ಕೆ.ಜಿ.ಟೆಂಪಲ್ ನತ್ತ ಬರುತ್ತಿದ್ದ ಟೊಯೊಟಾ ಕಂಪನಿಯ ಇಟಿಯೋಸ್ ಕಾರು ಜಿ.ಹೊಸಹಳ್ಳಿ ಬಳಿ ಪಲ್ಟಿಯಾಗಿ ಅಪಘಾತ ಸಂಭವಿಸಿ ಯುವಕ ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಜೀಗನಹಳ್ಳಿ ಗ್ರಾಮದ ಯುವಕ ರಾಕೇಶ್(32) ವ್ಯಕ್ತಿ ಅಪಘಾತದಿಂದ ಮೃತಪಟ್ಟ ದುರ್ದೈವಿ ಎಂದು ತಿಳಿದುಬಂದಿದೆ.
ಕಳೆದ ಮಂಗಳವಾರ ಸ್ನೇಹಿತರೊಂದಿಗೆ ಕಾರಿನಲ್ಲಿ ತುಮಕೂರಿಗೆ ತೆರಳಿ ಮರಳಿ ಬರುವಾಗ ತಡರಾತ್ರಿ 12 ರ ಸಮಯದಲ್ಲಿ ಜಿ.ಹೊಸಹಳ್ಳಿ ಬಳಿ ಕಾರು ನಿಯಂತ್ರಣ ತಪ್ಪಿ ಪಕ್ಕದ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ತಂತಿಗೆ ಗುದ್ದಿ ಕಾರು ಪಲ್ಟಿಯಾಗಿ ಚಾಲಕ ರಾಕೇಶ್ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಅಪಘಾತ ಸಂಭವಿಸಿದ ಸ್ಥಳದ ಬಳಿ ಘಟನೆ ಬಗ್ಗೆ ಕೆಲ ಅನುಮಾನದ ಸುತ್ತ ಗುಬ್ಬಿ ಪೊಲೀಸರು ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಶ್ವಾನದಳ ಸೇರಿದಂತೆ ಬೆರಳಚ್ಚು ತಜ್ಞರು ಆಗಮಿಸಿ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಿದ್ದು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಶವಾಗಾರಕ್ಕೆ ಕೊಂಡೊಯ್ದು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಅಪಘಾತ ನಡೆದ ಸ್ಥಳದಲ್ಲಿ ಜಿಲ್ಲಾ ಪೊಲೀಸ್ ಅಪರ ವರಿಷ್ಠಾಧಿಕಾರಿ ಮರಿಯಪ್ಪ, ಶಿರಾ ಡಿವೈಎಸ್ ಪಿ ಶೇಖರ್, ಸಿಪಿಐ ಗೋಪಿನಾಥ್, ಗುಬ್ಬಿ ಪಿಎಸ್ಐ ಸುನಿಲ್ ಕುಮಾರ್, ಸಿ.ಎಸ್.ಪುರ ಪಿಎಸ್ಐ ಶಿವಕುಮಾರ್ ಇದ್ದರು.
