ಉನ್ನತ ಶಿಕ್ಷಣ ಪಡೆದು, ಒಳ್ಳೆಯ ಉದಯೋಗ ಪಡೆಯಬೇಕೆಂದು ವಿಶ್ವವಿದ್ಯಾಲಯದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು, ತಮ್ಮ ಅಂಕಪಟ್ಟಿಗಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ಆಡಳಿತವು ಪದವಿ ಮುಗಿಸಿದ ವಿದ್ಯಾರ್ಥಿಗೆ ಅಂಕಪಟ್ಟಿ ನೀಡದೆ, ಸತಾಯಿಸುತ್ತಿದೆ. ತಮ್ಮ ಭವಿಷ್ಯದೊಂದಿಗೆ ವಿಶ್ವವಿದ್ಯಾಲಯ ಚೆಲ್ಲಾಟವಾಡುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪದವಿ ವ್ಯಾಸಂಗ ಮುಗಿದು ಎರಡು-ಮೂರು ವರ್ಷಗಳು ಕಳೆದರು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಅಂಕಪಟ್ಟಿ ನೀಡುತ್ತಿಲ್ಲ. ಕೊರೊನಾ ಸಂದರ್ಭದಲ್ಲಿ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ನೇರವಾಗಿ ತೇರ್ಗಡೆ ಮಾಡಲಾಗಿತ್ತು. ಆ ಸೆಮಿಸ್ಟರ್‌ನ ಅಂಕಪಟ್ಟಿ ಬೇಕಾದ ದಾಖಲಾತಿಗಳನ್ನು ಸಲ್ಲಿಸಿದ್ದೇವೆ. ಆದರೂ, ಅಧಿಕಾರಿಗಳು ಸರಿಯಾಗಿ ಪ್ರತಿಕ್ರಿಯೆ ನೀಡದೆ ದಿನದೂಡುತ್ತಿದ್ದಾರೆ. ದಿನನಿತ್ಯ ವಿದ್ಯಾರ್ಥಿಗಳು ತಮ್ಮೂರಿಗೂ ವಿಶ್ವವಿದ್ಯಾಲಯಕ್ಕೂ ಅಲೆದಾಡುವಂತ ಸ್ಥಿತಿ ಎದುರಾಗಿದೆ.
ಅನೇಕ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ದೊರೆಯದ ಕಾರಣ ವಿದ್ಯಾರ್ಥಿಗಳು ತಮ್ಮ ಮುಂದಿನ ವ್ಯಾಸಂಗ ಮಾಡಲು ಸಾಧ್ಯವಾಗುತ್ತಿಲ್ಲ. ಪದವಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲೂ ಆಗುತ್ತಿಲ್ಲ. ಸಮಯ ವಯಸ್ಸು ವ್ಯರ್ಥವಾಗುತ್ತಿದೆ. ಕಳೆದ ಬಾರಿ ಬಿಎಡ್ ತರಬೇತಿಗೆ ಪ್ರವೇಶ ಪಡೆಯಲು ದಾಖಲಾತಿ ಪರಿಶೀಲನೆ ನಡೆಯುತ್ತಿತ್ತು. ಆ ವೇಳೆ ವಿದ್ಯಾರ್ಥಿಗಳ ಪದವಿ ಪರೀಕ್ಷೆಗಳ ಮೂಲ ಅಂಕಪಟ್ಟಿಗಳು ಅವಶ್ಯಕವಾಗಿದ್ದವು. ಆದರೆ, ವಿಶ್ವವಿದ್ಯಾಲಯ 4ನೇ ಸೆಮಿಸ್ಟರ್ ಅಂಕಪಟ್ಟಿ ಮತ್ತು 6ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸುವಲ್ಲಿ ವಿಳಂಬ ಮಾಡಿತ್ತು. ಪರಿಣಾಮ ವಿದ್ಯಾರ್ಥಿಗಳು ಬಿಎಡ್‌ಗೆ ಅರ್ಹತೆ ಪಡೆದಿದ್ದರೂ, ದಾಖಲಾತಿ ಪಡೆಯಲಾಗದೆ ಅವಕಾಶ ವಂಚಿತರಾದರು ಎಂದು ಕೆಲವು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಈದಿನ.