೆ ಮಾತನಾಡಿ, “ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ, ಸರ್ಕಾರದ ಸವಲತ್ತು ತರಲು ಎಲ್ಲ ಸದಸ್ಯರ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ. ಹೊಸ ಯೋಜನೆ ಜಾರಿ ಮೂಲಕ ಮಾದರಿ ಗ್ರಾಮ ಪಂಚಾಯಿತಿಯಾಗಿ ಮಾರ್ಪಾಡು ಮಾಡಲು ಶ್ರಮಿಸುತ್ತೇನೆ” ಎಂದು ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ಗದಗ | ನೀಟ್ ರದ್ದು ಸೇರಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಎಸ್‌ಎಫ್‌ಐಯಿಂದ ಪ್ರತಿಭಟನೆ
ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಟಿ.ಎನ್.ಪರಮೇಶ್, ಮಲ್ಲಿಕಾರ್ಜುನಯ್ಯ, ನಂಜೇಗೌಡ, ಯತೀಶ್, ನಾಗರಾಜು, ಮಲ್ಲಿಕಾರ್ಜುನ್, ಪಿಡಿಓ ವನಜಾಕ್ಷಿ, ಚುನಾವಣಾ ಸಿಬ್ಬಂದಿ ಗುರುಪ್ರಸಾದ್ ಇತರರು ಇದ್ದರು.