ಕಾಮ್‌ನೊಂದಿಗೆ ವಿದ್ಯಾರ್ಥಿಗಳು ಮಾತನಾಡಿ, “ಕೋವಿಡ್ ಸಂದರ್ಭದಲ್ಲಿ ನಮ್ಮನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಿದ್ದಾರೆ. ಈಗ ನಮ್ಮ ಪದವಿ ಮುಗಿದರೂ ನಮಗೆ ಅಂಕಪಟ್ಟಿ ನೀಡುತ್ತಿಲ್ಲ. ಇದರಿಂದ ಮುಂದಿನ ವ್ಯಾಸಂಗ ಮಾಡಲು ಆಗುತ್ತಿಲ್ಲ. ಉದ್ಯೋಗಕ್ಕೂ ಅರ್ಜಿಸಲ್ಲಿಸಲೂ ಆಗುತ್ತಿಲ್ಲ. ನಮ್ಮ ಜೀವನ ಅಂತಂತ್ರವಾಗಿದೆ” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಗುಲ್ಬರ್ಗ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಪ್ರೋ.ಜ್ಯೋತಿ ಧಮಪ್ರಕಾಶ್ ಮಾತನಾಡಿ, “ವಿಶ್ವವಿದ್ಯಾಲಯದ ತಾಂತ್ರಿಕ ದೋಷದಿಂದ ಸಮಸ್ಯೆ ಉಂಟಾಗಿದೆ. ಆದರೆ, ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಎರಡು ರೀತಿಯಲ್ಲಿ ಪ್ರಮೋಟ್ ಮಾಡಲಾಗುತ್ತದೆ. ಒಂದು ವಿದ್ಯಾರ್ಥಿಗಳನ್ನು 4ನೇ ಸೆಮಿಸ್ಟರ್‌ನಿಂದ 5ನೇ ಸೆಮಿಸ್ಟರ್‌ಗೆ ಪ್ರಮೋಟ್ ಮಾಡಬೇಕಾದರೆ, ಅವರು 3ನೇ ಸೆಮಿಸ್ಟರ್ ಪಾಸಾಗಿರಬೇಕು. ಎರಡನೆಯದ್ದು, ಯಾವ ಸೆಮಿಸ್ಟರ್ ಪ್ರಮೋಟ್ ಮಾಡಬೇಕೋ ಆ ಸೆಮಿಸ್ಟರನ ಪರೀಕ್ಷಾ ಶುಲ್ಕವನ್ನು ವಿದ್ಯಾರ್ಥಿಗಳು ಪಾವತಿಸಿರಬೇಕು. ಆದರ ಜೊತೆಗೆ ವಿದ್ಯಾರ್ಥಿಗಳ ಇಂಟರ್ನಲ್ ಮಾರ್ಕ್ಸ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು. ಇಷ್ಟು ದಾಖಲೆಗಳು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ತಕ್ಷಣ ವಿದ್ಯಾರ್ಥಿಗಳ ಅಂಕಪಟ್ಟಿ ನೀಡುತ್ತೇವೆ” ಎಂದು ಹೇಳಿದ್ದಾರೆ.
ಗುಲ್ಬರ್ಗ ವಿಶ್ವವಿದ್ಯಾಲಯ ಒಳಪಟ್ಟ ಪದವಿ ಕಾಲೇಜುಗಳ ಪ್ರಾಂಶುಪಾಲರು ತಮ್ಮ ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಹೆಸರನ್ನು ಪಟ್ಟಿ ಮಾಡಿ, ದಾಖಲೆಗಳ ಸಮೇತ ವಿಶ್ವವಿದ್ಯಾಲಯಕ್ಕೆ ಕಳುಹಿಸಿದರೆ, ನಾವು ಅವರ ಸಮಸ್ಯೆಗಳನ್ನು ತಕ್ಷಣ ಪರಿಹರಿಸುತ್ತೇವೆ. ಆದರೆ, ಅವರು ವಿನಾಕಾರಣ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿ, ನಮಗೂ-ವಿದ್ಯಾರ್ಥಿಗಳಿಗೂ ತೊಂದರೆ ಉಂಟುಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.